ADVERTISEMENT

ಯಳಂದೂರು | ಹಬ್ಬದ ಹಂಗಾಮಿನಲ್ಲಿ ದರ ಕುಸಿತ: ಚೇತರಿಕೆ ಕಾಣದ ಬಾಳೆ ದರ

ಬೆಳೆಗಾರ ಕಂಗಾಲು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 5:36 IST
Last Updated 7 ಅಕ್ಟೋಬರ್ 2025, 5:36 IST
ಯಳಂದೂರು ಸಮೀಪದ ಗೂಳಿಪುರ ಗ್ರಾಮದಲ್ಲಿ ಮಾರುಕಟ್ಟೆಗೆ ಸಾಗಿಸಲು ಏಲಕ್ಕಿ ಬಾಳೆ ಕಾಯಿಯನ್ನು ಕಟಾವು ಮಾಡಿರುವುದು 
ಯಳಂದೂರು ಸಮೀಪದ ಗೂಳಿಪುರ ಗ್ರಾಮದಲ್ಲಿ ಮಾರುಕಟ್ಟೆಗೆ ಸಾಗಿಸಲು ಏಲಕ್ಕಿ ಬಾಳೆ ಕಾಯಿಯನ್ನು ಕಟಾವು ಮಾಡಿರುವುದು    

ಯಳಂದೂರು: ವರಮಹಾಲಕ್ಷ್ಮಿ ಹಬ್ಬದಿಂದ ಸತತ ಏರಿಕೆ ಕಂಡಿದ್ದ ಏಲಕ್ಕಿ ಬಾಳೆ ಕಾಯಿ  ಬೆಲೆ , ದಸರಾ ಸಮಯದಲ್ಲಿ ಕುಸಿತದತ್ತ ಸಾಗುತ್ತಿದೆ. ಪಚ್ಚಬಾಳೆ ಮತ್ತು ನೇಂದ್ರ ಬಾಳೆಗೂ ಬೇಡಿಕೆಯಲ್ಲಿ ದಿಢೀರ್ ಇಳಿಕೆಯಾಗಿದ್ದು, ಬೆಳೆಗಾರರ ಆದಾಯ ಕುಸಿಯುತ್ತಿದೆ.

ತಾಲ್ಲೂಕಿನಲ್ಲಿ 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ವ್ಯಾಪಿಸಿದೆ. ರೈತರು ತೆಂಗು ಮತ್ತು ಅಡಿಕೆ ಜೊತೆ ಮಿಶ್ರ ಬೆಳೆಯಾಗಿ ಬಾಳೆ ಬೆಳೆಯುತ್ತಾರೆ. ಏಲಕ್ಕಿ, ಪಚ್ಚಬಾಳೆ ಹೆಚ್ಚು ಪ್ರದೇಶದಲ್ಲಿ ಬೆಳೆದರೆ, ನೇಂದ್ರ ಬಾಳೆಯನ್ನು ನೀರಾವರಿ ಭೂಮಿಯಲ್ಲಿ ನಾಟಿ ಮಾಡಲಾಗಿದೆ.

ಹಬ್ಬಗಳ ಋತು ಆರಂಭದ ನಂತರ ಏಲಕ್ಕಿ ಬಾಳೆಗೆ 1 ಕೆ.ಜಿ.ಗೆ ₹80 ರಿಂದ ₹100 ಬೆಲೆ ದಾಖಲಾಗಿತ್ತು. ಪಚ್ಚಬಾಳೆ ಕೆ.ಜಿ.ಗೆ ರೂ 35ಕ್ಕೆ ಏರಿಕೆ ಕಂಡಿತ್ತು. ಈಗ ಏಲಕ್ಕೆ ಧಾರಣೆ 1 ಕೆ.ಜಿ.ಗೆ 45ಕ್ಕೆ ಇಳಿದಿದೆ. ಪಚ್ಷಬಾಳೆ 1 ಕೆ.ಜಿ.ಗೆ ₹8 ಇದ್ದು, ಎರಡನೇ ದರ್ಜೆಯ ಏಲಕ್ಕಿಬಾಳೆ ₹25ಕ್ಕೆ ಕುಸಿತ ಕಂಡಿದೆ ಎಂದು ಬೆಳೆಗಾರರು ಅಳಲು ತೋಡಿಕೊಂಡರು.

ADVERTISEMENT

‘ವರಮಹಾಲಕ್ಷ್ಮಿ ಹಬ್ಬದಿಂದ ಸಂಕ್ರಾಂತಿ ತನಕ ಬಾಳೆಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿತ್ತು.  ದಸರಾ ಕಳೆದು, ದೀಪಾವಳಿ ಮುಂತಾದ ಹಬ್ಬಗಳು ಮುಂದೆ ಇದ್ದರೂ ಬಾಳೆ ದರ ಹೆಚ್ಚಾಗುತ್ತಿಲ್ಲ. ಇದರಿಂದ ಬೆಳೆಗೆ ಖರ್ಚು ಮಾಡಿದ ವೆಚ್ಚವೂ ಕೈ ಸೇರದಂತಾಗಿದೆ’ ಎಂದು ಬೆಳೆಗಾರ ಗುಂಬಳ್ಳಿ ಮಹದೇವ್ ಹೇಳಿದರು.

‘ಮೈಸೂರು ಹಾಪ್‌ಕಾಮ್ಸ್‌ಗೆ ಬಾಳೆ ಪೂರೈಸಿದರೆ ಸಾಗಣೆ ವೆಚ್ಚವೂ ಹೆಚ್ಚಾಗುತ್ತದೆ. ಬಾಳೆ ಕಡಿಯುವ ಕೂಲಿ ವೆಚ್ಚವೂ ಏರುತ್ತದೆ. ಹಾಗಾಗಿ, ಸಗಟಾಗಿ ಮಧ್ಯವರ್ತಿಗಳಿಗೆ ಬಾಳೆ ಕಾಯಿ ಮಾರಾಟ ಮಾಡಿ ನಷ್ಟ ಕಡಿಮೆ ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ ಬೆಳೆಗಾರ ಪಟ್ಟಣದ ಸುರೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.