ADVERTISEMENT

ಸೊಳ್ಳೆಗಳ ಆವಾಸ ಸ್ಥಾನ ಈ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 8 ಜನವರಿ 2011, 8:50 IST
Last Updated 8 ಜನವರಿ 2011, 8:50 IST

ಯಳಂದೂರು: ಪಟ್ಟಣದಲ್ಲಿರುವ ಬಸ್ ನಿಲ್ದಾಣದ ಕಾಮಗಾರಿಯು ಕೋರ್ಟ್ ನೀಡಿರುವ ತಡೆಯಾಜ್ಞೆಯಿಂದ ನಿಂತು ಹೋಗಿದೆ. ಇಲ್ಲಿದ್ದ ಹಳೆಯ ಕಟ್ಟಡ ಕೆಡವಿ ಶೌಚಾಲಯ ಹಾಗೂ ಹೊಟೇಲ್ ನಿರ್ಮಾಣಕ್ಕಾಗಿ ಅಡಿಪಾಯ ತೋಡಲಾಗಿದೆ. ಈ ಸಂದರ್ಭದಲ್ಲೇ ಕಾಮಗಾರಿ ನಿಂತಿದ್ದರಿಂದ ಹಳ್ಳದಲ್ಲಿ ಕೊಳಕು ನೀರು ತುಂಬಿಕೊಂಡು ಗಬ್ಬು ನಾರುತ್ತಿದೆ. ಇಲ್ಲಿಗೆ ಚರಂಡಿಯ ನೀರು ನೇರವಾಗಿ ಬಂದು ಬೀಳುವುದರಿಂದ ಹಳ್ಳದ ತುಂಬೆಲ್ಲಾ ನೀರು ನಿಂತುಕೊಂಡು ಕ್ರಿಮಿಕೀಟಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ.

ಈ ಹಿಂದೆ ಕುಡಿಯುವ ನೀರಿನ ಟ್ಯಾಂಕ್ ಕೂಡ ಈಗ ತೆಗೆದಿರುವ ಹಳ್ಳದಲ್ಲೇ ಇತ್ತು. ಅದನ್ನೂ ಕೆಡವಿರುವುದರಿಂದ ಪ್ರಯಾಣಿಕರು ಕುಡಿಯುವ ನೀರಿಗೆ ಅಕ್ಕಪಕ್ಕದಲ್ಲಿರುವ ಹೊಟೇಲ್ ಹಾಗೂ ಬೇಕರಿ ಮೊರೆ ಹೋಗಬೇಕಾಗಿದೆ.ಕೇವಲ ಶೆಲ್ಟರ್ ಮಾತ್ರ ಇರುವ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಬೇಕಾದ ಯಾವುದೇ ರೀತಿಯ ಸೌಲಭ್ಯಗಳಿಲ್ಲ. ಇರುವ ಶೌಚಾಲಯವೂ ಗಬ್ಬು ನಾರುತ್ತಿದೆ. ಅದರ ಎದುರಿಗೇ ಇರುವ ಶೆಲ್ಟರ್‌ನ ಕುರ್ಚಿಗಳಲ್ಲೇ ದುರ್ವಾಸನೆ ಹೀರುತ್ತಾ ಕುಳಿತುಕೊಳ್ಳುವ ದೌರ್ಬಾಗ್ಯ ಇಲ್ಲಿನ ಪ್ರಯಾಣಿಕರದ್ದಾಗಿದೆ ಎಂಬುದು ನಾಗೇಂದ್ರ ಅವರ ದೂರು.

ಇದರ ಜೊತೆಗೆ ಪಕ್ಕದ ಈ ಹಳ್ಳವೂ ಸೇರಿಕೊಂಡಿದೆ. ಇಲ್ಲಿಗೆ ಬರುವ ಚರಂಡಿ ನೀರು ಕೊಳೆತು ದುರ್ವಾಸನೆ ಬೀರುತ್ತಿರುವುದರಿಂದ ಪ್ರಯಾಣಿಕರು ನರಕಯಾತನೆ ಅನುಭವಿಸಬೇಕಾದ ಸ್ಥಿತಿ ಇದೆ. ಈ ಸಮಸ್ಯೆಗಳಿಂದ ಸಂಬಂಧಪಟ್ಟವರು ಈಗಲಾದರೂ ಮುಕ್ತಿ ದೊರಕಿಸಲಿ ಎಂಬುದು ಸಿದ್ದಶೆಟ್ಟಿ ಸೇರಿದಂತೆ ಹಲವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.