ADVERTISEMENT

ಕಾಳ್ಗಿಚ್ಚು ತಡೆಗೆ ಫೈರ್‌ಲೈನ್‌ ನಿರ್ಮಾಣ ಆರಂಭ

ಬೇಸಿಗೆಗೆ ಸಿದ್ದವಾಗುತ್ತಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 15:46 IST
Last Updated 12 ಡಿಸೆಂಬರ್ 2018, 15:46 IST
ಬಂಡೀಪುರ ಹುಲಿಸಂರಕ್ಷಿತ ಪ್ರದೇಶದಲ್ಲಿ ರಸ್ತೆಯ ಬದಿಯಲ್ಲಿ ಗಿಡಗಂಟಿ, ಹುಲ್ಲುಗಳನ್ನು ತೆರವುಗೊಳಿಸಿ ಫೈರ್‌ಲೈನ್‌ ನಿರ್ಮಿಸಿರುವುದು
ಬಂಡೀಪುರ ಹುಲಿಸಂರಕ್ಷಿತ ಪ್ರದೇಶದಲ್ಲಿ ರಸ್ತೆಯ ಬದಿಯಲ್ಲಿ ಗಿಡಗಂಟಿ, ಹುಲ್ಲುಗಳನ್ನು ತೆರವುಗೊಳಿಸಿ ಫೈರ್‌ಲೈನ್‌ ನಿರ್ಮಿಸಿರುವುದು   

ಗುಂಡ್ಲುಪೇಟೆ: ಬೇಸಿಗೆಯಲ್ಲಿ ಸಂಭವಿಸುವ ಕಾಳ್ಗಿಚ್ಚು ಪ್ರಕರಣಗಳನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಕಿ ನಿಯಂತ್ರಣ ರೇಖೆಗಳನ್ನು (ಫೈರ್‌ ಲೈನ್‌–ನಿರ್ದಿಷ್ಟ ಅಳತೆಗೆ ಹುಲ್ಲು, ಕುರುಚಲು ಗಿಡಗಳು, ಪೊದೆಗಳನ್ನು ತೆರವುಗೊಳಿಸುವುದು) ನಿರ್ಮಾಣ ಮಾಡುವ ಕೆಲಸ ಭರದಿಂದ ಸಾಗಿದೆ.

ಹುಲಿ ಸಂರಕ್ಷಿತ ಪ್ರದೇಶದ ಎಲ್ಲಾ ವಲಯಗಳ ರಾಷ್ಟ್ರೀಯ ಹೆದ್ದಾರಿಗಳು, ಮುಖ್ಯರಸ್ತೆ, ಸಫಾರಿ ರಸ್ತೆ ಮತ್ತು ವೀಕ್ಷಣಾ ಸ್ಥಳಗಳಲ್ಲಿ (ವೀವ್‌ ಪಾಯಿಂಟ್) ಫೈರ್ ಲೈನ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಕಳೆದ ಬೇಸಿಗೆಯಲ್ಲಿ ಮುನ್ನಚ್ಚರಿಕೆವಹಿಸಿದ್ದರಿಂದ ಹಾಗೂ ವರ್ಷಾರಂಭದಲ್ಲೇ ಉತ್ತಮವಾಗಿ ಮಳೆಯಾಗಿದ್ದರಿಂದ ಸಂರಕ್ಷಿತ ಪ್ರದೇಶದಲ್ಲೆಲ್ಲೂ ಬೆಂಕಿ ಅನಾಹುತ ಸಂಭವಿಸಿರಲಿಲ್ಲ. ಈ ವರ್ಷವೂ ಕಾಳ್ಗಿಚ್ಚು ಸಂಭವಿಸದಂತೆ ನೋಡಿಕೊಳ್ಳಲು ಅರಣ್ಯ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

