ADVERTISEMENT

ಅಂಬಿಗರ ಚೌಡಯ್ಯ ಜಯಂತಿ ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 14:18 IST
Last Updated 21 ಜನವರಿ 2021, 14:18 IST
ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು
ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು   

ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅಂಬಿಗರ ಚೌಡಯ್ಯ ಜಯಂತಿಯನ್ನು ಗುರುವಾರ ಸರಳವಾಗಿ ಆಚರಿಸಲಾಯಿತು.

ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ‘ಅಂಬಿಗರ ಚೌಡಯ್ಯ ನಿಷ್ಠುರವಾದಿ ವಚನಕಾರರಾಗಿದ್ದು, 12ನೇ ಶತಮಾನದ ಅನುಭವ ಮಂಟಪದಲ್ಲಿ ಮೊದಲ ಪಂಕ್ತಿಯಲ್ಲಿ ಇದ್ದವರು. ಇವರ ಅಚಾರ-ವಿಚಾರ, ತತ್ವಾದರ್ಶಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ. ವಚನಕಾರರು ಸಮಾಜದ ಅವ್ಯವಸ್ಥೆಯ ವಿರುದ್ಧ ವಚನ ಸಾಹಿತ್ಯದ ಮೂಲಕ ಹೋರಾಟ ನಡೆಸಿದ್ದಾರೆ. ಇವರ ವಿಚಾರಧಾರೆಗಳು ಮುಂದಿನ ಪೀಳಿಗೆಗೂ ತಲುಪಿಸುವಂತಾಗಬೇಕು’ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಶಿಕಲಾ ಅವರು ಮಾತನಾಡಿ, ‘ಎಲ್ಲ ವಚನಕಾರರನ್ನು ಗಮನಿಸುತ್ತಾ ಬಂದರೆ ಅಂಬಿಗರ ಚೌಡಯ್ಯ ಅವರ ನಡೆ, ನುಡಿ ವಿಶಿಷ್ಟವಾಗಿರುವುದನ್ನು ಕಾಣಬಹುದು. ಯಾವುದೇ ಒಂದು ವಿಷಯವನ್ನು ನಿಷ್ಠುರವಾಗಿ ಸತ್ಯದ ಹಾದಿಯಲ್ಲಿ ಅಂಬಿಗರ ಚೌಡಯ್ಯ ಅವರು ಹೇಳುತ್ತಿದ್ದರು. ಇರುವುದನ್ನು ಇದ್ದ ಹಾಗೆ ಹೇಳುವ ವಿಶೇಷ ವ್ಯಕ್ತಿತ್ವ ಚೌಡಯ್ಯರವರದ್ದಾಗಿತ್ತು. ಪ್ರತಿಯೊಬ್ಬ ವಚನಕಾರರು ತಮ್ಮ ವಚನದ ಕೊನೆಯ ಸಾಲಿನಲ್ಲಿ ಅವರ ಆರಾಧ್ಯ ದೈವದ ನಾಮವನ್ನು ಬಳಸುತ್ತಿದ್ದರು. ಆದರೆ ಇವರು ತಾವು ಮಾಡಿದ ವೃತ್ತಿಯನ್ನು ಅಂಕಿತ ನಾಮವನ್ನಾಗಿ ಬಳಸುತ್ತಿದ್ದರು’ ಎಂದರು.

ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಬಿ.ಶಾಂತಮೂರ್ತಿ ಕುಲಗಾಣ ಅವರು ಮಾತನಾಡಿ, ‘ಚೌಡಯ್ಯ ಸಮಾಜದಲ್ಲಿ ನಡೆಯುತ್ತಿದ್ದ ಮೂಢನಂಬಿಕೆಗಳನ್ನು ತಿದ್ದುವಂತಹ ಕೆಲಸ ಮಾಡಿದ್ದರು. ಕನ್ನಡ ಸಾಹಿತ್ಯದಲ್ಲಿ ಕಂಡು ಬಂದಂತಹ ಇಬ್ಬರು ದಿಟ್ಟತನ ವಚನಕಾರರೆಂದರೆ ಸಿಡಿಲ ನುಡಿ ಸರ್ವಜ್ಙ ಮತ್ತು ಅಂಬಿಗರ ಚೌಡಯ್ಯ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್ ಅವರು ಮಾತನಾಡಿದರು.

ತತ್ವಪದ ಕಲಾವಿದರಾದ ರಾಚಯ್ಯ ಅವರು ಅಂಬಿಗರ ಚೌಡಯ್ಯ ಅವರ ವಚನಗಳನ್ನು ಹಾಡಿ ಗಮನ ಸೆಳೆದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಧರಣೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್‌.ಕೆ.ಗಿರೀಶ್, ಗಂಗಾಮತಸ್ಥರ ಮುಖಂಡರಾದ ಗು.ಪುರುಷೋತ್ತಮ್, ಕನ್ನಡ ಪರ ಸಂಘಟನೆಯ ಮುಖಂಡರಾದ ಚಾ.ರಂ.ಶ್ರೀನಿವಾಸಗೌಡ, ಸಿ.ಎನ್.ಪ್ರಕಾಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.