ADVERTISEMENT

ದುಶ್ಚಟಗಳಿಂದ ಸಾಮಾಜಿಕ ಮತ್ತು ಕೌಟುಂಬಿಕ ದುರಂತ: ತಹಶೀಲ್ದಾರ್ ಎಸ್.ಎನ್. ನಯನ

ಇಳಕಲ್ ಮಹಾಂತ ಶಿವಯೋಗಿಗಳ ಜನ್ಮದಿನ; ವ್ಯಸನಮುಕ್ತ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 6:11 IST
Last Updated 2 ಆಗಸ್ಟ್ 2025, 6:11 IST
ಯಳಂದೂರು ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಇಳಕಲ್ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆ ಜಾಗೃತಿ ಅಭಿಯಾನಕ್ಕೆ ತಹಶೀಲ್ದಾರ್ ಎಸ್.ಎನ್. ನಯನ ಚಾಲನೆ ನೀಡಿದರು.
ಯಳಂದೂರು ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಇಳಕಲ್ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆ ಜಾಗೃತಿ ಅಭಿಯಾನಕ್ಕೆ ತಹಶೀಲ್ದಾರ್ ಎಸ್.ಎನ್. ನಯನ ಚಾಲನೆ ನೀಡಿದರು.   

ಯಳಂದೂರು: ‘ದುಶ್ಚಟಗಳಿಂದ ಸಮಾಜದ ಮೇಲೆ ಉಂಟಾಗುವ ಪರಿಣಾಮಗಳಿಗೆ ಮನನೊಂದು ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ, ದುರ್ವ್ಯಸನಕ್ಕೆ ಕಾರಣವಾಗುವ ಪದಾರ್ಥಗಳನ್ನು ಜೋಳಿಗೆ ಹಿಡಿದು ಬೇಡಿದ ಸಂತ ಡಾ.ಮಹಾಂತ ಶಿವಯೋಗಿಗಳು’ ಎಂದು ತಹಶೀಲ್ದಾರ್ ಎಸ್.ಎನ್. ನಯನ ಅಭಿಪ್ರಾಯಪಟ್ಟರು.

ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆಧುನಿಕತೆಯ ಜಾಲದಲ್ಲಿ ಸಿಲುಕಿರುವ ಯುವಕರು ಸುಲಭವಾಗಿ ಅಮುಲು ಬರುವ ಪದಾರ್ಥಗಳನ್ನು ಸೇವಿಸುತ್ತಾರೆ. ಇದರಿಂದ ಇವರ ದೇಹ ಮತ್ತು ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಇದು ಇವರ ವರ್ತನೆಯಲ್ಲಿ ಪರಿವರ್ತನೆ ತರುತ್ತದೆ. ಇದರಿಂದ ಚಿಕ್ಕ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಮತ್ತು ಯುವ ಜನತೆ ಹತ್ತಾರು ಮಾರಕ ರೋಗಗಳಿಗೆ ಸಿಲುಕಿ ಆರ್ಥಿಕ ಮತ್ತು ಕೌಟುಂಬಿಕ ದುರಂತಗಳಿಗೆ ಸಿಲುಕುತ್ತಾರೆ ಎಂದರು.

ADVERTISEMENT

ಮನೋವೈದ್ಯ ಪಿ. ಮಾದೇಶ್ ಮಾತನಾಡಿ, ‘ಮಹಾಂತಸ್ವಾಮಿಗಳು ಚಿಕ್ಕ ವಯಸ್ಸಿನಲ್ಲಿ ಮಠಾಧಿಕಾರಿ ಹುದ್ದೆ ಅಲಂಕರಿಸಿದರು. ಟ್ರಸ್ಟ್ ಸ್ಥಾಪಿಸಿ ದೇವದಾಸಿಯರ ಮಕ್ಕಳಿಗೆ ಅನ್ನ, ಅರಿವೆ, ಅಕ್ಷರ ನೀಡಿದರು. ನಿರಂತರ ದಾಸೋಹ, ವಚನ ಮಾಂಗಲ್ಯ, ವಿಧವೆಯರ ಕಾಯಕ ಹಾಗೂ ಪರಿಶಿಷ್ಟರಿಗೆ ಧರ್ಮ ಸಂಸ್ಕಾರ ನೀಡಿ, ಸುಂದರ ಬದುಕು ಕಟ್ಟಿಕೊಳ್ಳಲು ನೆರವಾದರು. ಸ್ತ್ರೀಯರಗೆ ಜಂಗಮ ದೀಕ್ಷೆ ನೀಡಿ, ಗ್ರಾಮೀಣ ಭಾರತದ ಕೃಷಿಕರಿಗೆ ಮಾರ್ಗದರ್ಶನ ಮಾಡಿದರು’ ಎಂದು ಹೇಳಿದರು.

ಮಹಾಂತರು 1975 ರಿಂದ ನಿರಂತರವಾಗಿ ಜೋಳಿಗೆ ಕಾರ್ಯ ಮಾಡುತ್ತ ಬಂದರು. ಕುಡಿತ, ಧೂಮಪಾನ ಹಾಗೂ ಮತ್ತು ಬರಿಸುವ ವಸ್ತುಗಳ ವ್ಯಸನಿಗಳ ಮನೆಗಳಿಗೆ ತೆರಳಿ ಜೋಳಿಗೆಯಲ್ಲಿ ಹಾಕುವಂತೆ ಮನವೊಲಿಸಿದರು. ಜಾತಿ, ಮತ, ಪಂಥದ ಗೊಡವೆಗೆ ಬೀಳದೆ, ಧರ್ಮ, ಭಾಷೆ, ದೇಶ-ವಿದೇಶಗಳಲ್ಲಿ 40ಕ್ಕೂ ಎಚ್ಚು ವರ್ಷಗಳ ಕಾಲ ಜಾಗೃತಿ ಮೂಡಿಸಿದರು. ಮಕ್ಕಳು, ಯುವ ಜನಾಂಗ ವ್ಯಸನದ ಚಟದಿಂದ ಮುಕ್ತರಾಗಲು ಶ್ರಮಿಸಿದರು. ಹಾಗಾಗಿ, ಇಂದು ನಗರ-ಹಳ್ಳಿ ಎನ್ನದೆ ಲಕ್ಷಾಂತರ ಕುಟುಬಗಳು ನೆಮ್ಮದಿಯಿಂದ ಬದುಕು ಕಟ್ಟಿಕೊಂಡಿವೆ’ ಎಂದರು.

ಸರ್ಕಾರಿ ಪಿಯು ಕಾಲೇಜಿನ ಮಕ್ಕಳು ಜಾಗೃತಿ ಜಾಥದಲ್ಲಿ ಭಾಗವಹಿಸಿದ್ದರು. ಪಿ.ಮಾದೇಶ್ ಸಾರ್ವಜನಿಕರಿಗೆ ಆಪ್ತ ಸಮಾಲೋಚನೆ ನಡೆಸಿದರು.

ತಾಲ್ಲೂಕು ಕಚೇರಿಯ ರಾಜಶ್ವ ನಿರೀಕ್ಷಕ ಎಂ.ಎಸ್.ಯದುಗಿರಿ, ಅಧಿಕಾರಿಗಳಾಧ ಸರಸ್ವತಿ, ಪ್ರಶಾಂತ್, ಸಿದ್ದರಾಮಪ್ಪ, ಅರಣ್, ವಾಸು ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.