ADVERTISEMENT

ಚಾಮರಾಜನಗರದಲ್ಲಿ ಸರಳ ಸ್ವಾತಂತ್ರ್ಯ ದಿನ, ಕೊರೊನಾ ಸೈನಿಕರಿಗೆ ಸನ್ಮಾನ

ಕೋವಿಡ್‌ ಹಾವಳಿ ನಡುವೆ ಸಾಂಸ್ಕೃತಿಕ ಕಾರ್ಯಕ್ರಮ, ಪಥ ಸಂಚಲನಕ್ಕೆ ಕತ್ತರಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 7:48 IST
Last Updated 15 ಆಗಸ್ಟ್ 2020, 7:48 IST
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಮೊದಲ ಮೂರು ಸ್ಥಾನಗಳಿಸಿದ ಐವರು ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಮೊದಲ ಮೂರು ಸ್ಥಾನಗಳಿಸಿದ ಐವರು ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು   

ಚಾಮರಾಜಗರ: ಕೋವಿಡ್‌–19 ಹಾವಳಿಯ ನಡುವೆಯೇ ಶನಿವಾರ ಜಿಲ್ಲೆಯಾದ್ಯಂತ 74ನೇ ಸ್ವಾತಂತ್ರ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು.

ನಗರದ ಡಾ.ಬಿ.ಆರ್.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಬಳಿಗ್ಗೆ 9ಗಂಟೆಗೆ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು.

ಸಾಮಾನ್ಯವಾಗಿ ಎರಡು ಗಂಟೆಗಳ ಕಾಲ ನಡೆಯುತ್ತಿದ್ದ ಕಾರ್ಯಕ್ರಮ, ಈ ಬಾರಿ ಮುಕ್ಕಾಲು ಗಂಟೆಯಲ್ಲಿ ಮುಕ್ತಾಯವಾಯಿತು.

ADVERTISEMENT

ಕೋವಿಡ್‌ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ವರ್ಷ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪಥ ಸಂಚಲನ ನಡೆಯಲಿಲ್ಲ.

ಧ್ವಜಾರೋಹಣ ನೆರವೇರಿಸಿ, ಪೊಲೀಸ್‌, ಗೃಹರಕ್ಷಕ ದಳ, ಅರಣ್ಯ ರಕ್ಷಕ ದಳದ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದ ಸಚಿವರು, ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, 74ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದರು.

ಆಂತರಿಕ, ಬಾಹ್ಯ ಶಕ್ತಿಗಳನ್ನು ಮೆಟ್ಟಿ ನಿಲ್ಲೋಣ: ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಜಿಲ್ಲೆಯ ಹೋರಾಟಗಾರರ ಹೆಸರುಗಳನ್ನು ಪ್ರಸ್ತಾಪಿಸಿದ ಸಚಿವರು, ಅವರ ಕೊಡುಗೆಗಳನ್ನು ನೆನೆದರು.

‘ಜಿಲ್ಲೆಯು ಸ್ವಾತಂತ್ರ್ಯ ಹೋರಾಟಕ್ಕೆ ಅಮೂಲ್ಯ ಕಾಣಿಕೆ ಕೊಟ್ಟಿದೆ. ಸಿ.ರಂಗಸ್ವಾಮಿ, ಗೋಪಾಲರಾಯರು, ವೆಂಕಟ್‌ರಾವ್‌, ಡಿ.ಜೆ.ಶಂಕರಪ್ಪ, ಕೃಷ್ಣಮೂರ್ತಿ, ರಂಗಸ್ವಾಮಿ ನಾಯಕ ಅವರು 1942 ಕ್ವಿಟ್‌ ಇಂಡಿಯಾ ಚಳವಳಿ, 1947ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದರು. ಎಚ್‌.ಕೆ.ಕುಮಾರಸ್ವಾಮಿ ಅವರು ತಾಲ್ಲೂಕು ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷರಾಗಿ, ವೆಂಕಟಸುಬ್ಬಶೆಟ್ಟಿ ಅವರು ಈ ಸಂಘದ ಕಾರ್ಯದರ್ಶಿಯಾಗಿ ಅವಿರತ ಹೋರಾಟ ನಡೆಸಿದ್ದಾರೆ. ಸಿ.ಯತಿರಾಜು, ಪಣ್ಯದ ಸಿದ್ದಪ್ಪ, ಮಲೆಯೂರು ಚಿಕ್ಕಲಿಂಗಪ್ಪ, ಪದ್ಮರಾಜ್‌ ಪಂಡಿತ್‌, ಕೆ.ವಿ.ಕೃಷ್ಣಮೂರ್ತಿ, ಐಎನ್‌ಎ ರಾಮರಾವ್‌, ಗಾಂಧಿ ಪುಟ್ಟನಂಜಪ್ಪ, ತೋಟಪ್ಪ, ಗಾಂಧಿ ಬಸವಯ್ಯ, ಡಿ.ಬಸಪ್ಪ, ಬಣ್ಣದ ಬಸಪ್ಪ, ಮಹಿಳಾ ಹೋರಾಟಗಾರರಾದ ಲಲಿತಾಜಿ ಟ್ಯಾಗೆಟ್‌, ಗಜಲಕ್ಷ್ಮಿಬಾಯಿ, ಕಮಲಮ್ಮ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರೆ’ ಎಂದು ಸಚಿವರು ಹೇಳಿದರು.

