ಯಳಂದೂರು: ಕುಡಿಯುವ ನೀರಿಗಾಗಿ ಹಪಹಪಿಸುವ ಭಕ್ತರು. ಇರುವ ಒಂದೇ ತೊಂಬೆಯಲ್ಲಿ ಸರತಿ ಸಾಲಿನಲ್ಲಿ ಕಲುಷಿತ ವಾತಾವರಣದಲ್ಲಿ ನಿಲ್ಲುವ ಜನರು. ಇದ್ದೂ ಇಲ್ಲದಂತಾಗಿರುವ ಶೌಚಾಲಯ, ಕಲುಷಿತಗೊಂಡಿರುವ ಚರಂಡಿಗಳು. ಅಡುಗೆ ಮಾಡುವ ಸ್ಥಳದಲ್ಲೇ ತ್ಯಾಜ್ಯದ ರಾಶಿ..ಇದು ಪ್ರಸಿದ್ಧ ಯಾತ್ರ ಸ್ಥಳ ಬಿಳಿಗಿರಿರಂಗನಬೆಟ್ಟದಲ್ಲಿ ನಿತ್ಯ ಕಾಣಸಿಗುವ ದೃಶ್ಯಗಳು.
ಇಲ್ಲಿನ ರಥ ಬೀದಿಯಲ್ಲಿ ಅನೇಕ ಮಂಟಪಗಳಿವೆ. ಭಕ್ತರು ಪ್ರತಿ ಶನಿವಾರ ಹಾಗೂ ವಿಶೇಷ ದಿನಗಳಲ್ಲಿ ಇಲ್ಲೇ ಅಡುಗೆ ತಯಾರಿಸಿ ಪ್ರಸಾದವಾಗಿ ಸ್ವೀಕರಿಸುವ ಪದ್ಧತಿ ಅನಾದಿ ಕಾಲದಿಂದಲೂ ರೂಢಿಯಲ್ಲಿದೆ. ಕುಡಿಯುವ ನೀರಿಗಾಗಿ ಇಲ್ಲಿ 2 ತೊಂಬೆ ಹಾಗೂ 2 ಕೈ ಪಂಪುಗಳಿದ್ದರೂ ಕೆಲವು ದಿನಗಳಿಂದ ಸರಿಯಾಗಿ ನೀರು ಬರುತ್ತಿಲ್ಲ.
ಅಡುಗೆ ಮಾಡುವ ಸ್ಥಳದಲ್ಲೇ ಅಶುಚಿತ್ವ ಎದ್ದು ಕಾಣುತ್ತಿದೆ. ಚರಂಡಿಗಳಲ್ಲಿ ಹೂಳು ತುಂಬಿದ್ದರೂ ಗ್ರಾಮ ಪಂಚಾಯಿತಿ ಈ ಕಡೆ ತಿರುಗಿಯೂ ನೋಡಿಲ್ಲ. ಹೀಗಾಗಿ, ಈ ಸ್ಥಳ ಬೀದಿನಾಯಿಗಳ ಹಾಗೂ ಬೀಡಾಡಿ ದನಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಜೊತೆಗೆ ಇದರಿಂದ ಭಕ್ತರಿಗೂ ಕಿರಿಕಿರಿಯಾಗುತ್ತಿದೆ.
ಪ್ರತಿ ಶನಿವಾರ ಹಾಗೂ ವಿಶೇಷ ದಿನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ ಇಲ್ಲಿಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸುವಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬುದು ಅಂಗಡಿ ನಾಗೇಂದ್ರ ಅವರ ಆರೋಪ.
ಇದಲ್ಲದೆ ಗ್ರಾಮದ ಬೀದಿಗಳಲ್ಲೂ ಅಶುಚಿತ್ವ ತಾಂಡವವಾಡುತ್ತಿದೆ. ಗ್ರಾಮದವರು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಗ್ರಾಮ ಪಂಚಾಯಿತಿ ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹರ್ಷಿ ವಾಲ್ಮೀಕಿ ನಾಯಕ ಸೇವಾ ಸಂಘದ ಅಧ್ಯಕ್ಷ ಆರ್. ಶ್ರೀನಿವಾಸ್, ಸದಸ್ಯರಾದ ನಾಗೇಂದ್ರ, ರಾಜೇಂದ್ರ, ಎಲ್. ನಾಗೇಂದ್ರ, ಜಿ. ಕುಮಾರ್ ಆಪಾದಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಈಗಾಗಲೇ ಪಂಚಾಯಿತಿ ಗಮನಕ್ಕೆ ಬಂದಿದೆ. ಕೈಪಂಪು ಹಾಗೂ ಕೊಳವೆ ಬಾವಿ ದುರಸ್ತಿ ಮಾಡಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.