ADVERTISEMENT

ಆದಿವಾಸಿಗಳಲ್ಲಿ ಗರಿಗೆದರಿದ ಸೂರಿನ ನಿರೀಕ್ಷೆ

‘ಮುಖ್ಯಮಂತ್ರಿಗಳ ಆದಿವಾಸಿ ಗೃಹಭಾಗ್ಯ ಯೋಜನೆ’ಗೆ ಆಡಳಿತಾತ್ಮಕ ಅನುಮೋದನೆ

ಬಾಲಚಂದ್ರ ಎಚ್.
Published 14 ಸೆಪ್ಟೆಂಬರ್ 2025, 3:08 IST
Last Updated 14 ಸೆಪ್ಟೆಂಬರ್ 2025, 3:08 IST
ಹನೂರು ತಾಲ್ಲೂಕಿನಲ್ಲಿರುವ ಆದಿವಾಸಿಗಳ ಜೋಪಡಿ
ಹನೂರು ತಾಲ್ಲೂಕಿನಲ್ಲಿರುವ ಆದಿವಾಸಿಗಳ ಜೋಪಡಿ   

ಚಾಮರಾಜನಗರ: ಹಾಡಿ–ಪೋಡು, ಕಾಡಂಚಿನ ಗ್ರಾಮಗಳಲ್ಲಿ ಬದುಕು ಕಟ್ಟಿಕೊಂಡಿರುವ ಪರಿಶಿಷ್ಟ ಪಂಡಗಳಿಗೆ ಸೇರಿರುವ ವಸತಿ ರಹಿತ ಅರಣ್ಯ, ಅರಣ್ಯಾಧಾರಿತ, ಸೂಕ್ಷ್ಮ ಸಮುದಾಯಗಳಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಡುವ ಉದ್ದೇಶದಿಂದ ‘ಮುಖ್ಯಮಂತ್ರಿಗಳ ಆದಿವಾಸಿ ಗೃಹಭಾಗ್ಯ ಯೋಜನೆ’ ಜಾರಿಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಈಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ನೆಲೆಸಿರುವ ಸೋಲಿಗರು, ಹಸಲರು, ಗೌಡಲು, ಸಿದ್ದಿ, ಕುಡಿಯ, ಮಲೆಕುಡಿಯ, ಕಾಡುಕುರುಬ, ಇರುಳಿಗ, ಬೆಟ್ಟ ಕುರುಬ, ಯರವ, ಪಣಿಯನ್ ಸೇರಿದಂತೆ ಇತರೆ ಸಮುದಾಯಗಳ 6,856 ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿಕೊಡಲು ನಿರ್ಣಯ ತೆಗೆದುಕೊಳ್ಳಲಾಗಿದೆ.

₹ 160 ಕೋಟಿ ವೆಚ್ಚದ ಯೋಜನೆ ಇದಾಗಿದ್ದು ₹4.50 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಡಲು ನಿರ್ಧರಿಸಲಾಗಿದೆ. ಈ ಮೂಲಕ ನೆತ್ತಿ ಮೇಲೊಂದು ಸ್ವಂತ ಸೂರು ಕಟ್ಟಿಕೊಳ್ಳಬೇಕು ಎಂಬ ಆದಿವಾಸಿಗಳ ಕನಸು ದಶಕಗಳ ಬಳಿಕ ನನಸಾಗುವ ನಿರೀಕ್ಷೆಗಳು ಗರಿಗೆದರಿದೆ.