‘ಹಲವಾರು ವರ್ಷಗಳ ಕಾಲ ಪ್ರಾಣದ ಹಂಗು ತೊರೆದು ತಮ್ಮ ಸರ್ವಸ್ವವನ್ನು ನಾಡಿಗೆ ಸಮರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರರ ದಿವ್ಯ ಚೇತನಗಳ ಶ್ರಮ ವ್ಯರ್ಥವಾಗದಂತೆ ನಾವು ಒಗ್ಗಟ್ಟಿನಿಂದ ಬದುಕಬೇಕಿದೆ. ದೇಶದಲ್ಲಿ ಅಶಾಂತಿ ಉಂಟು ಮಾಡುತ್ತಿರುವ ಆಂತರಿಕ ಹಾಗೂ ಬಾಹ್ಯ ದುಷ್ಟ ಶಕ್ತಿಗಳನ್ನು ಮೆಟ್ಟಿ ನಿಲ್ಲಲು ಹೋರಾಟ ರೂಪಿಸಬೇಕಾಗಿದೆ. ದೇಶದ ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ ಜಾಗೃತವಾದಾಗ ಇದು ಸಾಧ್ಯವಾಗಲಿದೆ’ ಎಂದು ಸುರೇಶ್‌ ಕುಮಾರ್‌ ಅವರು ಪ್ರತಿಪಾದಿಸಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಅಶ್ವಿನಿ, ಉಪಾಧ್ಯಕ್ಷೆ ಶಶಿಕಲಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶೋಭಾ ಎಚ್‌.ಎಸ್‌. ಉಪಾಧ್ಯಕ್ಷ ಕೆ.ರವೀಶ್‌, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‌ ಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್‌ ಮತ್ತಿತರರು ಇದ್ದರು.

ಕೊರೊನಾ ಸೈನಿಕರಿಗೆ ಸನ್ಮಾನ

ಸಮಾರಂಭದಲ್ಲಿ ಕೋವಿಡ್‌ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡುತ್ತಿರುವ ಸೈನಿಕರನ್ನು ಸನ್ಮಾನಿಸಲಾಯಿತು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೋಯರ್‌ ನಾರಾಯಣರಾವ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ.ರವಿ, ವೈದ್ಯಕೀಯ ಕಾಲೇಜಿನ ಡೀನ್‌ ಡಾ.ಸಂಜೀವ್‌, ಪೊಲೀಸ್‌ ಅಧಿಕಾರಿಗಳು, ವೈದ್ಯರು, ನರ್ಸ್‌ಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಆಂಬುಲೆನ್ಸ್‌ ಚಾಲಕರು, ಆಶಾ ಕಾರ್ಯಕರ್ತರು, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಮೃತಪಟ್ಟ ಸೋಂಕಿತರ ಅಂತ್ಯ ಸಂಸ್ಕಾರ ನಡೆಸುತ್ತಿರುವ ಸ್ವಯಂ ಸೇವಕರು ಸೇರಿದಂತೆ 100ಕ್ಕೂ ಹೆಚ್ಚು ಮಂದಿಯನ್ನು ಸನ್ಮಾನಿಸಲಾಯಿತು.

ಕೋವಿಡ್‌ ವಿರುದ್ಧ ಹೋರಾಟ ಮಾಡುತ್ತಿರುವ ಕೊರೊನಾ ಸೈನಿಕರ ಸೇವೆಗೆ ಸಚಿವರು ಕೃತಜ್ಞತೆ ಸಲ್ಲಿಸಿದರು.

ಎಸ್ಸೆಸ್ಸೆಲ್ಸಿ ಸಾಧಕರಿಗೆ ಸನ್ಮಾನ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕಗಳಿಸಿದ ಮೇಘನಾ ಎಂ, ಯಶಸ್ವಿನಿ ಎಂ, ಖುಷಿ ಡಿ.ಎಂ, ಮೇಘನಾ ಜಿ.ಎಸ್‌, ಶ್ರೀಕೃತಾ ಎಸ್‌ ಹಾಗೂ ಇತರ ಐವರು ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.