ADVERTISEMENT

ಹಳಿ ತಪ್ಪಿದ ಗಡಿ ಜನರ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 6:50 IST
Last Updated 26 ಫೆಬ್ರುವರಿ 2011, 6:50 IST

ವಿಶೇಷ ವರದಿ
ಚಾಮರಾಜನಗರ:
ಹೊಸ ಯೋಜನೆಗಳ ಬಗ್ಗೆ ನಿರೀಕ್ಷೆ ಹೊಂದಿದ್ದ ಗಡಿ ಜಿಲ್ಲೆಯ ಜನರಿಗೆ ಕೇಂದ್ರ ರೈಲ್ವೆ ಬಜೆಟ್ ನಿರಾಸೆ ಮೂಡಿಸಿದೆ. ಹತ್ತಾರು ಯೋಜನೆ ಜಾರಿಗೊಳ್ಳಲಿವೆ ಎಂಬ ಮಹದಾಸೆ ಜನರಿಗಿತ್ತು. ಹೆಚ್ಚುವರಿ ರೈಲುಗಳ ವಿಸ್ತರಣೆಯಿಂದ ಸಂಚಾರ ಸುಲಭವಾಗಲಿದೆಯೆಂಬ ಆಸೆ ಮೂಡಿತ್ತು. ಆದರೆ, ಈಗ ಎಲ್ಲವೂ ಹುಸಿಯಾಗಿದೆ. ಕನಿಷ್ಠ ಚಾ.ನಗರದ ತನಕ ಮೈಸೂರು-ಶಿವಮೊಗ್ಗ ಹಾಗೂ ಮೈಸೂರು-ಹುಬ್ಬಳ್ಳಿ ರೈಲು ವಿಸ್ತರಣೆಯ ಪ್ರಸ್ತಾಪವೇ ಬಜೆಟ್‌ನಲ್ಲಿ ಇಲ್ಲ. ಇಲ್ಲಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವಂತೆ ಫಾಸ್ಟ್ ಇಂಟರ್‌ಸಿಟಿ ರೈಲಿನ ಆಗಮನದಲ್ಲಿದ್ದ ಜನರಿಗೆ ಬಹಳಷ್ಟು ನಿರಾಸೆ ತಂದಿದೆ.

ತುಮಕೂರು-ಚಾಮರಾಜನಗರಹಾಗೂ ತಲಸ್ಸೇರಿ-ಮೈಸೂರು ಹೊಸ ರೈಲು ಮಾರ್ಗದ ಸಮೀಕ್ಷೆ ಬಗ್ಗೆ ಬಜೆಟ್‌ನಲ್ಲಿ ಘೋಷಣೆಯಾಗಿದೆ. ಎಚ್.ಡಿ. ದೇವೇಗೌಡ ಪ್ರಧಾನಿಯಾಗಿದ್ದ ವೇಳೆಯೇ ಚಾ.ನಗರ- ಕೊಳ್ಳೇಗಾಲ- ಮಳವಳ್ಳಿ- ಕನಕಪುರ ಮಾರ್ಗವಾಗಿ ಬೆಂಗಳೂರಿನ ಹೊಸ ಮಾರ್ಗದ ಬಗ್ಗೆ ಸಮೀಕ್ಷೆಗೆ ಹಣ ನೀಡಲಾಗಿತ್ತು. ಪ್ರಸ್ತುತ ಸಮೀಕ್ಷೆಯೂ ಮುಗಿದಿದೆ. ಪ್ರಸ್ತುತ ಈ ಮಾರ್ಗಕ್ಕೆ ತುಮಕೂರು ಸೇರ್ಪಡೆಯಾಗಿದೆ ಅಷ್ಟೇ.

ಗುಂಡ್ಲುಪೇಟೆ ಮಾರ್ಗವಾಗಿ ಮೈಸೂರಿನಿಂದ ತಲಸ್ಸೇರಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನ ಬರಲಿದೆ. ಜತೆಗೆ, ನೀಲಗಿರಿ ಅರಣ್ಯವೂ ಇದೆ. ವನ್ಯಜೀವಿ ಸಂಕುಲಕ್ಕೆ ಅಡ್ಡಿಯಾಗುವ ಪರಿಣಾಮ ಈಗಾಗಲೇ ಕೃಷ್ಣಗಿರಿ-ಚಾ.ನಗರ ಹಾಗೂ ಚಾ.ನಗರ-ಮೆಟ್ಟುಪಾಳ್ಯಂ ಹೊಸ ರೈಲು ಮಾರ್ಗ ನಿರ್ಮಾಣ ಮೂಲೆಗೆ ಸರಿದಿದೆ.

