ADVERTISEMENT

ಪೊನ್ನಾಚಿ: ಅಗರಬತ್ತಿ ಘಟಕಕ್ಕೆ ಪ್ರೋತ್ಸಾಹ

ಮಲೆಮಹದೇಶ್ವರ ವನ್ಯಧಾಮ: ಸೈಕಲ್‌ ಬ್ರ್ಯಾಂಡ್‌ ಕಂಪನಿ ಜೊತೆ ಒಪ್ಪಂದ, ಬಿದಿರು ಬೆಳೆಯಲು ಪ್ರೋತ್ಸಾಹ

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 19:30 IST
Last Updated 16 ಜುಲೈ 2022, 19:30 IST
ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಹಾಗೂ ಡಿಸಿಎಫ್‌ ಏಡುಕುಂಡಲು ಅವರು ಇತ್ತೀಚೆಗೆ ಪೊನ್ನಾಚಿಗೆ ಭೇಟಿ ನೀಡಿ ಅಗರಬತ್ತಿ ತಯಾರಿಕಾ ಘಟಕದ ಸ್ಥಳ ಪರಿಶೀಲನೆ ನಡೆಸಿದರು
ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಹಾಗೂ ಡಿಸಿಎಫ್‌ ಏಡುಕುಂಡಲು ಅವರು ಇತ್ತೀಚೆಗೆ ಪೊನ್ನಾಚಿಗೆ ಭೇಟಿ ನೀಡಿ ಅಗರಬತ್ತಿ ತಯಾರಿಕಾ ಘಟಕದ ಸ್ಥಳ ಪರಿಶೀಲನೆ ನಡೆಸಿದರು   

ಹನೂರು:ಅರಣ್ಯದೊಳಗಿರುವ ಜನರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಪರಿಸರ ಸ್ನೇಹಿಯಾಗಿರುವ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಅರಣ್ಯ ಇಲಾಖೆ ಈಗ ತಾಲ್ಲೂಕಿನ ಪೊನ್ನಾಚಿ ಗ್ರಾಮದಲ್ಲಿ ಅಗರಬತ್ತಿ ತಯಾರಿಕಾ ಘಟಕ ಸ್ಥಾಪನೆಗೂ ‍ಪ್ರೋತ್ಸಾಹ ನೀಡಲು ಮುಂದಾಗಿದೆ.

ಮಲೆಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿರುವ ಜನರು ಉದ್ಯೋಗಕ್ಕಾಗಿ ಬೆಂಗಳೂರು, ತಮಿಳುನಾಡು ಮುಂತಾದ ಕಡೆಗೆ ಗುಳೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಿ ಗ್ರಾಮದಲ್ಲೇ ಉದ್ಯೋಗ ಸೃಷ್ಟಿಸಿ ಅವರನ್ನು ಆರ್ಥಿಕ ಸಬಲೀಕರಣಗೊಳಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಈಗಾಗಲೇ ಬಿದಿರು ಸಂಸ್ಕರಣಾ ಘಟಕ, ಜೇನು ಪೆಟ್ಟಿಗೆ ತಯಾರಿಸಿ ಜೇನು ಸಂಗ್ರಹಣೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಘಟಕ ನಿರ್ಮಿಸಿದೆ.

ಇದರ ಮಧ್ಯೆ ಮಹಿಳೆಯರು ಹಾಗೂ ವೃದ್ಧರಿಗೂ ಮನೆಯಲ್ಲಿಯೇ ಉದ್ಯೋಗ ನೀಡಬೇಕು ಎಂಬ ಉದ್ದೇಶದಿಂದ ಅಗರಬತ್ತಿ ತಯಾರಿಕಾ ಘಟಕ ಸ್ಥಾಪನೆಗೆ ಯೋಜನೆ ರೂಪಿಸಿ ಶೀಘ್ರದಲ್ಲೇ ಕೆಲಸ ಆರಂಭಿಸಲು ಸಿದ್ಧತೆಗಳನ್ನು ಮಾಡಿಕೊಂಡಿದೆ. ಈಗಾಗಲೇ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ADVERTISEMENT

ಸೈಕಲ್ ಬ್ರ್ಯಾಂಡ್ ಜತೆ ಒಪ್ಪಂದ: ‘ಘಟಕ ನಿರ್ಮಾಣಕ್ಕೆ ಸೈಕಲ್ ಬ್ರ್ಯಾಂಡ್ ಕಂಪನಿ ಸಹಕಾರ ನೀಡವುದಾಗಿ ಭರವಸೆ ನೀಡಿದ್ದು, ಈಗಾಗಲೇ ಕಂಪನಿ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕಂಪನಿಗೆ ನಾವು ಸ್ಥಳವಕಾಶ ನೀಡಿದರೆ ಕಚ್ಚಾ ವಸ್ತುಗಳನ್ನು ಕಂಪನಿಯೇ ಪೂರೈಸಿ ಸಿದ್ಧಪಡಿಸಿದ ವಸ್ತುಗಳನ್ನು ಕೊಂಡೊಯ್ದು ಅದಕ್ಕೆ ತಕ್ಕ ಸಂಭಾವನೆ ನೀಡಲಿದೆ. ಇಲ್ಲಿ ಕಂಪನಿ ಹಾಗೂ ಗ್ರಾಮಸ್ಥರು ನೇರವಾಗಿ ಸಂಪರ್ಕದಲ್ಲಿದ್ದು, ಅರಣ್ಯ ಇಲಾಖೆ ಇಬ್ಬರ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸಲಿದೆ’ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.