ಜಿಲ್ಲೆಯಲ್ಲಿ ಹನೂರು, ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು ತಾಲ್ಲೂಕುಗಳಲ್ಲಿ ಬುಡಕಟ್ಟು ಸಮುದಾಯಗಳಿಗೆ ಸೇರಿರುವ 32,500ಕ್ಕೂ ಹೆಚ್ಚು ಆದಿವಾಸಿಗಳು ನೆಲೆಸಿದ್ದಾರೆ. 2,995 ಕುಟುಂಬಗಳಿಗೆ ಸ್ವಂತ ಸೂರು ಇಲ್ಲ. ಸಾವಿರಾರು ಮಂದಿ ಮುರಿದು ಬೀಳುವ ಮುರುಕಲು ಜೋಪಡಿಯೊಳಗೆ ವಾಸವಾಗಿದ್ದಾರೆ.

‌ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗದ, ವಸತಿ ಯೋಜನೆಗಳಿಂದ ವಂಚಿತರಾಗಿದ್ದ ಆದಿವಾಸಿಗಳು ‘ಮುಖ್ಯಮಂತ್ರಿಗಳ ಆದಿವಾಸಿ ಗೃಹಭಾಗ್ಯ ಯೋಜನೆ’ಯಲ್ಲಾದರೂ ಸೂರು ದಕ್ಕುತ್ತದೆಯೇ ಎಂಬ ನಿರೀಕ್ಷೆಯಲ್ಲಿದ್ದಾರೆ.

ಚಾಮರಾಜನಗರ ಮಾದರಿ:

‘ಮುಖ್ಯಮಂತ್ರಿಗಳ ಆದಿವಾಸಿ ಗೃಹಭಾಗ್ಯ ಯೋಜನೆ’ಗೆ ಆಡಳಿತಾತ್ಮಕ ಅನುಮೋದನೆ ದೊರೆಯಲು ಚಾಮರಾಜನಗರ ಜಿಲ್ಲಾಡಳಿತದ ಶ್ರಮ ಅಪಾರ. ಎರಡು ವರ್ಷಗಳ ಹಿಂದೆಯೇ ಜಿಲ್ಲೆಯಲ್ಲಿ ಮನೆ ಮನೆ ಸಮೀಕ್ಷೆ ನಡೆಸಿದ್ದ ‌ಜಿಲ್ಲಾಡಳಿತ ಸೂರಿಲ್ಲದ ಆದಿವಾಸಿ ಕುಟುಂಬಗಳ ಮಾಹಿತಿ ಸಂಗ್ರಹಿಸಿ 2,995 ಮಂದಿಗೆ ಮನೆಗಳನ್ನು ಕಟ್ಟಿಕೊಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು.

ಕೆಲವು ತಿಂಗಳ ಹಿಂದಷ್ಟೆ ಸೂರಿಲ್ಲದ ಆದಿವಾಸಿ ಕುಟುಂಬವೊಂದಕ್ಕೆ ಜಿಲ್ಲಾಡಳಿತದ ವತಿಯಿಂದ ₹ 5 ಲಕ್ಷ ವೆಚ್ಚದಲ್ಲಿ ‘ಸಿದ್ದು ಸೂರು’ ಹೆಸರಿನ ಮನೆ ನಿರ್ಮಾಣ ಮಾಡಿ ಇದೇ ಮಾದರಿಯ ಮನೆಗಳನ್ನು ಜಿಲ್ಲೆಯ ಆದಿವಾಸಿಗಳಿಗೆ ನಿರ್ಮಾಣ ಮಾಡಿಕೊಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು.

ಈಚೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲೂ ಆದಿವಾಸಿಗಳಿಗೆ ಮನೆ ನಿರ್ಮಿಸಿಕೊಡುವ ವಿಚಾರ ಪ್ರಮುಖವಾಗಿ ಚರ್ಚೆಯಾಗಿತ್ತು. ಜಿಲ್ಲೆಗೆ ಸೀಮಿತವಾಗಿ ರೂಪುಗೊಂಡಿದ್ದ ‘ಸಿದ್ದು ಸೂರು’ ಯೋಜನೆ ‘ಮುಖ್ಯಮಂತ್ರಿಗಳ ಆದಿವಾಸಿ ಗೃಹಭಾಗ್ಯ ಯೋಜನೆ’ ಹೆಸರಿನಲ್ಲಿ ರಾಜ್ಯದೆಲ್ಲೆಡೆ ವಿಸ್ತರಣೆ ಮಾಡಲು ಸರ್ಕಾರ ನಿರ್ಧರಿಸಿರುವುದು ಸಂತಸ ತಂದಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್‌.

