ADVERTISEMENT

ಚಾಮರಾಜನಗರ: ಅದ್ಧೂರಿ ಆಯುಧ ಪೂಜೆ, ಶ್ರದ್ಧಾಭಕ್ತಿಯ ವಿಜಯ ದಶಮಿ

ವಾಹನಗಳಿಗೆ ವಿಶೇಷ ಅಲಂಕಾರ, ಪೂಜೆ, ದೇವಾಲಯಗಳಿಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2022, 15:57 IST
Last Updated 5 ಅಕ್ಟೋಬರ್ 2022, 15:57 IST
ವಿಜಯದಶಮಿ ಪ್ರಯುಕ್ತ ಚಾಮರಾಜನಗರದ  ಹರದನಹಳ್ಳಿ ಕಾಮಾಕ್ಷಾಂಬ ಸಮೇತ ದಿವ್ಯಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಬನ್ನಿ ಪೂಜೆ ನಡೆಯಿತು
ವಿಜಯದಶಮಿ ಪ್ರಯುಕ್ತ ಚಾಮರಾಜನಗರದ  ಹರದನಹಳ್ಳಿ ಕಾಮಾಕ್ಷಾಂಬ ಸಮೇತ ದಿವ್ಯಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಬನ್ನಿ ಪೂಜೆ ನಡೆಯಿತು   

ಚಾಮರಾಜನಗರ: ಜಿಲ್ಲೆಯಾದ್ಯಂತ ಮಂಗಳವಾರ ಆಯುಧಪೂಜೆ ಹಾಗೂ ಬುಧವಾರ ವಿಜಯ ದಶಮಿಯನ್ನು ವಿಜೃಂಭಣೆಯಿಂದ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಎರಡು ವರ್ಷಗಳಿಂದ ಕೋವಿಡ್‌ ಕಾರಣಕ್ಕೆ ಆಯುಧಪೂಜೆ ಹಾಗೂ ವಿಜಯ ದಶಮಿಯ ಸಂಭ್ರಮ ಹೆಚ್ಚು ಇರಲಿಲ್ಲ.ಈ ಬಾರಿ ಕೋವಿಡ್‌ ಹಾವಳಿ ಇಲ್ಲದಿರುವುದರಿಂದ ಆಚರಣೆಗೆ ಯಾವುದೇ ನಿರ್ಬಂಧಗಳಿರಲಿಲ್ಲ.

ಮಹಾನವಮಿಯ ದಿನವಾದ ಮಂಗಳವಾರ ಆಯುಧಪೂಜೆಯನ್ನು ಹಿಂದೂಗಳು ಪ್ರತಿ ಮನೆ ಮನೆಯಲ್ಲೂ ಆಚರಿಸಿದರು. ವಿಜಯ ದಶಮಿಯ ದಿನವಾದ ಬುಧವಾರ ದೇವಸ್ಥಾನಳಿಗೆ ಭೇಟಿ ನೀಡಿದರು. ಕುಟುಂಬದೊಂದಿಗೆ ಪ್ರವಾಸವನ್ನೂ ಕೈಗೊಂಡರು.

ADVERTISEMENT

ಆಯುಧಪೂಜೆಯ ಸಂಭ್ರಮ ಜಿಲ್ಲೆಯಾದ್ಯಂತ ಮನೆ ಮಾಡಿತ್ತು. ಮಹಿಳೆಯರು ಬೆಳಿಗ್ಗೆಯೇ ಮನೆಗಳ ಮುಂಭಾಗ ರಂಗೋಲಿ ಬಿಡಿಸಿ ಸಿಂಗರಿಸಿದ್ದರು. ಬಾಳೆ ಕಂದು, ಮಾವಿನ ಸೊಪ್ಪಿನ ತೋರಣ ಕಟ್ಟಿದ್ದರು.

ಪುರುಷರು ವಾಹನಗಳು, ಯಂತ್ರೋಪಕರಣಗಳು ಹಾಗೂ ಇತರ ಆಯುಧಗಳನ್ನು ಹೂವು, ಬಾಳೆಕಂದು, ಕಬ್ಬಿನ ಸೋಗೆ ಕಟ್ಟಿ ಅಲಂಕರಿಸಿದ್ದರು. ವಾಹನಗಳಿಗೆ ವಿಭೂತಿ, ಕುಂಕುಮ, ಅರಿಸಿನ ಹಚ್ಚಿ, ಪೂಜೆ ಸಲ್ಲಿಸಿ, ಮಂಗಳಾರತಿ ಬೆಳಗಿ ತೆಂಗಿನ ಕಾಯಿ, ಕುಂಬಳಕಾಯಿ ಒಡೆದರು.ಅಂಗಡಿಗಳ ಮಾಲೀಕರು, ಅಂಗಡಿ ಪೂಜೆಯನ್ನೂ ನೆರವೇರಿಸಿದರು. ಆಯುಧ ಪೂಜೆಯ ಬಳಿಕ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಮಾಡಿದರು.

ಎರಡು ದಿನ ರಜೆ ಇದ್ದುದರಿಂದ ಹಲವರು ಕುಟುಂಬ ಸಮೇತರಾಗಿ ಪ್ರವಾಸ ಹೊರಟರು.

ವಿಜಯ ದಶಮಿ ಪೂಜೆ: ಬುಧವಾರ ವಿಜಯ ದಶಮಿ ಅಂಗವಾಗಿ ಮಹದೇಶ್ವರ ಬೆಟ್ಟ ಮಲೆ ಮಹದೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು.

ಜನರು ಕೂಡ ಕುಟುಂಬ ಸಮೇತರಾಗಿ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.