ADVERTISEMENT

ಮಹದೇಶ್ವರ ಬೆಟ್ಟ: ಮಾದಪ್ಪನಿಗೆ ಅಮಾವಾಸ್ಯೆ ಸೇವೆ

ಮಹಾಲಯ ಜಾತ್ರೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 7:09 IST
Last Updated 22 ಸೆಪ್ಟೆಂಬರ್ 2025, 7:09 IST
ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಭಾನುವಾರ ಮಹಾಲಯ ಅಮಾವಾಸ್ಯೆಯ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲು ಬಂದಿದ್ದ ಭಕ್ತರು
ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಭಾನುವಾರ ಮಹಾಲಯ ಅಮಾವಾಸ್ಯೆಯ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲು ಬಂದಿದ್ದ ಭಕ್ತರು   

ಮಹದೇಶ್ವರ ಬೆಟ್ಟ: ಮಾದಪ್ಪನ ಸನ್ನಿಧಿಯಲ್ಲಿ ಭಾನುವಾರ ಮಹಾಲಯ ಅಮಾವಾಸ್ಯೆಯ ಜಾತ್ರಾ ಮಹೋತ್ಸವದ ಪ್ರಯುಕ್ತ ವಿಶೇಷ ಪೂಜೆ, ಉತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಮುಂಜಾನೆಯ ನಸುಕಿನಲ್ಲಿ ಮಾದೇಶ್ವರ ಸ್ವಾಮಿಗೆ ವಿವಿಧ ಫಲಪುಷ್ಪಗಳಿಂದ ಸಿಂಗರಿಸಿ ಮಹಾ ಮಂಗಳಾರತಿ, ಬಿಲ್ವಾರ್ಚನೆ, ಗಂಗಾಭಿಷೇಕ, ಕ್ಷೀರಾಭಿಷೇಕ ನೇರವೇರಿದ ಬಳಿಕ ಮಾದಪ್ಪನ ದರ್ಶನಕ್ಕೆ ಭಕ್ತರಿಗೆ ಅನುವು ಮಾಡಿಕೊಡಲಾಯಿತು. ನಂತರ ಸ್ವಾಮಿಗೆ ತೆರಕಣಾಂಬಿಯ ಕಣ್ಣಪ್ಪನವರ ಪುತ್ರ ರಾಚಪ್ಪ ಕುಟುಂಬ ವರ್ಗದಿಂದ ವಿಶೇಷ ಸೇವಾರ್ಥಗಳು ನಡೆದವು.

ಸಂಜೆ 7 ಗಂಟೆಗೆ ಮೈಸೂರಿನ ನಾಗರಾಜು ಕುಟುಂಬ ಹಾಗೂ ಕೊಳ್ಳೇಗಾಲದ ಮಹದೇವ ಪ್ರಭು ಕುಟುಂಬದಿಂದ ವಿಶೇಷ ಸೇವೆ, ಉತ್ಸವವಾಧಿಗಳು ಸಹಿತ ಅಮಾವಾಸ್ಯೆ ಸೇವೆ ನೆರವೇರಿತು.

ADVERTISEMENT

ಮಹಾಲಯ ಅಮಾವಾಸ್ಯೆಯ ಪ್ರಯುಕ್ತ ರಾಜ್ಯದ ಎಲ್ಲೆಡೆಗಳಿಂದ ದೇವಾಲಯಕ್ಕೆ ಸಹಸ್ರಾರು ಸಂಖ್ಯೆಯ ಭಕ್ತರು ಬಂದಿದ್ದರು. ಭಾನುವಾರವಾಗಿದ್ದರಿಂದ ಭಕ್ತರ ದಂಡು ಹೆಚ್ಚಾಗಿತ್ತು. ಅಮಾವಾಸ್ಯೆಯ ವಿಶೇಷ ಸೇವೆ, ಮಹಾಮಂಗಳಾರತಿ, ದೀಪಾಲಂಕಾರ ಸೇವೆಗಳಲ್ಲಿ ಪಾಲ್ಗೊಂಡು, ಹುಲಿವಾಹನ, ಬಸವ ವಾಹನ, ರುದ್ರಾಕ್ಷಿ ಮಂಟಪ, ಬೆಳ್ಳಿ ರಥೋತ್ಸವ, ಪಂಜಿನ ಸೇವೆ ದೂಪದ ಸೇವೆ, ಉರುಳುಸೇವೆ ನೆರವೇರಿಸಿದರು.

ವಿವಿಧ ಸೇವೆ ಹಾಗೂ ಉತ್ಸವದಲ್ಲಿ ಪಾಲ್ಗೊಂಡು ಮಾದಪ್ಪನ ಸೇವೆ ಮಾಡಿದ ಭಕ್ತರು ಬಿಡದಿ ಸ್ಥಳಗಳಲ್ಲಿ ಬಿಡಾರ ಹೂಡಿ ದೇವಾಲಯಕ್ಕೆ ಬಂದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ಭಕ್ತಿ ಸಮರ್ಪಿಸಿದರು. 

ಕ್ಷೇತ್ರಕ್ಕೆ ಬಂದಿದ್ದ ಭಕ್ತರಿಗೆ ಅಗತ್ಯ ಸಂಖ್ಯೆಯಲ್ಲಿ ಶೌಚಾಲಯಗಳ ವ್ಯವಸ್ಥೆ ಮಾಡದೆ ತೊಂದರೆ ಅನುಭವಿಸಬೇಕಾಯಿತು. ಕ್ಷೇತ್ರದ ಹಲವು  ಶೌಚಾಲಯಗಳಿಗೆ ಬೀಗ ಹಾಕಿದ ಪರಿಣಾಮ ಬಹಿರ್ದೆಸೆಗಾಗಿ ಭಕ್ತರು ಪರದಾಡಬೇಕಾಯಿತು. ಮಹಿಳೆಯರು, ಮಕ್ಕಳು, ವೃದ್ಧರು ಎಲ್ಲೆಲ್ಲಿ ಶೌಚಾಲಯಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ವಿಚಾರಿಸುತ್ತಿದ್ದ ದೃಶ್ಯಗಳು ಕಂಡುಬಂತು.

‘ಪ್ರತಿ ಅಮಾವಾಸ್ಯೆ ಹಾಗೂ ಜಾತ್ರೋತ್ಸವಗಳ ಸಂದರ್ಭ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ದರ್ಶನ ಪಡೆಯಲು ಬರುತ್ತಾರೆ. ಇಂತಹ ಸಂದರ್ಭಗಳಲ್ಲಿ ಕ್ಷೇತ್ರದಲ್ಲಿರುವ ಎಲ್ಲ ಶೌಚಾಲಯಗಳನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳಬೇಕು. ಭಕ್ತರ ಸಂಖ್ಯೆಗೆ ಅನುಗುಣವಾಗಿ ತಾತ್ಕಾಲಿಕವಾಗಿ ಮೊಬೈಲ್‌ ಶೌಚಾಲಯಗಳ ವ್ಯವಸ್ಥೆ ಮಾಡಬೇಕು. ಆದರೆ, ಕ್ಷೇತ್ರದಲ್ಲಿ ಪ್ರಸ್ತುತ ಇರುವ ಶೌಚಾಲಯಗಳಿಗೆ ಬೀಗ ಹಾಕಿರುವುದು ಸರಿಯಲ್ಲ’ ಎಂದು ಆನೇಕಲ್‌ನಿಂದ ಬಂದಿದ್ದ ಭಕ್ತ ನಿರಂಜನ್ ಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.