
ಚಾಮರಾಜನಗರ: ಅಂಬೇಡ್ಕರ್ ಭಾವಚಿತ್ರ, ಫ್ಲೆಕ್ಸ್ ವಿರೂಪಗೊಳಿಸಿ, ಬುದ್ಧ ಹಾಗೂ ಅಂಬೇಡ್ಕರ್ ವಿಗ್ರಹಗಳನ್ನು ಭಗ್ನಗೊಳಿಸಿರುವ ತಾಲ್ಲೂಕಿನ ಜ್ಯೋತಿಗೌಡನಪುರ ಗ್ರಾಮಕ್ಕೆ ಸಂಸದ ಸುನೀಲ್ ಬೋಸ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಿರಂಜನ ಕುಮಾರ್ ಸೇರಿದಂತೆ ಹಲವು ಮುಖಂಡರು ಭೇಟಿನೀಡಿ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದರು.
ಶುಕ್ರವಾರ ಸಂಜೆ ಸಂಸದ ಸುನೀಲ್ ಬೋಸ್ ಭೇಟಿನೀಡಿ ಮಾತನಾಡಿ ‘ಅಂಬೇಡ್ಕರ್ ಹಾಗೂ ಬುದ್ಧನಿಗೆ ಅಪಮಾನ ಮಾಡಿರುವ ಆರೋಪಿಗಳನ್ನು ಮೂರ್ನಾಲ್ಕು ದಿನಗಳಲ್ಲಿ ಬಂಧಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಆರೋಪಿಗಳ ವಿರುದ್ಧ ರೌಡಿಶೀಟರ್ ತೆರೆದು ಗಡೀಪಾರು ಮಾಡುವಂತೆಯೂ ನಿರ್ದೇಶನ ನೀಡಲಾಗಿದೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.
ವಿಶ್ವನಾಯಕರಾದ ಅಂಬೇಡ್ಕರ್ ಫ್ಲೆಕ್ಸ್, ಬ್ಯಾನರ್ ಹರಿದು ಮೂರ್ತಿ ಭಗ್ನಗೊಳಿಸಿದರೆ ಸಂವಿಧಾನ ಶಿಲ್ಪಿಯ ಘನತೆಗೆ ಚ್ಯುತಿ ಬರುವುದಿಲ್ಲ. ಕೃತ್ಯ ಎಸಗಿದ ಆರೋಪಿಗಳು ಕೂಡ ಅಂಬೇಡ್ಕರ್ ರಚಿತ ಸಂವಿಧಾನದಡಿಯೇ ಬದುಕಬೇಕು. ಆದರೆ, ಮಹಾನ್ ವ್ಯಕ್ತಿಗಳಾದ ಅಂಬೇಡ್ಕರ್ ಹಾಗೂ ಬುದ್ಧನಿಗೆ ಅವಮಾನಿಸುವಂತಹ ಮನಸ್ಥಿತಿ ಅನಾರೋಗ್ಯಕರ ಎಂದು ಟೀಕಿಸಿದರು.
ಮಹಾನ್ ನಾಯಕರ ಪ್ರತಿಮೆಗಳಿಗೆ ಸೂಕ್ತ ಭದ್ರತೆ ನೀಡುವಂತೆ, ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಪ್ರತಿ ತಿಂಗಳು ನಡೆಯುವ ಸಭೆಯಲ್ಲಿ ಎಲ್ಲ ಸಮುದಾಯಗಳ ಮುಖಂಡರಿಗೆ ತಿಳಿವಳಿಕೆ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಅವರಿಗೆ ಸೂಚನೆ ನೀಡಿದರು.
ಕಠಿಣ ಶಿಕ್ಷೆ ನೀಡಿ:
ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ ಕುಮಾರ್ ಗ್ರಾಮಸ್ಥರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಅಂಬೇಡ್ಕರ್ ಹಾಗೂ ಬುದ್ಧನ ಪುತ್ಥಳಿ ವಿರೂಪಗೊಳಿಸಿರುವ ಘಟನೆ ಖಂಡನೀಯ ಹಾಗೂ ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ. ಆರೋಪಿಗಳಿಗೆ ಗರಿಷ್ಠ ಶಿಕ್ಷೆ ನಿಡಬೇಕು ಎಂದು ಒತ್ತಾಯಿಸಿದರು.
ಕಿಡಿಗೇಡಿಗಳು ಅಂಬೇಡ್ಕರ್ ಭಾವಚಿತ್ರ, ಬುದ್ಧನ ಪುತ್ಥಳಿ ವಿರೂಪಗೊಳಿಸಿದ ಮಾತ್ರಕ್ಕೆ ಮಹನೀಯರ ಕೀರ್ತಿ ಕುಂದುವುದಿಲ್ಲ. ಆರೋಪಿಗಳ ಬಂಧನ ಆಗುವವರೆಗೂ ಗ್ರಾಮಸ್ಥರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹೇಳಿದರು.
ನಗರಸಭಾ ಅಧ್ಯಕ್ಷ ಸುರೇಶ್ ಮಾತನಾಡಿ, ಜ್ಯೋತಿಗೌಡಪುರದಲ್ಲಿ ಎಲ್ಲ ಸಮುದಾಯಗಳು ಸಾಮರಸ್ಯದಿಂದ ಜೀವನ ಮಾಡುತ್ತಿದ್ದು ಅಶಾಂತಿ ಸೃಷ್ಟಿಸುವ ದುರುದ್ದೇಶದಿಂದ ಕಿಡಿಗೇಡಿಗಳು ಹೇಯಕೃತ ಎಸಗಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು ಮಾತನಾಡಿ ‘ಮಹಾನ್ ನಾಯಕರ ಭಾವಚಿತ್ರ ಪುತ್ಥಳಿ ವಿರೂಪಗೊಳಿಸಿರುವುದು ನಾಗರಿಕರ ಸಮಾಜ ತಲೆತಗ್ಗಿಸುವ ವಿಚಾರವಾಗಿದ್ದು ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೃಷಬೇಂದ್ರಪ್ಪ ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಶಿವು ವಿರಾಟ್, ನಟರಾಜು, ನಗರಸಭಾ ಸದಸ್ಯ ಚಂದ್ರಶೇಖರ್, ಚಾಮರಾಜನಗರ ಗ್ರಾಮಾಂತರ ಮಂಡಲ ಅಧ್ಯಕ್ಷ ಕಾಡಳ್ಳಿ ಕುಮಾರ್, ಮುಖಂಡರಾದ ಸೂರ್ಯಕುಮಾರ್, ಹೊಂಗನೂರು ಮಹದೇವಸ್ವಾಮಿ, ವೇಣುಗೋಪಾಲ್, ಶೇಷಪ್ಪ ಪಾಸ್ವಾನ್, ನಿಂಗನಾಯಕ, ಗಂಗಾಧರ್, ಚಿಕ್ಕಣ್ಣ, ಶಿವಮಲ್ಲು, ಬಸವಣ್ಣನಾಯಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.