ADVERTISEMENT

‘ಸಹಕಾರಿ ರಂಗದಿಂದ ನಾಡಿಗೆ ಶಕ್ತಿ’

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 9:23 IST
Last Updated 20 ಸೆಪ್ಟೆಂಬರ್ 2013, 9:23 IST

ಮೂಡಿಗೆರೆ: ರೈತನಿಗೆ ಶಕ್ತಿ ತುಂಬುವ ಸಹಕಾರಿರಂಗವು ನಾಡಿನಲ್ಲಿ ಬಹು­ದೊಡ್ಡ ಶಕ್ತಿಯಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅಭಿಪ್ರಾಯ ಪಟ್ಟರು.

ಪಟ್ಟಣದ ರೈತಭವನದಲ್ಲಿ ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಸಂಘವು ಗುರುವಾರ ಏರ್ಪಡಿಸಿದ್ದ ಸಂಘದ ವಿವಿಧ ಕಟ್ಟಡಗಳ ಕಾಮ­ಗಾರಿಗೆ ಶಂಕುಸ್ಥಾಪನಾ ಕಾರ್ಯ­ಕ್ರಮ­ವನ್ನು ಉದ್ಘಾಟಿಸಿ ಮಾತನಾಡಿದರು.

ಸಹಕಾರ ಸಂಘಗಳು ಸಂಘದ ಸದಸ್ಯ­ರಿಗೆ ಸವಲತ್ತುಗಳನ್ನು ಸಮರ್ಪಕವಾಗಿ ವಿತರಿಸುವುದರ ಜೊತೆಗೆ ಸಮಾಜದ ಸರ್ವಜನರಿಗೂ ಉಪಯುಕ್ತ ಕಾರ್ಯ­ಗಳನ್ನು ಮಾಡಿದಾಗ ಇಡೀ ಸಮಾಜ­ದಲ್ಲಿ ಸಹಕಾರಸಂಘ ಮಾದರಿ­ಯಾಗು­ತ್ತದೆ. ಅಂತಹ ಅನೇಕ ಕಾರ್ಯಗಳನ್ನು ಅಳವಡಿಸಿಕೊಂಡು ತಾಲ್ಲೂಕಿನ ಸರ್ವ­ರಿಗೂ ಸಹಕಾರಿಸಂಘ ಉಪಯುಕ್ತ­ಕಾರಿಯಾಗಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕಟ್ಟಡ­ಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಅಭಯ­ಚಂದ್ರಜೈನ್ ಮಾತನಾಡಿ, ತಾಲ್ಲೂಕಿನಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳೆಲ್ಲ­ವುದರ ಮಾಹಿತಿಯನ್ನು ಪಡೆಯ­ಲಾಗಿದೆ. ಈಗಷ್ಟೆ ಅಧಿಕಾರ ಪಡೆದಿರುವ ಸರ್ಕಾರವು ಎಲ್ಲಾ ಸಮಸ್ಯೆಗಳ ಪರಿಹಾ­ರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರದಲ್ಲಿ ಚರ್ಚಿಸಲಾಗುವುದು. ತಾಲ್ಲೂಕಿನ ಅತೀವೃಷ್ಟಿ, ಕಾಡಾನೆ ಹಾವಳಿ, ಇನಾಂ ಭೂಮಿ ಸಮಸ್ಯೆಗಳ ಬಗ್ಗೆ ತಕ್ಷಣವೇ ಮುಖ್ಯಮಂತ್ರಿಗಳ ಗಮನ ಸೆಳೆದು ಸಂಬಂದಿಸಿದ ಇಲಾಖೆ­ಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದರು.

ಸಮಾರಂಭದಲ್ಲಿ ಭಾಗವಹಿಸಿದ್ದ ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ಇಡೀ ತಾಲ್ಲೂಕು ಇಂದು ಸಂಕಷ್ಟ­ಕೊಳಗಾಗಿದೆ. ಒಂದೆಡೆ ನಿರಂತರವಾಗಿ ದಾಳಿ ನಡೆಸುತ್ತಿರುವ ಕಾಡಾನೆಗಳಿಂದ ರೈತಾಪಿ ವರ್ಗ ತತ್ತರಿಸಿ ಹೋಗಿದ್ದರೆ, ಮತ್ತೊಂದೆಡೆ ಹದಿಮೂರು ವರ್ಷಗಳ ಹಿಂದಿನ ದಾಖಲೆ ಮಳೆ ಸುರಿದು, ಮನೆ, ಬೆಳೆಗಳನ್ನು ಕಳೆದುಕೊಳ್ಳುವಂತಾಗಿದೆ. ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವು­ದರಿಂದ ಪ್ರಯೋಜನ­ವಿಲ್ಲದ್ದರಿಂದ, ಶಾಶ್ವತ ಪರಿಹಾರವಾಗಿ ಸ್ಥಳಾಂತರಿ­ಸ­ಬೇಕು, ಬೆಳೆಹಾನಿಯಾದವರಿಗೆ ವೈಜ್ಞಾ­ನಿಕ ರೀತಿಯಲ್ಲಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಮಳೆಯಿಂದ ತಾಲ್ಲೂಕಿನ ಬಹುತೇಕ ಗ್ರಾಮೀಣ ರಸ್ತೆಗಳು, ಸೇತುವೆಗಳು ಕೊಚ್ಚಿಹೋಗಿದ್ದು, ಈಗಾಗಲೇ ರೂ. 55 ಕೋಟಿ ನಷ್ಟ ಸಂಭವಿಸಿದೆ. ಬೆಳೆ ಹಾನಿಯಿಂದ ರೂ. 20 ಕೋಟಿ ಹಾನಿಯಾಗಿದ್ದು, ಕಳೆದ ಮೂರೇ ತಿಂಗಳಿನಲ್ಲಿ ತಾಲ್ಲೂಕಿಗೆ ರೂ. 80 ಕೋಟಿಯಷ್ಟು ನಷ್ಟವಾಗಿದೆ ಎಂದರು.

