ADVERTISEMENT

ಮಕ್ಕಳ ಹಕ್ಕು ಉಲ್ಲಂಘನೆ ಸಲ್ಲ: ಶಂಕರಲಿಂಗೇಗೌಡ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 9:15 IST
Last Updated 20 ಮಾರ್ಚ್ 2012, 9:15 IST

ಚಾಮರಾಜನಗರ: `ಮಕ್ಕಳ ಹಕ್ಕುಗಳ ಉಲ್ಲಂಘನೆ ಸಲ್ಲದು. ಪೋಷಕರಿಗೆ ಚಿಣ್ಣರ ಹಕ್ಕುಗಳ ಬಗ್ಗೆ ತಿಳಿವಳಿಕೆ ಮೂಡಿಸಬೇಕಿದೆ~ ಎಂದು ಕೇಂದ್ರೀಯ ಕಾರ್ಮಿಕ ಶಿಕ್ಷಣ ಮಂಡಳಿಯ ಶಿಕ್ಷಣಾಧಿಕಾರಿ ಶಂಕರಲಿಂಗೇಗೌಡ ಹೇಳಿದರು.

ನಗರದಲ್ಲಿ ಸೋಮವಾರ ಕೇಂದ್ರೀಯ ಕಾರ್ಮಿಕ ಶಿಕ್ಷಣ ಮಂಡಳಿ, ಆದಿವಾಸಿ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ `ಬಾಲಕಾರ್ಮಿಕ ಪದ್ಧತಿ ಮತ್ತು ಮಕ್ಕಳ ಹಕ್ಕು~ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಅನಿಷ್ಟ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ಸಮಾಜಕ್ಕೆ ಅಂಟಿರುವ ಶಾಪ. ಇವುಗಳ ವಿರುದ್ಧ ಮಂಡಳಿಯು ಜಾಗೃತಿ ಮೂಡಿಸುತ್ತಿದೆ ಎಂದ ಅವರು, ನಾಗರಿಕರಿಗೆ ಇರುವಂತೆಯೇ ಮಕ್ಕಳಿಗೂ ಹಕ್ಕುಗಳಿವೆ. ಹಕ್ಕುಗಳ ರಕ್ಷಣೆಗಾಗಿಯೇ ಸರ್ಕಾರ ಹಲವು ಕಾಯ್ದೆ ರೂಪಿಸಿದೆ. ಪ್ರತಿಯೊಬ್ಬರು ಸಮರ್ಪಕವಾಗಿ ಕಾಯ್ದೆಯ ಅನುಷ್ಠಾನಕ್ಕೆ ಸಹಕಾರ ನೀಡಬೇಕು ಎಂದು ಕೋರಿದರು.

ವಕೀಲ ಚಿನ್ನಸ್ವಾಮಿ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹಿಳೆಯರ ಪಾತ್ರ ಹೆಚ್ಚಿದೆ. ಯಾವುದೇ, ಕಾರಣಕ್ಕೂ ಬಾಲ್ಯವಿವಾಹಕ್ಕೆ ಪ್ರೋತ್ಸಾಹ ನೀಡಬಾರದು. ಇದರ ನಿರ್ಮೂಲನೆಗೆ ಸ್ತ್ರೀಯರು ಮುಂದಾಗಬೇಕು ಎಂದು ಕರೆ ನೀಡಿದರು.

ಚಿಕ್ಕವಯಸ್ಸಿನಲ್ಲಿಯೇ ಹೆಣ್ಣುಮಕ್ಕಳಿಗೆ ಬಾಲ್ಯವಿವಾಹ ಮಾಡಬಾರದು. ಆ ಹಂತದಲ್ಲಿ ಮಕ್ಕಳಿಗೆ ಮಾನಸಿಕ ಮತ್ತು ದೈಹಿಕವಾಗಿ ಪ್ರಬುದ್ಧತೆ ಇರುವುದಿಲ್ಲ. ಮಾನಸಿಕ ಖಿನ್ನತೆಗೆ ತುತ್ತಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವವೂ ಉಂಟು. ಈ ಹಿನ್ನೆಲೆಯಲ್ಲಿ ಹೆಣ್ಣುಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಆಗ ಅನಿಷ್ಟ ಪದ್ಧತಿಗಳು ನಿರ್ಮೂಲನೆಯಾಗುತ್ತವೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಆದಿವಾಸಿ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ಬಿ.ಎಸ್. ಬಸವರಾಜು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಕೆ. ರವೀಂದ್ರನಾಥ್, ನಾಗವಳ್ಳಿ ಮಹದೇವಸ್ವಾಮಿ, ಶಿಕ್ಷಕರಾದ ಸಿ.ಎಸ್. ನಾಗರಾಜು, ಮಹೇಶ್, ಪ್ರಕಾಶ್ ಇತರರು ಹಾಜರಿದ್ದರು

ವಿದ್ಯಾರ್ಥಿ ವೇತನ ಸದ್ಬಳಕೆಗೆ ಸಲಹೆ
ಚಾಮರಾಜನಗರ: `ಸರ್ಕಾರ ನೀಡುವ ವಿದ್ಯಾರ್ಥಿ ವೇತನವನ್ನು ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಮಾತ್ರ ಬಳಸಬೇಕು. ದುರ್ಬಳಕೆ ಮಾಡಿಕೊಳ್ಳಬಾರದು~ ಎಂದು ತಾ.ಪಂ. ಮಾಜಿ ಅಧ್ಯಕ್ಷೆ ಪದ್ಮಾ ಚಂದ್ರು ಸಲಹೆ ನೀಡಿದರು.

ತಾಲ್ಲೂಕಿನ ಹೊಂಗನೂರು ಗ್ರಾಮದ ಶ್ರೀಮತಿ ಗೌರಮ್ಮ ಬಿ.ರಾಚಯ್ಯ ಎಜುಕೇಷನಲ್ ಟ್ರಸ್ಟ್ ಶಾಲೆಯ ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ 2011-12ನೇ ಸಾಲಿನ ವಿದ್ಯಾರ್ಥಿ ವೇತನ ವಿತರಿಸಿ ಅವರು ಮಾತನಾಡಿದರು. ಮುಖ್ಯಶಿಕ್ಷಕ ಚೇತನ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ನಿಂಗರಾಜು, ಮಹದೇವಸ್ವಾಮಿ, ಭಾಗ್ಯಾ, ಪೋಷಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.