ಆರಂಭದ ‘ಸಿದ್ದು ಮನೆ’ ಯೋಜನೆಯನ್ನು ಆದಿವಾಸಿಗಳ ಜೀವನಶೈಲಿ, ಆಹಾರ ಕ್ರಮ, ಅಗತ್ಯತೆಯನ್ನು ಮನಗೊಂಡು ತಜ್ಞರ ಸಲಹೆಯಂತೆ ಕಡಿಮೆ ವೆಚ್ಚದಲ್ಲಿ ಮೂಲಸೌಲಭ್ಯಗಳು ಇರುವಂತೆ ವಿಶಿಷ್ಟವಾಗಿ ರೂಪಿಸಲಾಗಿತ್ತು. ಅದರಂತೆಯೇ ಪರಿಷ್ಕೃತ ಯೋಜನೆಯಲ್ಲೂ ಆದಿವಾಸಿಗಳಿಗೆ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎನ್ನುತ್ತಾರೆ ಜಿಲ್ಲಾಧಿಕಾರಿ. 

2995 ಮನೆಗಳಿಗೆ ಬೇಡಿಕೆ

ಸೂರಿಲ್ಲದವರನ್ನು ಪತ್ತೆಹಚ್ಚಲು ಜಿಲ್ಲಾಡಳಿತ ಸಮೀಕ್ಷೆ ನಡೆಸುವಾಗ ಆದಿವಾಸಿಗಳು ಮಳೆಗಾಲದಲ್ಲಿ ಸೋರುವ ಜೋಪಡಿಗಳಿಗೆ ಹೊದಿಸಲು ಟಾರ್ಪಾಲ್‌ಗಳನ್ನು ನೀಡುವಂತೆ ಗೋಗರೆಯುತ್ತಿದ್ದ ಸನ್ನಿವೇಶ ‘ಸಿದ್ದು ಸೂರು’ ಯೋಜನೆ ರೂಪುಗೊಳ್ಳಲು ಸಹಕಾರಿಯಾಯಿತು. 2995 ಕುಟುಂಬಗಳಿಗೆ ₹ 150 ಕೋಟಿ ವೆಚ್ಚದಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಉಸ್ತುವಾರಿ ಸಚಿವರು ಶಾಸಕರು ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಪ್ರಯತ್ನ ಹಾಕಿದಕ್ಕೆ ಪ್ರತಿಫಲ ದೊರೆಯುತ್ತಿದೆ. ಜಿಲ್ಲೆಯ ಗರಿಷ್ಠ ಫಲಾನುಭವಿಗಳಿಗೆ ಮನೆಗಳು ಮಂಜೂರಾಗುವ ನಿರೀಕ್ಷೆ ಇದೆ.  –ಸಿ.ಟಿ.ಶಿಲ್ಪಾನಾಗ್ ಜಿಲ್ಲಾಧಿಕಾರಿ

ಅಭಿನಂದನೆ ಆದಿವಾಸಿ

ಗೃಹ ಭಾಗ್ಯ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿರುವುದು ಆದಿವಾಸಿ ಸಮುದಾಯಗಳಿಗೆ ಸಂತಸ ತಂದಿದೆ. ಸಮುದಾಯದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೊಳ್ಳೇಗಾಲ ಶಾಸಕ ಕೃಷ್ಣಮೂರ್ತಿ ಮಾಜಿ ಶಾಸಕ ನರೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. –ನಾಗೇಂದ್ರ ಆದಿವಾಸಿ ಹಿತರಕ್ಷಣ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.