ಚಾಮರಾಜನಗರ: ‘ರಾಷ್ಟ್ರೀಯಹೆದ್ದಾರಿ 209ರಲ್ಲಿ ತಾಲ್ಲೂಕಿನ ಅಟ್ಟುಗೂಳಿಪುರದಿಂದ ತಮಿಳುನಾಡು ಗಡಿಭಾಗದವರೆಗೆ ಉಂಟಾಗಿರುವ ಗುಂಡಿಗಳನ್ನು 10 ದಿನದೊಳಗೆ ಮುಚ್ಚಿಸಬೇಕು’ ಎಂದು ಸಂಸದ ವಿ. ಶ್ರೀನಿವಾಸಪ್ರಸಾದ್ ಅವರು ರಾಷ್ಟ್ರೀಯ ಹೆದ್ದಾರಿಪ್ರಾಧಿಕಾರದ ಎಂಜಿನಿಯರ್‌ಗಳಿಗೆ ಗುರುವಾರ ತಾಕೀತು ಮಾಡಿದರು.
22 ಕಿ.ಮೀ ಉದ್ದದಷ್ಟು ಹೆದ್ದಾರಿ ತೀರಾ ಹದಗೆಟ್ಟಿರುವುದನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ‘ಗುಂಡಿಗಳನ್ನು ಮುಚ್ಚಲು ಕೇಂದ್ರ ಸರ್ಕಾರ ₹40 ಲಕ್ಷ ಬಿಡುಗಡೆಗೊಳಿಸಿದೆ.ಈ ಅನುದಾನವನ್ನು ಬಳಸಿ 10 ದಿನಗಳಲ್ಲಿ ಸಂಪೂರ್ಣವಾಗಿ ಗುಂಡಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.
₹15 ಕೋಟಿ ಹೆಚ್ಚುವರಿ ಅನುದಾನ: ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿದ ನಂತರ, ಹೆಚ್ಚುವರಿಯಾಗಿ ₹15 ಕೋಟಿ ಅನುದಾನವನ್ನು ಬಿಡುಗಡೆಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು. ಇಷ್ಟು ಹಣ ಬಿಡುಗಡೆಯಾದರೆವೆಂಕಟಯ್ಯನ ಛತ್ರದಿಂದ ಗಡಿಭಾಗದವರೆಗೂ ಗುಣಮಟ್ಟದ ರಸ್ತೆ ನಿರ್ಮಿಸಬಹುದು’ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದ್ ಕುಮಾರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಎಂಜಿನಿಯರ್ ಹೇಮಲತಾ, ಎಇಇ ಸುರೇಶ್ ಕುಮಾರ್ ಇದ್ದರು.
ಅಹವಾಲು ಸ್ವೀಕರಿಸದ ಸಂಸದರು: ಇದಕ್ಕೂ ಮೊದಲು, ಬೆಳಿಗ್ಗೆ 10.30ಕ್ಕೆ ನಗರದ ಪ್ರವಾಸಿ ಮಂದಿರದಲ್ಲಿ ಸಂಸದರು ಸಾರ್ವಜನಿಕರಿಂದ ಕುಂದುಕೊರತೆ ಆಲಿಸುವ ಕಾರ್ಯಕ್ರಮವಿತ್ತು.
ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾರ್ವಜನಿಕರು ಅಹವಾಲು ಸಲ್ಲಿಸುವುದಕ್ಕಾಗಿಬೆಳಿಗ್ಗೆ 10 ಗಂಟೆಗೆ ಆಗಮಿಸಿದ್ದರು. ಆದರೆ ಶ್ರೀನಿವಾಸ ಪ್ರಸಾದ್ ಅವರು ಬರುವಾಗ11.45 ಗಂಟೆ ಆಗಿತ್ತು. ಈ ವೇಳೆಗೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ಜನರಿದ್ದರು.
ಪ್ರವಾಸಿ ಮಂದಿರದಲ್ಲಿ 10 ನಿಮಿಷ ವಿಶ್ರಾಂತಿ ಪಡೆದ ಶ್ರೀನಿವಾಸ ಪ್ರಸಾದ್ ಅವರು ನಂತರ ನಂದಿ ಭವನದಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದರು.
ಈಗ ಎಲ್ಲಿ ಕೊಡೋದು: ‘ಇಂದಿನ ಪತ್ರಿಕೆಯಲ್ಲಿ ಈ ಕಾರ್ಯಕ್ರಮ ಇರುವುದು ತಿಳಿಯಿತು. ಸಂಸದರ ಬಳಿ ಮನವಿ ಸಲ್ಲಿಸಬೇಕು ಎಂದು ಕಾದು ಕುಳಿತು ಈಗ ಬಂದೆ. ಆದರೆ, ಅವರು ಹೀಗೆ ಬಂದು ಹಾಗೆ ಹೊರಟು ಹೋಗಿದ್ದಾರೆ. ನನ್ನ ಮನವಿಯನ್ನು ಈಗ ಎಲ್ಲಿ ಕೊಡಬೇಕು ಎನ್ನುವುದೇ ತಿಳಿಯುತ್ತಿಲ್ಲ’ ಎಂದು ಆಲೂರು ನಾಗೇಂದ್ರ ಎಂಬುವವರು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.