ಚಾ.ನಗರ ಲೋಕಸಭಾ ಕ್ಷೇತ್ರಕ್ಕೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಸಂಸದ ಆರ್. ಧ್ರುವನಾರಾಯಣ ಸಚಿವರಿಗೆ ಸಲ್ಲಿಸಿದ್ದ ಮನವಿಗೆ ಮನ್ನಣೆ ಸಿಕ್ಕಿಲ್ಲ. ಮೈಸೂರು-ತಲಸ್ಸೇರಿ, ಚಾ.ನಗರ-ತುಮಕೂರು ಹಾಗೂ ನಂಜನಗೂಡು-ನಿಲಂಬೂರು ಹೊಸ ಮಾರ್ಗ ಸಮೀಕ್ಷೆಗೆ ಬಜೆಟ್‌ನಲ್ಲಿ ಘೋಷಣೆಯಾಗಿರುವುದಷ್ಟೇ ಕ್ಷೇತ್ರದ ಮಟ್ಟಿಗೆ ಸಮಾಧಾನದ ಸಂಗತಿ.

ಮೈಸೂರು-ಚಾ.ನಗರ ಜೋಡಿ ಮಾರ್ಗ ನಿರ್ಮಾಣ ಮಾಡಬೇಕೆಂಬುದು ಜನರ ಬಹುದಿನದ ಕನಸಾಗಿತ್ತು. ಅದು ಬಜೆಟ್‌ನಲ್ಲಿ ಈಡೇರಿಲ್ಲ. ಜತೆಗೆ, ನಗರದ ರೈಲು ನಿಲ್ದಾಣದಲ್ಲಿ ಇಂದಿಗೂ ಸೂಕ್ತ ಭದ್ರತಾ ವ್ಯವಸ್ಥೆಯಿಲ್ಲ. ಇದರಿಂದ ಮಹಿಳೆಯರು ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಆರ್‌ಪಿಎಫ್ ಹಾಗೂ ಜಿಆರ್‌ಪಿ ಹುದ್ದೆ ಮಂಜೂರಿಗೆ ಮಾಡಿದ್ದ ಪ್ರಸ್ತಾವಕ್ಕೆ ಬೆಲೆ ಸಿಕ್ಕಿಲ್ಲ.

ಚಾ.ನಗರದ ರೈಲು ನಿಲ್ದಾಣದಲ್ಲಿ ಇಂದಿಗೂ ಬ್ಯಾಂಕ್ ಎಟಿಎಂ ಸೌಲಭ್ಯವಿಲ್ಲ. ಇದರಿಂದ ಪ್ರಯಾಣಿಕರು ತೊಂದರೆ ಪಡುವುದು ಹೆಚ್ಚು. ಈ ನಿಟ್ಟಿನಲ್ಲೂ ಯಾವುದೇ ಆಶಾದಾಯಕ ಭರವಸೆ ಸಿಕ್ಕಿಲ್ಲ. ಹಿಂದುಳಿದ ಜಿಲ್ಲೆಗೆ ಅನುಕೂಲ ಕಲ್ಪಿಸಲು ಮೈಸೂರು-ಶಿವಮೊಗ್ಗ, ಮೈಸೂರು-ಹುಬ್ಬಳ್ಳಿ ರೈಲು ವಿಸ್ತರಣೆಗೆ ಕೋರಲಾಗಿತ್ತು. ಜಿಲ್ಲೆಯ ಜನರು ರಾಜಧಾನಿಯ ಸಂಪರ್ಕದೊಂದಿಗೆ ಇತರೇ ಪ್ರದೇಶಗಳಿಗೆ ತೆರಳಲು ಅನುಕೂಲವಾಗುವಂತೆ ಫಾಸ್ಟ್ ಇಂಟರ್‌ಸಿಟಿ ರೈಲು ಓಡಿಸುವ ಪ್ರಯತ್ನಕ್ಕೆ ಬಜೆಟ್‌ನಲ್ಲಿ ಮನ್ನಣೆ ನೀಡಿಲ್ಲ.

ಜತೆಗೆ, ಈ ನಿಲ್ದಾಣದ ವ್ಯಾಪ್ತಿಯಲ್ಲಿಯೇ 3 ಸಾವಿರಕ್ಕೂ ಹೆಚ್ಚು ಪಾಸ್ ವಿತರಿಸಲಾಗಿದೆ. ಇದರಿಂದ ಹಾಲಿ ಸಂಚರಿಸುವ ರೈಲಿನಲ್ಲಿ ಸುಖಕರ ಪ್ರಯಾಣ ಕಷ್ಟಕರ. ಈ ಹಿನ್ನೆಲೆಯಲ್ಲಿ ಇಲ್ಲಿಂದ ಸಂಚರಿಸುವ ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಸುವ ಪ್ರಸ್ತಾವಕ್ಕೂ ಬಜೆಟ್‌ನಲ್ಲಿ ಉತ್ತರ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.