ತಾಲ್ಲೂಕಿನ ಬಹುದೊಡ್ಡ ಸಮಸ್ಯೆ­ಯಾದ ಕಳಸದ ಇನಾಂ ಭೂಮಿ ಸಮಸ್ಯೆಯನ್ನು ಕೂಡಲೇ ಗಂಭೀರವಾಗಿ ಪರಿಗಣ­ನೆಗೆ ತೆಗೆದುಕೊಂಡು, ಅಲ್ಲಿನ ನಿವಾಸಿಗಳ ಹಿತ ಕಾಯುವ ಕೆಲಸ­ವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದರು.


ಬೆಳೆಗಾರರ ಸಂಘದ ವತಿಯಿಂದ ಬೆಳೆ ಹಾನಿಯ ಬಗ್ಗೆ ಮನವಿ ನೀಡಲಾ­ಯಿತು. ಸಂಘದ ಅಧ್ಯಕ್ಷ ಎಂ.ವಿ. ಜಗದೀಶ್, ತಾ.ಪಂ. ಅಧ್ಯಕ್ಷ ಎಂ.ಎ. ಶೇಷಗಿರಿಕಳಸ, ಸಹಕಾರಿ ಬ್ಯಾಂಕ್ ನಿರ್ದೇಶಕ ಹಳಸೆ ಶಿವಣ್ಣ, ಬಿ.ಎನ್. ಜಯಂತ್, ಎನ್.ಜೆ. ಜಯ­ರಾಂ, ಜಿ.ಪಂ, ತಾ.ಪಂ. ಸದಸ್ಯರು ಇದ್ದರು

ಗರಂ ಆದ ಶಾಸಕರು: ತಾಲ್ಲೂಕಿನಲ್ಲಿ ಕಾಡಾನೆ ದಾಳಿಯಿಂದ ಹಾನಿಯಾಗಿ­ರುವ ಪ್ರದೇಶಗಳ ವಸ್ತುಸ್ಥಿತಿಯನ್ನು ಪರಿಚಯಿಸಬೇಕೆಂದು ಬೆಳಗ್ಗೆ ಹತ್ತು ಗಂಟೆಗೆ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆಯ ಡಿಎಫ್‌ಒ ಅವರೊಂದಿಗೆ ಶಾಸಕ ಬಿ.ಬಿ.ನಿಂಗಯ್ಯ ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಸಭಾಪತಿಗಳಿಗಾಗಿ ಕಾಯ್ದುಕುಳಿತಿದ್ದರು.

ಆದರೆ ಮಾರ್ಗ ಮಧ್ಯದಲ್ಲಿಯೇ ಆಯಾ ಪಕ್ಷಗಳ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಮಂತ್ರಿ ಮತ್ತು ಸಭಾಪತಿಗಳನ್ನು ಪ್ರತ್ಯೇಕ­ವಾಗಿ ಕರೆದೊಯ್ದಿದ್ದರಿಂದ ಶಾಸಕರು ಹೀಗೆ ರಾಜಕೀಯ ಮಾಡಿದರೆ ತಾಲ್ಲೂಕು ಅಭಿವೃದ್ಧಿ ಸಾಧ್ಯವೇ ಎಂದು ಬಹಿ­ರಂಗವಾಗಿಯೇ ಗರಂ ಆದರು. ಪ್ರತ್ಯೇಕವಾಗಿ ಹೋಗಿದ್ದ ಜಿಲ್ಲಾ ಉಸ್ತು­ವಾರಿ­ಮಂತ್ರಿಗಳು ಹಾಗೂ ಸಭಾಪತಿ­ಗಳು ಒಟ್ಟಾಗಿ ಬಂದಾಗ ಕೋಪ ಶಮನವಾಗಿ ಸಮಸ್ಯೆ ಬಗೆಹರಿದರೆ ಸಾಕು ಎಂದು ನಗೆ ಬೀರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.