ADVERTISEMENT

ಮಹಾಹೋಮದ ಹಿಂದೆ ಓಟ್‌ಬ್ಯಾಂಕ್ ತಂತ್ರ - ಜಿ.ಎಸ್. ಜಯದೇವ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 9:55 IST
Last Updated 8 ಸೆಪ್ಟೆಂಬರ್ 2011, 9:55 IST

ಚಾಮರಾಜನಗರ: `ಭ್ರಷ್ಟಾಚಾರದಿಂದ ಜನಪ್ರತಿನಿಧಿಗಳು ಅಧಿಕಾರ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆಂದು ಮೌಢ್ಯ ಬಿತ್ತುವ ಕೆಲಸ ನಡೆಯುತ್ತಿದೆ~ ಎಂದು ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಜಿ.ಎಸ್. ಜಯದೇವ ಟೀಕಿಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧವಾರ ಭಾರತೀಯ ಮೂಲ ನಿವಾಸಿಗಳ ಒಕ್ಕೂಟದಿಂದ `ಚಾಮರಾಜನಗರ ಶಾಪಗ್ರಸ್ತವೇ?~ ಎಂಬ ವಿಷಯ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಭ್ರಷ್ಟಾಚಾರದಿಂದ ಅಧಿಕಾರ ಕೈತಪ್ಪುತ್ತದೆ. ಇದನ್ನು ನಾವಿಂದು ನೋಡುತ್ತಿದ್ದೇವೆ. ಆದರೆ, ರಾಜಕಾರಣಿಗಳು ಜನರ ಭಾವನೆಗಳನ್ನು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಹೋಮ ಹವನದ ಹೆಸರಿನಲ್ಲಿ ಮೂಢನಂಬಿಕೆ ಬಿತ್ತುತ್ತಿರು ವುದು ಸರಿಯಲ್ಲ. ಇದರ ಹಿಂದೆ ಓಟ್‌ಬ್ಯಾಂಕ್ ರಾಜಕೀಯವಿದೆ. ದೇಶದಲ್ಲಿ ಶಾಪಗ್ರಸ್ತ ಪ್ರದೇಶ ಎಲ್ಲಿದೆ? ಇದನ್ನು ಗುರುತಿಸಿದವರು ಯಾರು? ಎಂದು ಪ್ರಶ್ನಿಸಿದರು.

ಮಹಾಹೋಮದ ಹೆಸರಿನಲ್ಲಿ ಸೀರೆ, ತುಪ್ಪವನ್ನು ಅಗ್ನಿಕುಂಡಕ್ಕೆ ಹಾಕಲಾಗುತ್ತದೆ. ಆದರೆ, ತುಪ್ಪವನ್ನೇ ತಿನ್ನದ ಸಾಕಷ್ಟು ಮಕ್ಕಳಿ ್ದದಾರೆ. ಮೌಢ್ಯತೆಯ ಹೆಸರಿನಡಿ ದುಂದುವೆಚ್ಚ ನಡೆಯುತ್ತಿದೆ. ಚಾಮರಾಜೇಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆದ ಹೋಮಹವನಕ್ಕೆ 20 ಲಕ್ಷ ರೂ ಖರ್ಚು ಮಾಡಿದ್ದಾರೆ. ವೈಚಾರಿಕತೆ ಮತ್ತು ಅಧ್ಯಾತ್ಮದ ಚಿಂತನೆ ಇಲ್ಲದವರು ಇಂಥ ದುಂದುವೆಚ್ಚ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಜಿ. ನಾಗಶ್ರೀ ಮಾತನಾಡಿ, `ಚಾಮರಾಜನಗರಕ್ಕೆ ಶಾಪ ಕೊಟ್ಟವರು ಯಾರು? ಶಾಪ ವಿಮೋಚನೆಯ ನೆಪದಲ್ಲಿ ಮಹಾಹೋಮ ಮಾಡಿಸುತ್ತಿರುವ ಮಂದಿಯೇ ಇದಕ್ಕೆ ಉತ್ತರಿಸಬೇಕಿದೆ. ಇದರ ಹಿಂದೆ ಸ್ವಾರ್ಥ ಅಡಗಿದೆ~ ಎಂದು ದೂರಿದರು.

ವೈಚಾರಿಕ ಚಿಂತನೆ ಇಲ್ಲದಿದ್ದರೆ ಇಂಥ ಅನರ್ಥಕಾರಿ ಕಾರ್ಯ ನಡೆಯುತ್ತವೆ. ಯಾವುದೇ, ಜನಪ್ರತಿನಿಧಿಗಳು ಜಿಲ್ಲಾ ಕೇಂದ್ರಕ್ಕೆ ಬರದಿದ್ದರೂ ಚಿಂತೆಯಿಲ್ಲ. ಇಲ್ಲಿರುವ ಎಲ್ಲರೂ ಸೇರಿ ಗಡಿ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯೋಣ ಎಂದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಮಂಗಲ ಶಿವಕುಮಾರ್ ಮಾತನಾಡಿ, ಈಗ ಅಷ್ಟಮಂಗಲದ ಹೆಸರಿನಡಿ ಮಹಾಹೋಮ ನಡೆಸಲಾಗುತ್ತಿದೆ. ಆದರೆ, ಬಿಜೆಪಿ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡಿಲ್ಲ ಎಂದು ಟೀಕಿಸಿದರು.

ಚೂಡಾ ಮಾಜಿ ಅಧ್ಯಕ್ಷ ಎಂ. ರಾಮಚಂದ್ರು ಮಾತನಾಡಿ, ದೇಶ ಮತ್ತು ರಾಜ್ಯದ ರಾಜಕಾರಣಕ್ಕೆ ಧೀಮಂತ ವ್ಯಕ್ತಿಗಳನ್ನು ಕೊಡುಗೆ ನೀಡಿರುವ ಕೀರ್ತಿಗೆ ಗಡಿ ಜಿಲ್ಲೆ ಪಾತ್ರವಾಗಿದೆ. ಈಗ ಹೋಮಹವನದ ಮೂಲಕ ಜಿಲ್ಲೆಗೆ ಕಳಂಕ ತರಲಾಗುತ್ತಿದೆ ಎಂದರು.

ಬಿಎಸ್‌ಪಿ ಮುಖಂಡ ಎನ್. ಮಹೇಶ್, ಹಿರಿಯ ರಂಗಕರ್ಮಿ ಕೆ. ವೆಂಕಟರಾಜು, ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಸಿ.ಎಂ. ಕೃಷ್ಣಮೂರ್ತಿ, ಶಿವಮೂರ್ತಿ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.