ADVERTISEMENT

ಚಾಮರಾಜನಗರ: ಶಿಕ್ಷಣದ ಬಗ್ಗೆ ನಿರಾಸಕ್ತಿ, 634 ಮಕ್ಕಳು ಶಾಲೆಯಿಂದ ಹೊರಕ್ಕೆ

ಸಾರಿಗೆ ವ್ಯವಸ್ಥೆ ಇಲ್ಲದಿರುವುದೂ ಕಾರಣ

ಸೂರ್ಯನಾರಾಯಣ ವಿ
Published 31 ಜನವರಿ 2023, 19:30 IST
Last Updated 31 ಜನವರಿ 2023, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಒಟ್ಟು 634 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಇವರಲ್ಲಿ 403 ಬಾಲಕರು ಹಾಗೂ 231 ಬಾಲಕಿಯರು.

ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯು 2023–24ನೇ ಸಾಲಿಗೆ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯನ್ನು ಇತ್ತೀಚೆಗಷ್ಟೆ ಮುಗಿಸಿದ್ದು, ಶಾಲೆಯಿಂದ ಹೊರಗುಳಿಯಲು ಕಾರಣವಾದ ಅಂಶಗಳನ್ನು ಪಟ್ಟಿ ಪಟ್ಟಿದೆ.

ಅನಾರೋಗ್ಯ, ಪೋಷಕರ ನಿರಾಸಕ್ತಿ, ಮಕ್ಕಳ ನಿರಾಸಕ್ತಿ, ಸಾರಿಗೆ ವ್ಯವಸ್ಥೆ ಅಲಭ್ಯತೆ, ಶಾಲೆ ದೂರ ಇರುವುದು, ಹೆಣ್ಣುಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ 16 ಕಾರಣಗಳನ್ನು ಇಲಾಖೆ ಪಟ್ಟಿ ಮಾಡಿದೆ.

ADVERTISEMENT

ಕಳೆದ ವರ್ಷ ಪಂಚಾಯತ್‌ ರಾಜ್‌ ಇಲಾಖೆ ಈ ಸಮೀಕ್ಷೆ ನಡೆಸಿತ್ತು. ಜಿಲ್ಲೆಯಲ್ಲಿ 750 ಮಕ್ಕಳು ಹೊರಗುಳಿದಿರುವುದು ಪತ್ತೆಯಾಗಿತ್ತು. ಅವರಲ್ಲಿ 16 ವರ್ಷದ ಕೆಳಗಿನ ಮಕ್ಕಳನ್ನು ಶಾಲೆಗೆ ಸೇರಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪೋಷಕರ ನಿರಾಸಕ್ತಿ: ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರಲ್ಲಿ ಇರುವ ನಿರಾಸಕ್ತಿಯಿಂದಾಗಿ 166 ಗಂಡು ಮಕ್ಕಳು, 87 ಹೆಣ್ಣುಮಕ್ಕಳು ಸೇರಿದಂತೆ 253 ಮಕ್ಕಳು ಶಾಲೆಗೆ ಹೋಗಿಲ್ಲ. ‌

ಮಕ್ಕಳಲ್ಲಿರುವ ನಿರಾಸಕ್ತಿಯಿಂದಾಗಿ 181 ಮಕ್ಕಳು ಶಾಲೆಗಳಿಗೆ ದಾಖಲಾಗಿಲ್ಲ. ಇವರಲ್ಲಿ 126 ಮಂದಿ ಬಾಲಕರಾದರೆ ಉಳಿದ 55 ಮಂದಿ ಬಾಲಕಿಯರು.

ಹೆಣ್ಣುಮಕ್ಕಳಿಗೆ ಸಂಬಂಧಿಸಿದ ಕಾರಣಗಳಿಂದ 33 ಬಾಲಕಿಯರು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ವರದಿ ಹೇಳಿದೆ.

ಶಾಲೆ ದೂರ ಇರುವ ಕಾರಣಕ್ಕೆ 28 ಮಕ್ಕಳು ಶಾಲೆಗೆ ಬರುತ್ತಿಲ್ಲ. ಈ ಪೈಕಿ ಹನೂರು ತಾಲ್ಲೂಕೊಂದರಲ್ಲೇ 27 ಮಕ್ಕಳಿದ್ದಾರೆ. ಇನ್ನೊಬ್ಬ ಬಾಲಕ ಚಾಮರಾಜನಗರದವನು.

