ADVERTISEMENT

ಯಳಂದೂರು: ಭತ್ತದ ನಾಟಿಗೆ ಪಶ್ಚಿಮ ಬಂಗಾಳ ಶ್ರಮಿಕರು

ಕಾರ್ಮಿಕರ ಕೊರತೆಗೆ ಪರಿಹಾರ ಕಂಡುಕೊಂಡ ಕೃಷಿಕರು   

ನಾ.ಮಂಜುನಾಥ ಸ್ವಾಮಿ
Published 16 ಸೆಪ್ಟೆಂಬರ್ 2023, 6:26 IST
Last Updated 16 ಸೆಪ್ಟೆಂಬರ್ 2023, 6:26 IST
ಯಳಂದೂರಿನ ಹೊರ ವಲಯದ ಕೃಷಿ ಭೂಮಿಯಲ್ಲಿ ಪಶ್ಚಿಮ ಬಂಗಾಳದ ಯುವಕರು ಭತ್ತ ನಾಟಿ ಮಾಡಿದರು
ಯಳಂದೂರಿನ ಹೊರ ವಲಯದ ಕೃಷಿ ಭೂಮಿಯಲ್ಲಿ ಪಶ್ಚಿಮ ಬಂಗಾಳದ ಯುವಕರು ಭತ್ತ ನಾಟಿ ಮಾಡಿದರು   

ಯಳಂದೂರು: ತಾಲ್ಲೂಕಿನಲ್ಲಿ ಈಚೆಗೆ ಸುರಿದ ಒಂದೆರಡು ಮಳೆಗೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರು ಕಾಲುವೆ ಮತ್ತು ಕೊಳವೆ ಬಾವಿಯ ನೀರು ನೀಬಳಸಿ ಭತ್ತದ ನಾಟಿಗೆ ಚಾಲನೆ ನೀಡಿದ್ದಾರೆ. ಡ್ರಂ ಸೀಡರ್ ಮತ್ತು ಎರಚು ಪದ್ಧತಿಯಲ್ಲಿ ಬಿತ್ತನೆ ಮಾಡುವತ್ತಲೂ ಚಿತ್ತ ಹರಿಸಿದ್ದಾರೆ.

ಸಾಂಪ್ರದಾಯಿಕ ನಾಟಿ ಪದ್ಧತಿಗೆ ಒತ್ತು ನೀಡಿರುವವರು, ಹೊರ ರಾಜ್ಯದ ಕಾರ್ಮಿಕರಿಗೆ ಗುತ್ತಿಗೆ ನೀಡಿ ಶ್ರಮಿಕರ ಕೊರತೆಯನ್ನು ನೀಗಿಸಿಕೊಂಡಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಈಗ ಕೃಷಿಗೆ ಕೂಲಿ ಕಾರ್ಮಿಕರ ಸಮಸ್ಯೆ ಕಾಡುತ್ತಿದೆ. ಸ್ಥಳೀಯ ಕಾರ್ಮಿಕರು ಈಗ ಪಟ್ಟಣಗಳ ಉದ್ಯೋಗಕ್ಕೆ ಒತ್ತು ನೀಡುತ್ತಿದ್ದಾರೆ. ಇದರಿಂದ ನಾಟಿ, ಕೆಸರುಗದ್ದೆ ಮತ್ತು ಮಡಿಯಿಂದ ಸಸಿ ಕೀಳಲು ಕಾರ್ಮಿಕರ ಕೊರತೆ ಭಾದಿಸುತ್ತಿದೆ. ಇದರಿಂದ  ಹಿಡುವಳಿಯನ್ನು  ಕೃಷಿಗೆ ಸಿದ್ಧ ಪಡಿಸುವುದೇ ವ್ಯವಸಾಯಗಾರರಿಗೆ ಸವಾಲಾಗಿದೆ. ಕಾರ್ಮಿಕರ ಸಮಸ್ಯೆಗೆ ಈ ಬಾರಿ ತಾಲ್ಲೂಕಿಕ ಬೇಸಾಯಗಾರರಿಗೆ ಪರಿಹಾರ ದೊರಕಿದ್ದು,  ಪಶ್ಚಿಮ ಬಂಗಾಳದಿಂದ ಬಂದವರು ನಾಟಿ ಮಾಡುತ್ತಿದ್ದಾರೆ. 

ADVERTISEMENT

‘ಬಹುತೇಕ ಭತ್ತದ ನಾಟಿ ಸಂದರ್ಭದಲ್ಲಿ ಮಹಿಳಾ ಕಾರ್ಮಿಕರೇ ಹೆಚ್ಚು ಇರುತ್ತಿದ್ದರು. ಪೈರು ಕಿತ್ತು, ನಾಟಿ ಮಾಡುತ್ತಿದ್ದರು. ಮೂರ್ನಾಲ್ಕು ಗಂಡಾಳು ಜೊತೆಯಲ್ಲಿ ಇದ್ದರೆ, ದಿನಕ್ಕೆ ನಾಲ್ಕಾರು ಎಕರೆ ನಾಟಿ ಮುಗಿಯುತ್ತಿತ್ತು. ಹಬ್ಬಗಳ ಸಮಯದಲ್ಲಿ ಆಳುಗಳನ್ನು ಸೇರಿಸುವುದು ರೈತರಿಗೆ ದೊಡ್ಡ ಸಮಸ್ಯೆ. ಈಚೆಗೆ ಬಂಗಾಳದ ಯುವಕರ ತಂಡ ಸುಲಭವಾಗಿ ಸಿಗುತ್ತಿದ್ದು, ನಾಟಿ ಕಾಯಕ ಸುಲಭ ಮಾಡಿಕೊಳ್ಳುವಂತಾಗಿದೆ’ ಎಂದು ಬೂದಿತಿಟ್ಟು ನಾಗೇಂದ್ರಪ್ಪ ಹೇಳಿದರು.

