ADVERTISEMENT

ಚಾಮರಾಜನಗರ: ಮಕ್ಕಳ ರಕ್ಷಣೆ, ಬಾಲ ಕಾರ್ಮಿಕ ಪದ್ಧತಿ ಅರಿವು ಕಾರ್ಯಕ್ರಮ‌

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 13:34 IST
Last Updated 19 ನವೆಂಬರ್ 2020, 13:34 IST
ಮಕ್ಕಳ ರಕ್ಷಣೆ ಹಾಗೂ ಬಾಲ ಕಾರ್ಮಿಕ ಪದ್ಧತಿ ಬಗ್ಗೆ ಅರಿವು ಮೂಡಿಸುವ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು
ಮಕ್ಕಳ ರಕ್ಷಣೆ ಹಾಗೂ ಬಾಲ ಕಾರ್ಮಿಕ ಪದ್ಧತಿ ಬಗ್ಗೆ ಅರಿವು ಮೂಡಿಸುವ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು   

ಚಾಮರಾಜನಗರ: ಮಕ್ಕಳ ಮೈತ್ರಿ ಸಪ್ತಾಹ–2019ರ ಅಂಗವಾಗಿ ಕೋವಿಡ್‌–19 ಸಂದರ್ಭದಲ್ಲಿ ಮಕ್ಕಳ ರಕ್ಷಣೆ ಹಾಗೂ ಬಾಲಕಾರ್ಮಿಕ ಪದ್ಧತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಗರದಲ್ಲಿ ಗುರುವಾರ ನಡೆಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ಒಡಿಪಿ. ಸಂಸ್ಥೆ, ಮಕ್ಕಳ ಸಹಾವಾಣಿ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರದ ಭುವನೇಶ್ವರಿ ವೃತ್ತದಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ಅರಿವು ಕಾರ್ಯಕ್ರಮ ಭಿತ್ತಿ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ ಅವರು, ‘14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಂದ ಕೆಲಸ ಮಾಡಿಸುವುದು ಶಿಕ್ಷಾರ್ಹ ಅಪರಾಧ. ಬಾಲಕಾರ್ಮಿಕ ಮಕ್ಕಳ ಬಗ್ಗೆ ಸಾರ್ವಜನಿಕರು ತಿಳಿಸಿದರೆ, ಅವರನ್ನು ರಕ್ಷಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ಬಾಲ್ಯ ಎಂಬುದು ಅಮೂಲ್ಯ. ಮಕ್ಕಳು ಕನಸು ಕಾಣುವ, ದೈಹಿಕವಾಗಿ ಮಾನಸಿಕವಾಗಿ ಬೆಳೆಯುವಂತಹ ವಯಸ್ಸಿನಲ್ಲಿ ಅವರನ್ನು ಕೆಲಸಕ್ಕೆ ಹಚ್ಚಬಾರದು. ಇತ್ತೀಚಿನ ದಿನಗಳಲ್ಲಿ ಬಡತನ ಅಥವಾ ಇನ್ಯಾವುದೇ ಕಾರಣಕ್ಕೆ ಮಕ್ಕಳನ್ನು ಕೆಲಸಕ್ಕೆ ಕಳುಹಿಸಲಾಗುತ್ತಿದೆ. ಮಕ್ಕಳು ಶಿಕ್ಷಣ ಪಡೆದು ಸಮಾಜಕ್ಕೆ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಬೇಕು. ಅವರನ್ನು ಬಾಲ್ಯದಿಂದ ಹಾಗೂ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವುದು ಸರಿಯಲ್ಲ’ ಎಂದರು.

ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷಕಿ ಗೀತಾ ಅವರು ಮಾತನಾಡಿ, ‘ಬಾಲ ಕಾರ್ಮಿಕ ಪದ್ಧತಿ ಆಚರಣೆಯಲ್ಲಿ ಇರುವುದನ್ನು ಕಂಡರೆ ತಕ್ಷಣ ಮಾಹಿತಿ ನೀಡಬೇಕು. ಅಂತಹ ಮಕ್ಕಳನ್ನು ರಕ್ಷಿಸಲಾಗುವುದು’ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್‌.ಟಿ.ಜವರೇಗೌಡ ಅವರು ಮಾತನಾಡಿ, ‘ಪೋಷಕರು ಮಕ್ಕಳನ್ನು ಕೆಲಸಕ್ಕೆ ಕಳುಹಿಸದೆ, ಶಾಲೆಗೆ ಕಳುಹಿಸಬೇಕು’ ಎಂದರು.

ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಮಹೇಶ್, ಮಕ್ಕಳ ವಿಶೇಷ ಪೊಲೀಸ್ ಘಟಕದ ಇನ್‌ಸ್ಪೆಕ್ಟರ್‌ ಮಹದೇವಶೆಟ್ಟಿ, ಮಕ್ಕಳ ಸಹಾಯವಾಣಿ –1098ರ ಜಿಲ್ಲಾ ಸಂಯೋಜಕಿ ಲತಾ, ರೋಟರಿ ಸದಸ್ಯ ಆರ್.ಎಸ್. ನಾಗಾರ್ಜುನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.