ADVERTISEMENT

ಬಂಡೀಪುರ: ₹1.22 ಕೋಟಿ ಪರಿಹಾರ

ಮಾನವ–ವನ್ಯಜೀವಿ ಸಂಘರ್ಷ, ಕಾಡಂಚಿನ ಜನರಿಗೆ ನೆರವು, ಇನ್ನು ₹40 ಲಕ್ಷ ಬಾಕಿ

ಮಲ್ಲೇಶ ಎಂ.
Published 9 ಮಾರ್ಚ್ 2020, 19:45 IST
Last Updated 9 ಮಾರ್ಚ್ 2020, 19:45 IST
ಟಿ.ಬಾಲಚಂದ್ರ
ಟಿ.ಬಾಲಚಂದ್ರ   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿ ಮಾನವ –ಪ್ರಾಣಿ ಸಂಘರ್ಷದಿಂದ ಉಂಟಾದ ನಷ್ಟವನ್ನು ಸರಿದೂಗಿಸಲು ಅರಣ್ಯ ಇಲಾಖೆ 2019–20ನೇ ಸಾಲಿನಲ್ಲಿ ಇದುವರೆಗೆ ₹1,22,19,600 ಮೊತ್ತವನ್ನು ಪರಿಹಾರದ ರೂಪದಲ್ಲಿ ಕಾಡಂಚಿನ ಜನರಿಗೆ ನೀಡಿದೆ.

ಕೆಲವು ವಲಯಗಳಲ್ಲಿ ಇನ್ನು ₹40 ಲಕ್ಷ ಪರಿಹಾರ ನೀಡಲು ಬಾಕಿ ಇದೆ ಎಂದು ಇಲಾಖೆಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಹುಲಿ, ಚಿರತೆ ಸೇರಿದಂತೆ ಇನ್ನಿತರ ವನ್ಯಜೀವಿಗಳ ದಾಳಿಯಿಂದಾಗಿ ಜಾನುವಾರುಗಳ ಸಾವು, ಮಾನವ ಜೀವ ಹಾನಿ ಬೆಳೆ ನಷ್ಟ ಸೇರಿದಂತೆ ಕಾಡು ಪ್ರಾಣಿಗಳಿಂದ ಆಗಿರುವ ನಷ್ಟವು ಪರಿಹಾರದ ವ್ಯಾಪ್ತಿಯಲ್ಲಿ ಬರುತ್ತದೆ.

ADVERTISEMENT

ಈ ವರ್ಷ ಬಂಡೀಪುರ ವ್ಯಾಪ್ತಿಯಲ್ಲಿ ಹುಲಿಯ ಹಾವಳಿ ಹೆಚ್ಚಾಗಿತ್ತು. ಹುಲಿಯ ದಾಳಿಗೆ ಇಬ್ಬರು ರೈತರು ಬಲಿಯಾಗಿದ್ದರು. 15ಕ್ಕೂ ಹೆಚ್ಚು ಜಾನುವಾರುಗಳು ಪ‍್ರಾಣ ಕಳೆದುಕೊಂಡಿದ್ದವು. ಇದರ ಜೊತೆಗೆ, ಆನೆ ದಾಳಿ ಮಾಡಿ ಒಬ್ಬ ರೈತರನ್ನು ಕೊಂದಿತ್ತು. ಆನೆ ಸೇರಿದಂತೆ ಇತರೆ ಪ್ರಾಣಿಗಳಿಂದಾಗಿ ರೈತರು ಬೆಳೆ ನಷ್ಟ ಆದ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇದ್ದವು.

ಬಂಡೀಪುರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪರಿಹಾರವನ್ನು ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ನೀಡಲಾಗಿದೆ. ₹ 25.55 ಲಕ್ಷ ಮೊತ್ತವನ್ನು ಆ ವಲಯದಲ್ಲಿ ವಿತರಿಸಲಾಗಿದೆ. ಇದೇ ವಲಯಕ್ಕೆ ಬರುವಚೌಡಹಳ್ಳಿ ಗ್ರಾಮದಲ್ಲಿ ಕಳೆದ ವರ್ಷ ಹುಲಿಯ ದಾಳಿಗೆ ಇಬ್ಬರು ರೈತರು ಬಲಿಯಾಗಿದ್ದರು. ₹23.20 ಪರಿಹಾರ ವಿತರಿಸಿರುವ ಓಂಕಾರ ವಲಯ ಎರಡನೇ ಸ್ಥಾನದಲ್ಲಿದೆ. ಈ ವಲಯದಲ್ಲಿ ಕಾಡಾನೆಗಳ ಹಾವಳಿ ಹೆಚ್ಚು. ಆನೆಗಳು ಬೆಳೆ ನಷ್ಟ, ರೈತರ ಪಂಪ್‌ ಸೆಟ್ ಧ್ವಂಸ ಮಾಡಿದಂತಹ ಪ್ರಕರಣಗಳು ನಡೆಯುತ್ತಿರುತ್ತವೆ. ಗುಂಡ್ರೆ ವಲಯದಲ್ಲಿ ಅತಿ ಕಡಿಮೆ ಅಂದರೆ, ₹99,200 ಪರಿಹಾರ ನೀಡಲಾಗಿದೆ.

ಪರಿಹಾರ ಮೊತ್ತ ಹೆಚ್ಚಳಕ್ಕೆ ಒತ್ತಾಯ: ವನ್ಯಜೀವಿಗಳ ದಾಳಿಯಿಂದ ಮಾನವ ಜೀವ ಹಾನಿ ಸಂಭವಿಸಿದರೆ ₹5 ಲಕ್ಷ ಪರಿಹಾರ ನೀಡಲಾಗುತ್ತದೆ. ಜಾನುವಾರುಗಳಿಗೆ ₹10 ಸಾವಿರ ಹಾಗೂ ವಿವಿಧ ಬೆಳೆಗಳಿಗೆ ಬೇರೆ ಬೇರೆ ಪರಿಹಾರ ಮೊತ್ತ ನಿಗದಿ ಪಡಿಸಲಾಗಿದೆ.

ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು, ಅದರಲ್ಲೂ ಬೆಳೆ ‍ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ರೈತರು, ಮುಖಂಡರು ಅರಣ್ಯ ಇಲಾಖೆಗೆ ಹಾಗೂ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದಾರೆ. ಈ ನಿರ್ಧಾರ ಸರ್ಕಾರದ ಮಟ್ಟದಲ್ಲಿ ಆಗಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

‘ಶೀಘ್ರ ಬಾಕಿ ಪಾವತಿ’

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು, ‘ಓಂಕಾರ ವಲಯದಲ್ಲಿ ₹23 ಲಕ್ಷ ಹಾಗೂ ಉಳಿದ ವಲಯಗಳಲ್ಲಿ ₹17 ಲಕ್ಷ ಸೇರಿದಂತೆ ಒಟ್ಟಾರೆ ₹ 40 ಲಕ್ಷಗಳಷ್ಟು ಪರಿಹಾರ ನೀಡುವುದಕ್ಕೆ ಬಾಕಿ ಇದೆ. ಇಲಾಖೆಗೆ ಈಗಾಗಲೇ ಮನವಿ ಮಾಡಿದ್ದೇನೆ. ಶೀಘ್ರದಲ್ಲಿ ಮಂಜೂರಾಗಲಿದ್ದು, ತಕ್ಷಣವೇ ರೈತರಿಗೆ ವಿತರಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.