ಚಾಮರಾಜನಗರ: ಏಪ್ರಿಲ್ 29 ಮತ್ತು 30ರಂದು ಜಿಲ್ಲೆಯ ವಿವಿಧ ಕಡೆಗಳಲ್ಲಿ ಸುರಿದ ಗಾಳಿ ಸಹಿತ ಮಳೆಗೆ 365 ಎಕರೆಗಳಷ್ಟು ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ನಾಶವಾಗಿದೆ. 8 ಎಕರೆಯಷ್ಟು ತರಕಾರಿ ಬೆಳೆಗಳಿಗೆ ಹಾನಿಗೀಡಾಗಿವೆ.
ತೋಟಗಾರಿಕಾ ಇಲಾಖೆಯು ಹಾನಿಗೀಡಾದ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದ್ದು, ಒಟ್ಟು ₹5.88 ಕೋಟಿ ನಷ್ಟ ಸಂಭವಿಸಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.
ಏಪ್ರಿಲ್ 29 ಮತ್ತು 30ರಂದು ಜಿಲ್ಲೆಯಾದ್ಯಂತ ಬೀಸಿದ ಬಿರುಗಾಳಿಗೆ ಚಾಮರಾಜನಗರ ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಪಾರ ಹಾನಿ ಸಂಭವಿಸಿತ್ತು.ಕಟಾವಿಗೆ ಸಿದ್ಧವಾಗಿದ್ದ ನೂರಾರು ಎಕರೆ ಬಾಳೆ ತೋಟ ನೆಲಕ್ಕುರುಳಿತ್ತು. ತೆಂಗಿನ ಮರಗಳೂ ಧರೆಗುರುಳಿದ್ದವು.
ಚಾಮರಾಜನಗರ ತಾಲ್ಲೂಕಿನ ಸಿದ್ದಯ್ಯನಪುರ, ಕೊತ್ತಲವಾಡಿ, ಕಟ್ನವಾಡಿ, ಕಿಲಗೆರೆ, ಅರಕಲವಾಡಿ, ವಿ.ಸಿ. ಹೊಸೂರು, ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಸೇರಿದಂತೆ ಹಲವು ಕಡೆಗಳಲ್ಲಿ ರೈತರು ಬೆಳೆದಿದ್ದ ಬಾಳೆ ನೆಲಕ್ಕಚ್ಚಿತ್ತು.
ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಮೇ 2ರಂದು ಅಧಿಕಾರಿಗಳೊಂದಿಗೆ ಕಿಲಗೆರೆ, ಯಾನಗನಹಳ್ಳಿ, ಮಾದಲವಾಯಡಿಗ, ಬೇಲುಕುಪ್ಪೆ, ಮಾಯನಾಯಕನಪುರ ಗ್ರಾಮಗಳಿ ಬೆಳೆಹಾನಿ ಸಂಭವಿಸಿದ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬೆಳೆ ಹಾನಿ ಪ್ರದೇಶದ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಈ ಸಂದರ್ಭದಲ್ಲಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು.
ರೈತರ ಅಹವಾಲು ಆಲಿಸಿದ್ದ ಕಾವೇರಿ ಅವರು, ‘ಸಮೀಕ್ಷೆ ನಡೆಸಿದ ಬಳಿಕ ಸೂಕ್ತ ಹಾಗೂ ಸಮರ್ಪಕ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಭರವಸೆ ನೀಡಿದ್ದರು.
ಅದರಂತೆ ಸಮೀಕ್ಷೆ ನಡೆಸಿದ್ದ ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹಾನಿಯ ವರದಿ ಸಿದ್ಧಪಡಿಸಿದ್ದಾರೆ.
‘ಜಿಲ್ಲೆಯಾದ್ಯಂತ ಬೆಳೆಹಾನಿಗೆ ಸಂಬಂಧಿಸಿದಂತೆ ಜಂಟಿ ಸಮೀಕ್ಷೆ ಪೂರ್ಣಗೊಂಡಿದೆ. ನಿಯಮಗಳ ಅನುಸಾರ ಪರಿಹಾರ ವಿತರಿಸಲಾಗುವುದು. ತಹಶೀಲ್ದಾರ್ ಮಟ್ಟದಲ್ಲಿ ಪರಿಹಾರ ವಿತರಣೆಯಾಗಲಿದೆ’ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಗಾಳಿಮಳೆಯಿಂದಾಗಿ ಬಾಳೆ ಬೆಳೆಗೆ ಹೆಚ್ಚು ಹಾನಿಯಾಗಿದೆ. ಸ್ವಲ್ಪ ಪ್ರಮಾಣದಲ್ಲಿ ತರಕಾರಿ ತೋಟವೂ ನಾಶವಾಗಿದೆ. ಕೆಲವು ತೆಂಗಿನಮರಗಳು ಧರೆಗುರುಳಿವೆ. ಕಬ್ಬು ಸೇರಿದಂತೆ ಬೇರೆ ಯಾವುದೇ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿಲ್ಲ’ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ವೈಜ್ಞಾನಿಕ ಪರಿಹಾರಕ್ಕೆ ಆಗ್ರಹ:ಈ ಮಧ್ಯೆ, ಗಾಳಿ ಮಳೆಯಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು ಎಂದು ರೈತ ಮುಖಂಡರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.