ADVERTISEMENT

ಮೂಗೂರು: ಸಂಭ್ರಮದ ಬಂಡಿ ಉತ್ಸವ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 10:45 IST
Last Updated 20 ಜನವರಿ 2011, 10:45 IST

ತಿ.ನರಸೀಪುರ: ತಾಲ್ಲೂಕಿನ ಮೂಗೂರಿನಲ್ಲಿ ಗ್ರಾಮದೇವತೆ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಬಂಡಿ ಉತ್ಸವ ಅದ್ದೂರಿಯಾಗಿ ನಡೆಯಿತು.

ತಾಲ್ಲೂಕಿನಲ್ಲಿ ವಿಶೇಷ ಜಾತ್ರಾ ಉತ್ಸವದಲ್ಲಿ ಬೆಳಗ್ಗೆ ಅಮ್ಮನವರ ಉತ್ಸವ ಮೂರ್ತಿಯನ್ನು ದೇವಾಲಯ ದೊಳಗೆ ಪ್ರದಕ್ಷಿಣೆ ಹಾಕಿಸಿ ನಂತರ ರುದ್ರಾಕ್ಷಿ ಮಂಟಪದಲ್ಲಿ ಕುಳ್ಳಿರಿಸಿ ಮೊದಲ ಬಂಡಿ ಉತ್ಸವ ನಡೆಸಲಾಯಿತು.

ಬಂಡಿ ಉತ್ಸವ ಮಂಟಪ ತಲುಪಿದ ಕೂಡಲೇ ಮಂಗಳಾರತಿ ನೆರವೇರಿಸಿ ಬಂಡಿ ಬೀದಿಯಲ್ಲಿ ಇತರೆ ಬಂಡಿಗಳ  ಉತ್ಸವಕ್ಕೆ ಚಾಲನೆ ನೀಡಲಾಯಿತು.

ಈ ಬಂಡಿ ಉತ್ಸವದಲ್ಲಿ ನೆರೆ ಹೊರೆಯ ಗ್ರಾಮಗಳಿಂದ ಅಲಂಕೃತ ಬಂಡಿಗಳು ಹಾಗೂ ಅದನ್ನು ಎಳೆಯಲು ಬೆಲೆ  ಬಾಳುವ ಹಸುಗಳಿಗೆ ಅಲಂಕಾರ ಮಾಡಿ ಮೆರವಣಿಗೆಯಲ್ಲಿ ಗ್ರಾಮಕ್ಕೆ ಕರೆ ತರುವುದು ವಾಡಿಕೆ. ಸರದಿಯಲ್ಲಿ ಬಂಡಿ ಬೀದಿಯಲ್ಲಿ ಬಂಡಿಗಳು ಓಡಾಟ ನಡೆಸುತ್ತವೆ. ಈ ಉತ್ಸವವನ್ನು ಸುತ್ತ ಮುತ್ತಲ ಗ್ರಾಮಗಳಲ್ಲೂ ಆಚರಿಸುವುದರಿಂದ ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆಯುತ್ತಾರೆ. ಜಾತ್ರೆಗೆ ಬರುವ ಭಕ್ತರಿಗೆ ನೀರು ಮಜ್ಜಿಗೆ, ಅನ್ನ ಸಂತರ್ಪಣೆಯನ್ನು  ಸಂಘ ಸಂಸ್ಥೆಗಳು ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.