ಚಾಮರಾಜನಗರ: ತ್ಯಾಗ ಹಾಗೂ ಬಲಿದಾನದ ಮಹತ್ವ ಸಾರುವ ಬಕ್ರೀದ್ (ಈದ್ ಉಲ್ ಅದಾ) ಹಬ್ಬವನ್ನು ಶನಿವಾರ ಜಿಲ್ಲೆಯಾದ್ಯಂತ ಮುಸ್ಲಿಮರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಬೆಳಿಗ್ಗೆ ಸೋಮವಾರಪೇಟೆಯ ಅಹಲೆ ಅದಿಶಾ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಅಲ್ಲಾಹುವಿನ ಸ್ಮರಣೆ ಮಾಡಿದರು. ಜುಬ್ಬಾ ಪೈಜಾಮ, ಟೋಪಿ ಧರಿಸಿ ನಮಾಜ್‌ನಲ್ಲಿ ಭಾಗವಹಿಸಿದ್ದ ಮುಸ್ಲಿಮರು ಪರಸ್ಪರ ಹಬ್ಬದ ಶುಭಾಶಯ ವಿನಿಯಮ ಮಾಡಿಕೊಂಡರು. ಮಕ್ಕಳು ಪ್ರಾರ್ಥನೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಪಾಲಿಟೆಕ್ನಿಕ್ ಕಾಲೇಜು ಬಳಿಯ ಈದ್ಗಾ ಮೈದಾನದಲ್ಲೂ ನಮಾಜ್ ಮಾಡಲಾಯಿತು. ಮಸೀದಿಗಳಲ್ಲಿ ಮೌಲ್ವಿಗಳ ನೇತೃತ್ವದಲ್ಲಿ ಪ್ರಾರ್ಥನೆ ನಡೆಯಿತು. ನಗರದಲ್ಲಿ ಮುಸ್ಲಿಮರ ಬಾಹುಳ್ಯ ಹೆಚ್ಚಾಗಿರುವ ಗಾಳಿಪುರ ಸೇರಿದಂತೆ ಹಲವು ಮೊಹಲ್ಲಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಬಂಧು ಬಾಂಧವರು ಹಬ್ಬದಲ್ಲಿ ಭಾಗಿಯಾಗಲು ಬಂದಿದ್ದರಿಂದ ದಟ್ಟಣೆ ಹೆಚ್ಚಾಗಿತ್ತು.
ಹಬ್ಬಕ್ಕಾಗಿ ಮುಂಚಿತವಾಗಿಯೇ ಸಂತೆಗಳಿಂದ ಖರೀದಿಸಿ ತಂದಿದ್ದ ಕುರಿ–ಮೇಕೆಗಳನ್ನು ಕುರ್ಬಾನಿ (ಬಲಿ) ಕೊಟ್ಟು ತರಹೇವಾರಿ ಮಾಂಸದ ಖಾದ್ಯಗಳನ್ನು ತಯಾರಿಸಲಾಯಿತು. ಮೊಹಲ್ಲಗಳಲ್ಲಿ ಬಿರಿಯಾನಿ ಹಾಗೂ ಮಾಂಸದೂಟದ ಘಮಲು ಹರಡಿತ್ತು. ಹಬ್ಬಕ್ಕೆ ಬಂದಿದ್ದ ಸಂಬಂಧಿಗಳು ಹಾಗೂ ನೆರೆಹೊರೆಯವರ ಜೊತೆಗೆ ಸಹ ಭೋಜನ ನಡೆಸಿ ಸಂಭ್ರಮ ಹಂಚಿಕೊಂಡರು.
ನಗರಸಭೆಯಿಂದ ತ್ಯಾಜ್ಯ ವಿಲೇವಾರಿ ಹಾಗೂ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.