ಪ್ರಜಾವಾಣಿ ವಾರ್ತೆ
ಸಂತೇಮರಹಳ್ಳಿ: ಇಲ್ಲಿನ 3ನೇ ಅಂಗನವಾಡಿ ಕೇಂದ್ರದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಚಾಮರಾಜನಗರ ಜಿಲ್ಲೆ ಅಂಗನವಾಡಿ ಕೇಂದ್ರಗಳ ಪುನಶ್ಚೇತನಗೊಳಿಸುವ ಕುರಿತಂತೆ ಸಂತೇಮರಹಳ್ಳಿ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಮಿಂಚಿನ ಸಂಚಾರ ಕಾರ್ಯಕ್ರಮಕ್ಕೆ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು ಮಂಗಳವಾರ ಹಸಿರು ಭಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಅವರು ಮಾತನಾಡಿ, ಸಂತೇಮರಹಳ್ಳಿ ಶಿಶು ಅಭಿವೃದ್ಧಿ ಇಲಾಖೆ ವ್ಯಾಪ್ತಿಗೆ ೨೪೩ ಅಂಗನವಾಡಿ ಕೇಂದ್ರಗಳು ಒಳಗೊಂಡಿವೆ. ಒಬ್ಬರು ಮೇಲ್ವಿಚಾರಕಿ ಇರುವ ಹಿನ್ನೆಲೆಯಲ್ಲಿ ಎಲ್ಲ ಕೇಂದ್ರಗಳಿಗೆ ಅಧಿಕಾರಿ ಭೇಟಿ ನೀಡಿ ಅಂಗನವಾಡಿ ಕೇಂದ್ರಗಳಿಗೆ ಸರ್ಕಾರದಿಂದ ಬಿಡುಗಡೆಯಾಗುವ ಆಹಾರ ಪದಾರ್ಥಗಳು, ಮಕ್ಕಳ ದಾಖಲಾತಿ, ಗರ್ಭಿಣಿಯರ ಮಾಹಿತಿ ಸೇರಿದಂತೆ ನಾನಾ ವರದಿಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಿಮಿತ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಸುರೇಶ್ ಅವರು ಅಂಗನವಾಡಿ ಕೇಂದ್ರಗಳನ್ನು ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಜಿಲ್ಲೆಯ ಎಲ್ಲ ಮೇಲ್ವಿಚಾರಕರು ಭೇಟಿ ನೀಡಿ ಕೇಂದ್ರಗಳ ಲೋಪ ದೋಷಗಳನ್ನು ಪಟ್ಟಿ ಮಾಡಿ ಇಲಾಖೆಗೆ ವರದಿ ನೀಡಬೇಕು. ಈ ನಿಟ್ಟಿನಲ್ಲಿ ಮಿಂಚಿನ ಸಂಚಾರ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮವಾಗಿದೆ. ಈ ಕಾರ್ಯಕ್ರಮ ನಮ್ಮ ಜಿಲ್ಲೆಯಲ್ಲಿ ಯಶಸ್ವಿಗೊಂಡು ರಾಜ್ಯ ವ್ಯಾಪ್ತಿಗೆ ಪ್ರಚಾರವಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ಸುರೇಶ್, ಸಿಡಿಪಿಒ ಜಯಶೀಲಾ ಸೇರಿದಂತೆ ಅಂಗನವಾಡಿ ಮೇಲ್ವಿಚಾರಕಿಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.