ADVERTISEMENT

ಎಪಿಎಂಸಿ ಕಾಯ್ದೆ ವಾಪಸ್‌ಗೆ ಆಗ್ರಹ

ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2022, 16:44 IST
Last Updated 20 ಫೆಬ್ರುವರಿ 2022, 16:44 IST
ರವಿಕುಮಾರ್‌
ರವಿಕುಮಾರ್‌   

ಚಾಮರಾಜನಗರ: ‘ಕೇಂದ್ರ ಸರ್ಕಾರ ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ವಾಪಸ್‌ ಪಡೆದಿದ್ದರೂ; ರಾಜ್ಯ ಸರ್ಕಾರ ಮೊಂಡು ಹಟಕ್ಕೆ ಬಿದ್ದು ಕಾಯ್ದೆಯನ್ನು ಹಿಂತೆಗೆದುಕೊಳ್ಳುತ್ತಿಲ್ಲ’ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್‌ ಭಾನುವಾರ ಇಲ್ಲಿ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ದೇಶದಾದ್ಯಂತ ನಿರಂತರವಾಗಿ ನಡೆದ ಹೋರಾಟದಿಂದ ಎಚ್ಚೆತ್ತುಕೊಂಡು ಕೇಂದ್ರ ಸರ್ಕಾರ ಕಾಯ್ದೆಗಳನ್ನು ವಾಪಸ್‌ ತೆಗೆದುಕೊಂಡಿದೆ. ಆದರೆ, ರಾಜ್ಯದಲ್ಲಿ ಕಾಯ್ದೆಯನ್ನು ವಾಪಸ್‌ ಪಡೆಯುವುದಿಲ್ಲ ಎಂದು ಸಹಕಾರ, ಎಪಿಎಂಸಿ ಸಚಿವ ಎಸ್‌.ಟಿ.ಸೋಮಶೇಖರ್‌ ಸದನದಲ್ಲಿ ಹೇಳಿದ್ದಾರೆ. ಜೊತೆಗೆ ಹಳೆಯ ಕಾಯ್ದೆಯ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಹಳೆ ಕಾಯ್ದೆಯಲ್ಲೂ ರೈತರಿಗೆ ದಂಡ ಹಾಕುವ ನಿಯಮ ಇರಲಿಲ್ಲ. ಮೊದಲು ಕೂಡ ಎಲ್ಲಿ ಬೇಕಾದರೂ ರೈತರು ಉತ್ಪನ್ನಗಳನ್ನು ಮಾರಾಟ ಮಾಡಬಹುದಿತ್ತು’ ಎಂದರು.

‘ಹೊಸ ಕಾಯ್ದೆಯಿಂದ ರೈತರಿಗೆ ಹಾಗೂ ಎಪಿಎಂಸಿಗಳಿಗೆ ಅನಾನುಕೂಲವಾಗಿದೆ. 2017–18ರಲ್ಲಿ ಚಾಮರಾಜನಗರ ಎಪಿಎಂಸಿಗೆ ₹ 1.13 ಕೋಟಿ ಲಾಭ ಆಗಿತ್ತು. ಬರ ಪರಿಸ್ಥಿತಿ ಇದ್ದರೂ ಲಾಭ ಗಳಿಸಿತ್ತು. 2018–19ರಲ್ಲಿ ₹ 1.53 ಕೋಟಿ ಲಾಭ ಆಗಿತ್ತು. 2018ರ ನಂತರ ಹೊಸ ಕಾಯ್ದೆ ಜಾರಿಗೆ ಬಂತು. 2020–21ರ ಸಾಲಿನಲ್ಲಿ ₹ 60 ಲಕ್ಷ ಲಾಭ ಆಗಿತ್ತು. 2021–22ರಲ್ಲಿ ಇದುವರೆಗೆ ಕೇವಲ ₹ 17 ಲಕ್ಷ ಲಾಭ ಗಳಿಸಿದೆ. ಸಿಬ್ಬಂದಿಗೆ ವೇತನ ಕೊಡುವುದಕ್ಕೂ ಸಾಕಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಎಪಿಎಂಸಿ ಸದೃಢವಾಗಿದ್ದರೆ, ರೈತರಿಗೆ ಹೆಚ್ಚು ಅನುಕೂಲ. ಅದಕ್ಕಾಗಿ ಕಾಯ್ದೆಯನ್ನು ಸರ್ಕಾರ ತಕ್ಷಣವೇ ವಾಪಸ್‌ ಪ‍ಡೆಯಬೇಕು’ ಎಂದು ಆಗ್ರಹಿಸಿದರು.

ADVERTISEMENT

ಬರೀ ಘೋಷಣೆ: ‘ಆತ್ಮನಿರ್ಭರ ಭಾರತ ಯೋಜನೆಯಡಿ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಗೆ ಜಿಲ್ಲೆಯಲ್ಲಿ ಅರಿಸಿನವನ್ನು ಆಯ್ಕೆ ಮಾಡಲಾಗಿದೆ. ಆದರೆ, ಇದಿನ್ನೂ ಘೋಷಣೆಯಲ್ಲೇ ಇದೆ. ಸ್ವಲ್ಪವೂ ಪ್ರಗತಿಯಾಗಿಲ್ಲ. ಹಿಂದಿನ ಬಜೆಟ್‌ನಲ್ಲಿ ಚಾಮರಾಜನಗರದಲ್ಲಿ ಅರಿಸಿನ ಮಾರುಕಟ್ಟೆ ಅಭಿವೃದ್ಧಿ ಬಗ್ಗೆ ಘೋಷಿಸ ಲಾಗಿತ್ತು. ಇದು ಕೂಡ ಘೋಷಣೆಯಾಗಿ ಉಳಿದಿದೆ. ಹೊಸ ಕಾಯ್ದೆಯಿಂದಾಗಿ ಮಾರುಕಟ್ಟೆಗೆ ಅರಿಸಿನವೇ ಬರದಂತಾಗಿದೆ’ ಎಂದು ದೂರಿದರು.

ಮುಖಂಡರಾದ ಟಗರುಪುರ ಬಸವಣ್ಣ, ನಾಗವಳ್ಳಿ ನಂಜುಂಡಸ್ವಾಮಿ, ನಲ್ಲೂರು ಸೋಮೇಶ್ವರ್‌, ಕುಮಾರ ನಾಯಕ, ಮಹದೇವಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.