23 ಬಾಲಕರು ಶಾಲೆಗೆ ಹೋಗದೆ ದುಡಿಮೆಯಲ್ಲಿ ತೊಡಗಿರುವುದು ಸಮೀಕ್ಷೆಯ ವೇಳೆ ಬೆಳಕಿಗೆ ಬಂದಿದೆ.

ಬುಡಕಟ್ಟು ಸಮುದಾಯದ 18 ಬಾಲಕರು ಹಾಗೂ ನಾಲ್ವರು ಬಾಲಕಿಯರು ಸೇರಿದಂತೆ 24 ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ವಲಸೆಯ ಕಾರಣಕ್ಕೆ ತಲಾ 12 ಹೆಣ್ಣು ಹಾಗೂ ಗಂಡು ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಪ್ರೌಢಾವಸ್ಥೆ ತಲುಪಿರುವ ಕಾರಣಕ್ಕೆ ಐವರು ಹೆಣ್ಣುಮಕ್ಕಳು, ನಾಲ್ವರು ಬಾಲಕಾರ್ಮಿಕರು ಶಿಕ್ಷಣದಿಂದ ದೂರ ಉಳಿದಿದ್ದಾರೆ. ಪೋಷಕರ ಆರೈಕೆ ಮಾಡುವುದಕ್ಕಾಗಿ ನಾಲ್ವರು ಮಕ್ಕಳು ಶಾಲೆಯ ಕಡೆ ಮುಖ ಮಾಡಿಲ್ಲ.

ಬೇಕಿದೆ ಇನ್ನಷ್ಟು ಜಾಗೃತಿ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದರೂ, ಪೋಷಕರ ಹಾಗೂ ಮಕ್ಕಳಲ್ಲಿರುವ ನಿರಾಸಕ್ತಿಯಿಂದ ಶಿಕ್ಷಣ ಪಡೆಯದವರ ಸಂಖ್ಯೆ ಜಾಸ್ತಿ ಇರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಸರ್ಕಾರ ಉಚಿತ ಶಿಕ್ಷಣ, ಬಿಸಿಯೂಟ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದರೂ, ಪೋಷಕರು ಮಕ್ಕಳನ್ನು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮೀಣ ಭಾಗದ ಪೋಷಕರಿಗೆ ಶಿಕ್ಷಣದ ಮಹತ್ವ ಇನ್ನೂ ಅರ್ಥವಾಗಿಲ್ಲ. ಅವರಲ್ಲಿ ಜಾಗೃತಿ ಮೂಡಿಸಲು ಇನ್ನಷ್ಟು ಪ್ರಯತ್ನದ ಅಗತ್ಯವಾಗಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಮುಖ್ಯವಾಹಿನಿಗೆ ತರಲು ಯತ್ನ: ಡಿಡಿಪಿಐ
ಸಮೀಕ್ಷೆಯ ವಿವರಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎನ್‌.ಮಂಜುನಾಥ್‌, ‘ವಿವಿಧ ಕಾರಣಗಳಿಗಾಗಿ 600ಕ್ಕೂ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿರುವುದನ್ನು ಈ ಬಾರಿ ಗುರುತಿಸಿದ್ದೇವೆ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಿ, ಅವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಲಾಗುವುದು. ಇದಕ್ಕಾಗಿ ತಂತ್ರಗಾರಿಕೆ ರೂಪಿಸುತ್ತಿದ್ದೇವೆ’ ಎಂದರು.

‘ಬಿಳಿಗಿರಿರಂಗನಬೆಟ್ಟದ ಕೆರೆದಿಂಬ ಪೋಡಿನಲ್ಲಿ 17 ಮಕ್ಕಳಿಗೆ 12 ತಿಂಗಳ ಕಾಲ ವಿಶೇಷ ವಸತಿಯುತ ಶಾಲೆ ನಡೆಸಲು ನಿರ್ಧರಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.