ADVERTISEMENT

ಸುರೇಶ್‌ ಕುಮಾರ್‌ ಜೊತೆ ಶಿಕ್ಷಣ ಸಚಿವನಾಗುತ್ತೇನೆ ಎಂದುಕೊಂಡಿದ್ದೆ: ಲಿಂಬಾವಳಿ

ರಾತ್ರಿ ಕಾಡಿನ ಮಂತ್ರಿ, ಹಗಲು ನಾಡಿನ ಮಂತ್ರಿ– ಕೆಲಸ ಮಾಡಲು 24 ಗಂಟೆ ಬೇಕು -ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 3:10 IST
Last Updated 8 ಫೆಬ್ರುವರಿ 2021, 3:10 IST
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅರವಿಂದ ಲಿಂಬಾವಳಿ ಮಾತನಾಡಿದರು
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅರವಿಂದ ಲಿಂಬಾವಳಿ ಮಾತನಾಡಿದರು   

ಚಾಮರಾಜನಗರ: ‘ನಾನು ಈ ಹಿಂದೆ ಉನ್ನತ ಶಿಕ್ಷಣ ಸಚಿವನಾಗಿದ್ದೆ. ಹಾಗಾಗಿ, ಸುರೇಶ್‌ ಕುಮಾರ್ ಅವರ ಜೊತೆಗೆ ಶಿಕ್ಷಣ ಸಚಿವನಾಗುತ್ತೇನೆ ಎಂದುಕೊಂಡಿದ್ದೆ. ಆದರೆ, ಮುಖ್ಯಮಂತ್ರಿ ಅವರು ನನಗೆ ಕಾಡಿನ ಮತ್ತು ನಾಡಿನ ಜವಾಬ್ದಾರಿ ನೀಡಿದ್ದಾರೆ. ರಾತ್ರಿ ಹೊತ್ತು ಕಾಡಿನಲ್ಲಿ ಇರಬೇಕು. ಹಗಲು ಹೊತ್ತು ನಾಡಿನಲ್ಲಿರಬೇಕು’ ಎಂದು ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರು ಹೇಳಿದರು.

ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ನನಗೆ ನೀಡಿರುವ ಎರಡು ಖಾತೆಗಳನ್ನು ನೀಡಲು ದಿನದ 24 ಗಂಟೆಗಳೂ ಬೇಕು. ಅರಣ್ಯದ ಪರಿಸ್ಥಿತಿ ತಿಳಿಯುವುದೇ ರಾತ್ರಿಯಾಗಿರುವುದರಿಂದರಾತ್ರಿ ಹೊತ್ತು ನಾನು ಕಾಡಿನಲ್ಲಿರಬೇಕು’ ಎಂದು ಹೇಳಿದರು.

‘ನಾನು ಸಿವಿಲ್‌ ಎಂಜಿನಿಯರ್‌. ಕಾಡಿನ ಎಂಜಿನಿಯರ್‌ ಅಲ್ಲ. ಅರಣ್ಯದ ಬಗ್ಗೆ ನನಗೆ ಜನಸಾಮಾನ್ಯನಿಗೆ ಇರುವಷ್ಟು ಮಾಹಿತಿಯೂ ಇಲ್ಲ. ನಾನು ಮತ್ತು ಸುರೇಶ್‌ ಕುಮಾರ್‌ ಅವರು ಕಾಂಕ್ರೀಟ್‌ ಕಾಡಿನಿಂದ ಬಂದವರು. ನನಗೆ ಅದರ ಬಗ್ಗೆ ಹೆಚ್ಚು ತಿಳಿದಿಲ್ಲ. ಸುರೇಶ್‌ ಕುಮಾರ್‌ ಅವರು ಸ್ವಲ್ಪ ಓದಿಕೊಂಡಿದ್ದಾರೆ. ಅರಣ್ಯ ಹೆಚ್ಚು ಇರುವ ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದಾರೆ. ಹಾಗಾಗಿ ಅವರಿಗೆ ಹೆಚ್ಚು ಮಾಹಿತಿ ಇದೆ’ ಎಂದು ಲಿಂಬಾವಳಿ ಅವರು ಹೇಳಿದರು.

ADVERTISEMENT

ಹಂಸಲೇಖ ಅವರು ಮಾತನಾಡುವಾಗ ಲಿಂಬಾವಳಿ ಅವರನ್ನು ಉದ್ದೇಶಿಸಿ, ‘ನೀವು ರಾತ್ರಿ ಕಾಡಿನ ಮಂತ್ರಿ, ಹಗಲು ನಾಡಿನ ಮಂತ್ರಿ. ಸಂಸ್ಕೃತಿ ಮತ್ತು ಪ್ರಕೃತಿ ಎರಡೂ ನಿಮ್ಮ ಬಳಿ ಇದೆ’ ಎಂದು ಚಟಾಕಿ ಹಾರಿಸಿದರು.

ಕಾರ್ಯಕ್ರಮ ಮುಗಿದ ನಂತರ ಪತ್ರಕರ್ತರು ಅರಣ್ಯ ಖಾತೆಯ ಬಗ್ಗೆ ಅಸಮಾಧಾನ ಇದೆಯೇ ಎಂದು ಕೇಳಿದಾಗ ಅರವಿಂದ ಲಿಂಬಾವಳಿ, ಏನೂ ಪ್ರತಿಕ್ರಿಯೆ ನೀಡದೆ ಹೊರಟುಬಿಟ್ಟರು.

‘ಒಂದು ವಾರದಿಂದ ಕೆಲಸ ಮಾಡುತ್ತಿದ್ದೇನೆ. ಇಂತಹ ಪ್ರಶ್ನೆ ಕೇಳುತ್ತಿದ್ದೀರಲ್ಲಾ’ ಎಂದು ಕೋಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.