ADVERTISEMENT

ಬೆಟ್ಟದ ಹಾದಿಯಲ್ಲಿ ಗುಂಡಿಗಳದ್ದೇ ಪಾರುಪತ್ಯ!

ಮಲೆ ಮಹದೇಶ್ವರನ ಸನ್ನಿಧಿಗೆ ಹೋಗುವ ರಸ್ತೆ ದುರಾವಸ್ಥೆಯಿಂದ ಕೂಡಿದೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 9:16 IST
Last Updated 26 ಏಪ್ರಿಲ್ 2018, 9:16 IST
ಕೊಳ್ಳೇಗಾಲದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗುವ ರಸ್ತೆಯ ಸ್ಥಿತಿ ಹೀಗಿದೆ
ಕೊಳ್ಳೇಗಾಲದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗುವ ರಸ್ತೆಯ ಸ್ಥಿತಿ ಹೀಗಿದೆ   

ಕೊಳ್ಳೇಗಾಲ: ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ತರುವ ದೇವಾಲಯಗಳಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಹಾಗೂ ಪಕ್ಕದ ತಮಿಳುನಾಡಿನಲ್ಲೂ ಅತಿ ಹೆಚ್ಚು ಭಕ್ತರನ್ನು ಹೊಂದಿರುವ ರಾಜ್ಯದ ಸುಪ್ರಸಿದ್ದ ಪುಣ್ಯಕ್ಷೇತ್ರ ಎನಿಸಿದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ರಸ್ತೆ ತೀರಾ ಹದಗೆಟ್ಟಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಮಲೆ ಮಹದೇಶ್ವರ ಬೆಟ್ಟ ಸುಪ್ರಸಿದ್ದ ಪುಣ್ಯಕ್ಷೇತ್ರ. ಇಲ್ಲಿ ನೆಲೆನಿಂತಿರುವ ಮಹದೇಶ್ವರ ದಕ್ಷಿಣ ಕರ್ನಾಟಕದ ಬಹುತೇಕ ಜನರ ಆರಾಧ್ಯ ದೈವವೂ ಹೌದು. ಕರ್ನಾಟಕ-ತಮಿಳುನಾಡು ಎರಡು ರಾಜ್ಯಗಳಲ್ಲೂ ಅತಿ ಹೆಚ್ಚು ಭಕ್ತರನ್ನು ಈ ಕ್ಷೇತ್ರ ಹೊಂದಿದೆ. ಇಲ್ಲಿಗೆ ಪ್ರತಿ ವರ್ಷ ಶಿವರಾತ್ರಿ, ಯುಗಾದಿ, ಗೌರಿ ಹಬ್ಬ, ಮಹಾಲಯ ಅಮಾವಾಸ್ಯೆ, ದೀಪಾವಳಿ, ಹಾಗೂ ಕಾರ್ತೀಕ ಮಾಸದಲ್ಲಿ ದೊಡ್ಡ-ದೊಡ್ಡ ಜಾತ್ರೆಗಳೇ ನಡೆಯುತ್ತವೆ. ಅಲ್ಲದೆ, ಪ್ರತಿ ಅಮಾವಾಸ್ಯೆಗೂ ಎಣ್ಣೆ ಮಜ್ಜನ ಸೇವೆ ನಡೆಯುತ್ತದೆ.

ಇಷ್ಟೊಂದು ಜನರನ್ನು ಸೆಳೆಯುವ ಶ್ರೀ ಕ್ಷೇತ್ರಕ್ಕೆ ಕೊಳ್ಳೇಗಾಲದಿಂದ ಹೋಗುವ ರಸ್ತೆ ಸುಮಾರು 80 ಕಿ.ಮಿವರೆಗೂ ತೀರಾ ಹದಗೆಟ್ಟಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ ರಾಜ್ಯ ಹೆದ್ದಾರಿ 79ಕ್ಕೆ ಬರುವ ಈ ರಸ್ತೆ ಮಲೆ ಮಹದೇಶ್ವರ ಬೆಟ್ಟವಲ್ಲದೆ ತಾಲ್ಲೂಕು ಕೇಂದ್ರದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆ ಮಧುವನಹಳ್ಳಿಯಿಂದ ಹನೂರಿನವರೆಗೆ ಕಳೆದ ಒಂದೂವರೆ ವರ್ಷಗಳಿಂದ ಡಾಂಬರೆಲ್ಲಾ ಕಿತ್ತುಹೋಗಿ ಗುಂಡಿ ಬಿದ್ದಿದೆ. ಆದರೆ, ಇದುವರೆಗೂ ದುರಸ್ತಿ ಮಾಡುವುದಿರಲಿ ಇತ್ತ ಗಮನ ಹರಿಸುವ ಗೋಜಿಗೂ ಹೋಗಿಲ್ಲ. ಬದಲಿಗೆ ಒಂದು ಬಾರಿ ತೇಪೆ ಹಾಕಲಾಗಿತ್ತು. ನಂತರ, ಇತ್ತೀಚೆಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹನೂರು ಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಬಂದಿದ್ದ ವೇಳೆ ಗುಂಡಿಗಳಿಗೆ ಮಣ್ಣು ಹಾಕಿ ಮುಚ್ಚಲಾಗಿತ್ತು. ಅದೆಲ್ಲಾ ಈಗಾಗಲೇ ಕಿತ್ತು ಹೋಗಿ ಮತ್ತೆ ಗುಂಡಿ ಬಿದ್ದಿವೆ.

ADVERTISEMENT

2014 ರಲ್ಲೆ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದ್ದು ಅದಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೆ ಅಧ್ಯಕ್ಷರು ಹಾಗೂ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಕಾರ್ಯದರ್ಶಿಗಳು. ಆದರೂ ರಸ್ತೆ ದುರಸ್ತಿ ಕಡೆಗೆ ಮಾತ್ರ ಯಾರೂ ಗಮನ ಹರಿಸಿಲ್ಲ.

**
ನಿಜಕ್ಕೂ ತುಂಬಾ ನೋವಾಗುವ ಸಂಗತಿ ಇದ್ದಾಗಿದೆ. ಈ ರಸ್ತೆಯನ್ನು ಹಾಗೂ ಈ ರಸ್ತೆಯಲ್ಲಿ ಸಂಚರಿಸುವ ಭಕ್ತರನ್ನು ಆ ಮಲೆ ಮಹದೇವನೇ ಕಾಪಾಡಬೇಕು
– ಸಂಜಯ, ಕನಕಪುರ ಪ್ರವಾಸಿಗ.

ಅವಿನ್ ಪ್ರಕಾಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.