‘ಪಶ್ಚಿಮ ಬಂಗಾಳದಿಂದ ಉದ್ಯೋಗ ಅರಸಿ ಬಂದಿದ್ಧೇವೆ. ಮಧ್ಯವರ್ತಿಗಳು ನಮಗೆ ಕೆಲಸ ಕೊಡಿಸುತ್ತಾರೆ. ಗುತ್ತಿಗೆ ಪದ್ದತಿಯಲ್ಲಿ ನಾಟಿಯನ್ನು ಬೇಗ ಮುಗಿಸುತ್ತೇವೆ. 20ಕ್ಕೂ ಹೆಚ್ಚಿನ ತಂಡದ ಸದಸ್ಯರು ದಿನಕ್ಕೆ ₹15 ಸಾವಿರದಿಂದ 20 ಸಾವಿರ ದುಡಿಯುತ್ತೇವೆ’ ಎಂದು ಕಾರ್ಮಿಕ ಸುಪ್ರತೊ ಹೇಳಿದರು.

ಬೆಲೆ ಮತ್ತು ಬೇಡಿಕೆ: ಪಶ್ಚಿಮ ಬಂಗಾಳದ 20ಕ್ಕೂ ಹೆಚ್ಚಿನ ತಂಡ ಶಿವಕಳ್ಳಿ ಸುತ್ತಮುತ್ತ ಬೀಡು ಬಿಟ್ಟಿದೆ. ಮುಂಜಾನೆಯಿಂದ ಸಂಜೆ ತನಕ ಕೆಲಸ ಮಾಡುತ್ತಾರೆ.

‘ಗುತ್ತಿಗೆ ಪದ್ಧತಿಯಲ್ಲಿ 1 ಎಕರೆಗೆ ₹4000 ಬೆಲೆ ನಿಗದಿಪಡಿಸಲಾಗಿದೆ. ಮಡಿಯಿಂದ ಪೈರು ಕಿತ್ತು, ಸಸಿಗಳನ್ನು ಹರಡಿ, ದಿನಕ್ಕೆ 4 ರಿಂದ 5 ಎಕರೆ ಪ್ರದೇಶವನ್ನು ನಾಟಿ ಮಾಡಿ ಮುಗಿಸುತ್ತಾರೆ. ಇದರಿಂದ ಹಿಡುವಳಿದಾರರಿಗೆ ಆಳು ಹುಡುಕುವ  ತಾಪತ್ರಯ ತಪ್ಪುತ್ತದೆ. ಸ್ಥಳೀಯ ಶ್ರಮಿಕರನ್ನು ನೆಚ್ಚಿಕೊಂಡು ಕೃಷಿಯಲ್ಲಿ ತೊಡಗುವ ಸಮಸ್ಯೆಯೂ ನೀಗಲಿದೆ’ ಎಂದು ಮಾಂಬಳ್ಳಿ ರೈತ ರಾಮಣ್ಣ ಹೇಳಿದರು. 

ನಾಟಿಗೆ ಮೀನ ಮೇಷ
ಮಳೆ ಚೆನ್ನಾಗಿ ಬಾರದಿರುವುದರಿಂದ ಇನ್ನೂ ಹಲವು ರೈತರು ಬೆಳೆ ನಾಟಿಗೆ ಮುಂದಾಗಿಲ್ಲ.  ರೈತರು ಸಸಿ ಮಡಿಗಳನ್ನು ಹಾಗೆಯೇ ಬಿಟ್ಟಿದ್ದಾರೆ. ಭೂಮಿ ಹದ ಮಾಡಲು ತೇವಾಂಶ ಇಲ್ಲ. ಮಳೆ ಕೊರತೆಯಿಂದ ಶ್ರಮ ಪ್ರಧಾನ ರಾಗಿ ಭತ್ತ ಮತ್ತಿತರ ಕಾಳು ಬಿತ್ತನೆಗೆ ಇನ್ನೂ ವಿಳಂಬ ಮಾಡುತ್ತಿದ್ದಾರೆ. ‘ಕೆಲವೆಡೆ ಬೆಳೆ ಸಂರಕ್ಷಿಸಿಕೊಳ್ಳುವ ಸವಾಲು ಎದುರಾಗಿದೆ. ಮಳೆ ಕಾಣದಾಗಿದೆ. ಹಾಗಾಗಿ ತರಾತುರಿಯಲ್ಲಿ ಅವಧಿ ಮೀರಿದ ಸಸಿಗಳ ನಾಟಿಗೆ ಕೃಷಿಕರು ಮುಂದಾಗಿದ್ದಾರೆ. ಡ್ರಂ ಸೀಡರ್ ಮತ್ತು ಎರಚು ಬಿತ್ತನೆ ಮಾಡಿ ವೆಚ್ಚ ತಗ್ಗಿಸುವತ್ತಲೂ ಅನ್ನದಾತರು ದೃಷ್ಟಿ ನೆಟ್ಟಿದ್ದಾರೆ’ ಎಂದು ಅಗರ ರೈತ ಕುಮಾರ್ ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.