ADVERTISEMENT

ಬಿಳಿಗಿರಿ ಬನದಲ್ಲಿ ಗಿರಿ ಕನ್ಯೆಯರ ನೃತ್ಯ

ಮಳೆ, ಬೆಳೆ ಉತ್ತಮವಾಗಲು ಕಾರಣರಾದ ದೇವತೆಗಳಿಗೆ ನೈವೇದ್ಯ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2018, 12:06 IST
Last Updated 28 ಮಾರ್ಚ್ 2018, 12:06 IST
ದೇವಾಲಯದ ಮುಂಭಾಗ ಸತ್ತಿಗೆ ಸೂರಿಪಾನಿ ಇಟ್ಟು ಪೂಜೆ ಸಲ್ಲಿಸಲಾಯಿತು
ದೇವಾಲಯದ ಮುಂಭಾಗ ಸತ್ತಿಗೆ ಸೂರಿಪಾನಿ ಇಟ್ಟು ಪೂಜೆ ಸಲ್ಲಿಸಲಾಯಿತು   

ಯಳಂದೂರು: ಬಿಳಿಗಿರಿರಂಗನಬೆಟ್ಟದ ಪೋಡಿನಲ್ಲಿ ಸೋಮವಾರ ಸಂಭ್ರಮದಿಂದ ರೊಟ್ಟಿ ಹಬ್ಬವನ್ನು ಆಚರಿಸಲಾಯಿತು.ಹೊಸಪೋಡು ಬಳಿ ಸುತ್ತಲಿನ ಹತ್ತಾರು ಹಾಡಿಗಳ ಬುಡಕಟ್ಟು ಜನರು ಸೇರಿ ರೊಟ್ಟಿ ಹಬ್ಬದ ಸಂಭ್ರಮವನ್ನು ಕಳೆಗಟ್ಟಿಸಿದರು. ಕಳೆದ ವರ್ಷ ಮಳೆ ಚೆನ್ನಾಗಿ ಸುರಿದಿದ್ದರಿಂದ ಈ ಬಾರಿ ಬುಡಕಟ್ಟು ಜನರಲ್ಲಿ ಹೊಸ ಹುರುಪು ಮೂಡಿತ್ತು. ಜಾನಪದ ಗೀತೆಗಳಿಗೆ, ಸಾಂಪ್ರದಾಯಿಕ ವಾದ್ಯಗಳಿಗೆ ರಾತ್ರಿ ಪೂರ್ತಿ ನೃತ್ಯ ಮಾಡಿ ಸಂಭ್ರಮಿಸಿದರು.

ಕಳೆ ಕೀಳುವ, ಜಡ್ಡು ಕೆತ್ತುವ ಕೆಲಸದ ನಡುವೆ ಬಿಡುವು ಮಾಡಿಕೊಂಡು ಗೆಣಸು ಮತ್ತು ರಾಗಿ ಸಂಗ್ರಹಿಸಿ ಮಹದೇಶ್ವರ ಗುಡಿಯಲ್ಲಿ ದೇವರಿಗೆ ನೈವೇದ್ಯ ಮಾಡಿ ಹರಕೆಯನ್ನು ಒಪ್ಪಿಸಿದರು.ಬಳಿಕ ನೆಂಟರಿಷ್ಟರೆಲ್ಲಾ ಸೇರಿ ಕೆಂಡದಲ್ಲಿ ರೊಟ್ಟಿ ಸುಟ್ಟು, ಕೊಂಡ ಹಾಯ್ದವರಿಗೆ ಮೊದಲ ಪ್ರಸಾದವನ್ನು ನೀಡುವ ಮೂಲಕ ಸಂಪ್ರದಾಯ ಬದ್ಧವಾಗಿ ಹಬ್ಬವನ್ನು ಆಚರಿಸಿದರು.ಯುಗಾದಿ ಮುಗಿದ ಬಳಿಕ, ಸೋಲಿಗರ ಮಳೆ ನಕ್ಷತ್ರ ‘ರಾಶಿ’ಯಲ್ಲಿ ಹಬ್ಬ ಆಚರಿಸಲಾಗುತ್ತದೆ.