400 ಎಕರೆಯಲ್ಲಿ ಬಿದಿರು: ‘ಅಗರಬತ್ತಿ ತಯಾರಿಕೆಗೆ ಬಿದಿರು ಕಡ್ಡಿ ಅತ್ಯವಶ್ಯವಾಗಿದ್ದು ಸ್ಥಳೀಯ ರೈತರು ಫಸಲು ಮಾಡದೇ ಪಾಳು ಬಿಟ್ಟಿರುವ ಜಮೀನುಗಳಲ್ಲಿ ಬಿದಿರು ಬೆಳೆಯಲು ಪ್ರೋತ್ಸಾಹ ನೀಡಲಾಗುವುದು. ರೈತರು ತಾವು ಬೆಳೆದ ಬಿದಿರನ್ನು ಬಿದಿರು ಸಂಸ್ಕರಣಾ ಘಟಕ ಹಾಗೂ ಅಗರಬತ್ತಿ ನಿರ್ಮಾಣಕ್ಕೂ ಕೊಡಬಹುದಾಗಿದೆ. ಪ್ರತಿ ವರ್ಷ ರೈತರು ಒಂದು ಎಕರೆ ಬಿದಿರು ನೀಡಿದರೆ ಅವರಿಗೆ ₹15 ಲಕ್ಷದಷ್ಟು ಲಾಭ ದೊರೆಯಲಿದೆ. ಈ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗಿದೆ’ ಎನ್ನುತ್ತಾರೆ ಅಧಿಕಾರಿಗಳು.

ಟಾಲ್ಡಾ ಬಿದಿರಿಗೆ ಪ್ರೋತ್ಸಾಹ

‘ಅಗರಬತ್ತಿ ಮಾಡಲು ‘ಟಾಲ್ಡಾ’ ಎಂಬ ಬಿದಿರಿನ ಕಡ್ಡಿಯನ್ನು ಉಪಯೋಗಿಸಲಾಗುತ್ತದೆ. ಸೈಕಲ್ ಬ್ರ್ಯಾಂಡ್ ಕಂಪನಿಯು ಶೇ 90 ಭಾಗದಷ್ಟು ಕಡ್ಡಿಯನ್ನು ಉತ್ತರ ಭಾರತದಿಂದ ತರಿಸುತ್ತಿದೆ. ಇದೇ ಬಿದಿರನ್ನು ರೈತರ ಜಮೀನುಗಳಲ್ಲಿ ಬೆಳೆಸಿದರೆ ಅವರಿಗೂ ಆದಾಯ ದೊರೆಯಲಿದೆ. ಈಗಾಗಲೇ 200 ಎಕರೆಯಲ್ಲಿ ಬಿದಿರು ಬೆಳೆಯುವುದಕ್ಕಾಗಿ ಅನುದಾನ ಬಂದಿದೆ. ಕಂಪನಿ 15 ಸಾವಿರದಷ್ಟು ಬಿತ್ತನೆ ಬೀಜಗಳನ್ನು ನೀಡುವುದಾಗಿ ತಿಳಿಸಿದೆ. ಇದನ್ನು ರೈತರಿಗೆ ವಿತರಿಸಿ ಅವರ ಜಮೀನುಗಳಲ್ಲಿ ಬೆಳೆಯುವಂತೆ ಅವರಿಗೆ ಮಾರ್ಗದರ್ಶನ ನೀಡಲಾಗುವುದು’ ಎಂದು ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಏಡುಕುಂಡಲು ತಿಳಿಸಿದರು.

------

ಅಗರಬತ್ತಿ ಘಟಕ ನಿರ್ಮಾಣಕ್ಕೆ ಬಿದಿರು ಸಂಸ್ಕರಣಾ ಘಟಕದ ಒಂದು ಕೊಠಡಿಯನ್ನೇ ಬಳಸಿಕೊಳ್ಳಲಾಗುವುದು. ಯಂತ್ರಗಳಿಗೆ ₹50 ಲಕ್ಷ ವೆಚ್ಚವಾಗಲಿದೆ
- ವಿ. ಏಡುಕುಂಡಲು, ಡಿಸಿಎಫ್, ಮಲೆಮಹದೇಶ್ವರ ವನ್ಯಧಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.