ಮಳೆ, ಬೆಳೆ ಉತ್ತಮವಾಗಲು ಕಾರಣರಾದ ದೇವತೆಗಳನ್ನು ಹೊಸ ರಾಗಿ ಹಬ್ಬದ ಮೂಲಕ ಸ್ವಾಗತಿಸಲಾಗುತ್ತದೆ. ಮುಂಗಾರು ಫಸಲಿನ ಕೊಯ್ಲು ಮುಗಿದ ನಂತರ ಧವಸ ಧಾನ್ಯಗಳನ್ನು ಮೀಸಲು ಇಟ್ಟು ಹಬ್ಬಕ್ಕೆ ಬಳಕೆ ಮಾಡುವ ವಾಡಿಕೆ ಇಲ್ಲಿನ ಮೂಲ ನಿವಾಸಿಗಳದ್ದು.ಹೊಸ ಬಟ್ಟೆ ತೊಟ್ಟ ಗಿರಿವಾಸಿಗಳು ಸೋಮವಾರ ಸಂಜೆಯಿಂದ ಮುತ್ತುಗದ ಎಲೆಗೆ ರಾಗಿ ಹಿಟ್ಟನ್ನು ತಟ್ಟಿ ಕೆಂಡದ ಮೇಲೆ ಹಾಕಿ ಬೇಯಿಸುತ್ತಾರೆ. ತಾಜಾ ಕಾಯಿಪಲ್ಲೆ, ಕುಂಬಳಕಾಯಿ ಗೊಜ್ಜು, ಹಲಸಿನ ಪಲ್ಯ, ಅನ್ನ ಸಾಂಬಾರ್ ಮತ್ತು ಪಾಯಸದ ಅಡುಗೆ ಮಾಡಿ ನೆರೆದ ಮಂದಿಗೆ ಬಡಿಸುತ್ತಾರೆ.ಹರಕೆ ಹೊತ್ತ ಭಕ್ತರು ದೂಪ, ದೀಪ ಹಚ್ಚಿ ನೈವೇದ್ಯ ಮಾಡಿ ಪ್ರಸಾದ ಸ್ವೀಕರಿಸಿದರು. ಗೊಂಬೆಗಲ್ಲು, ಬೇಡುಗುಳಿ, ನಲ್ಲಿಕತ್ರಿ ಮೊದಲಾದ ಐವತ್ತಕ್ಕೂ ಹೆಚ್ಚು ಪೋಡುಗಳಿಂದ ಬಂದಿದ್ದ ಸಾವಿರಾರು ಜನರು ನೆರದಿದ್ದರು. ಸ್ಥಳೀಯ ಗ್ರಾಮಸ್ಥರು ದೇವರ ದರ್ಶನ ಪಡೆದರು. ಮಹದೇಶ್ವರ ಶಿಲಾ ಮೂರ್ತಿಯನ್ನು ಪೂಜಿಸಿ ಮೆರವಣಿಗೆ ಮಾಡಲಾಯಿತು.

ADVERTISEMENT

‘ಬಂಧು ಬಾಂಧವರನ್ನು ಕರೆದು ರಾತ್ರಿ ಪೂರ್ತಿ ಹಾಡು, ಹಸೆ, ಕುಣಿತಗಳ ಮೂಲಕ ಬುಡಕಟ್ಟು ಸಂಸ್ಕೃತಿಯನ್ನು ಆಚರಿಸುತ್ತೇವೆ. ಪುರುಷರ ‘ಗೋರು ಗೋರುಕೊ ಗೋರುಕಾನಾ, ಮಹಿಳೆಯರ ‘ಹಾಡುಕೇ, ಪ್ರಾರ್ಥನೆಯ ಬಗ್ಗೆ ತಿಳಿಸುವ ‘ಓಲಗ’ ಮತ್ತು ಕಗ್ಗದ ವೈವಿಧ್ಯಮಯ ಜಾನಪದ ಕಾರ್ಯಕ್ರಮಗಳನ್ನ ಪ್ರದರ್ಶಿಸುತ್ತಾರೆ. ಪರಿಸರ ಸಂರಕ್ಷಣೆಯ ಕುರಿತು, ಬಿಳಿಗಿರಿರಂಗನಾಥ ಸ್ವಾಮಿಯ ವೈಭವವನ್ನು ಇವು ತಿಳಿಸುತ್ತವೆ’ ಎನ್ನುತ್ತಾರೆ ಹೊಸಪೋಡಿನ ಕೇತಮ್ಮ.

‘ಸಂಜೆ ಮಹಿಳೆಯರು ಮತ್ತು ಮಕ್ಕಳು ನೃತ್ಯ ಮಾಡುತ್ತಾರೆ. ಈ ವೇಳೆ ಯುವಕರು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗೆ ಆಯ್ಕೆ ಮಾಡಿಕೊಂಡ ಯುವತಿಯ ಜೊತೆ ಅವರು ಗುಂಪಿನಿಂದ ಮರೆಯಾಗುತ್ತಾರೆ. ಬಳಿಕ ಅವರಿಗೆ ಗುರು ಹಿರಿಯರ ಸಮ್ಮುಖದಲ್ಲಿ ವಿವಾಹ ಮಾಡಲಾಗುತ್ತದೆ. ಆದರೆ, ಇಂತಹ ಸಂಪ್ರದಾಯಗಳು ಈಗ ಮಹತ್ವ ಕಳೆದುಕೊಳ್ಳುತ್ತಿವೆ’ ಎಂದು ಬುಡಕಟ್ಟು ಸಂಘದ ಕಾರ್ಯದರ್ಶಿ ಮಾದೇಗೌಡ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.