ADVERTISEMENT

ಇದೀಗ ಬೇಸಿಗೆ ಆರಂಭವಾಗುತ್ತಿರುವುದರಿಂದ ರಸ್ತೆಯ ಬದಿಯಲ್ಲಿನ ಹುಲ್ಲುಗಳು ಒಣಗಲು ಆರಂಭವಾಗಿದೆ. ಪ್ರಯಾಣಿಕರು, ರಸ್ತೆಯಲ್ಲಿ ಓಡಾಡುವವರು ಅಥವಾ ಕಿಡಿಗೇಡಿಗಳು ಬೆಂಕಿಯ ಕಿಡಿಯನ್ನು ಹುಲ್ಲಿನತ್ತ ಎಸೆದರೆ ಬೆಂಕಿ ತಕ್ಷಣ ಹೊತ್ತಿಕೊಳ್ಳುವ ಅಪಾಯವಿದೆ. ಹಾಗಾಗಿ ರಸ್ತೆ ಬದಿಯಲ್ಲಿಸುಮಾರು 50 ಮೀಟರ್ ಅಂತರದಲ್ಲಿ ಕಳೆಗಿಡ ಮತ್ತು ಹುಲ್ಲನ್ನು ಕತ್ತರಿಸಿ ಸುಡಲಾಗುತ್ತಿದೆ.ಈ ಕೆಲಸಕ್ಕೆ ಬುಡಕಟ್ಟು ಜನರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಕಾಡಿನ ಒಳಗೆ ಹಾದುಹೋಗುವ ಮುಖ್ಯ ರಸ್ತೆ, ಸಫಾರಿ ರಸ್ತೆ, ವೀವ್‌ ಪಾಯಿಂಟ್‌ಗೆ ಹೋಗುವ ರಸ್ತೆಗಳ ಬದಿಯಲ್ಲಿ 30 ಮೀಟರ್‌ ಅಗಲ ಮತ್ತುಕಾಲುದಾರಿಗಳ ಬದಿಗಳಲ್ಲಿ 10 ಮೀಟರ್‌ ಅಗಲದ ಫೈರ್‌ಲೈನ್‌ ನಿರ್ಮಿಸಲಾಗುತ್ತಿದೆ.

ಬಂಡೀಪುರ ವ್ಯಾಪ್ತಿಯ 13 ವಲಯಗಳ ಪೈಕಿ ಗುಂಡ್ಲುಪೇಟೆ ಬಫರ್ ಜೋನ್ ಬಿಟ್ಟು ಉಳಿದ ಎಲ್ಲಾ ವಲಯಗಳ 2,500 ಕಿ.ಮೀ ವ್ಯಾಪ್ತಿಯಲ್ಲಿ ಫೈರ್‌ಲೈನ್ ನಿರ್ಮಾಣ ಮಾಡಲಾಗುತ್ತಿದೆ.

‘ಕಾಡಿನ ಬಗ್ಗೆ ಅರಿವು ಇರುವ ಬುಡಕಟ್ಟು ಜನರನ್ನು ಬಳಕೆ ಮಾಡಿಕೊಂಡು ರಸ್ತೆಯ ಎರಡು ಬದಿಗಳಲ್ಲಿ ಕಳೆ ಗಿಡ, ಲಾಂಟಾನ ಮತ್ತು ಹುಲ್ಲನ್ನು ಕತ್ತರಿಸಿ ಸುಡಲಾಗುತ್ತಿದೆ.ಇದಕ್ಕಾಗಿ ಒಂದೊಂದು ಗುಂಪಿನಲ್ಲಿ 25ಕ್ಕೂ ಹೆಚ್ಚಿನ ಜನರು ಕೆಲಸ ಮಾಡುತ್ತಿದ್ದಾರೆ. ಅಲ್ಲದೇ, ವಾಹನಗಳ ಚಾಲಕರಿಗೆ ಕಾಡಿನೊಳಗೆ ಧೂಮಪಾನ ಮಾಡದಂತೆ ತಿಳಿವಳಿಕೆ ಹೇಳಲಾಗುತ್ತಿದೆ. ರಸ್ತೆಯಲ್ಲಿ ಸಿಬ್ಬಂದಿ ಹೆಚ್ಚಿನ ಸಮಯ ಗಸ್ತಿನಲ್ಲಿ ತಿರುಗುವಂತೆ ಮಾಡಲಾಗಿದೆ’ ಎಂದು ಬಂಡೀಪುರ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

‘400 ಫೈರ್‌ ವಾಚರ್‌ಗಳ ನೇಮಕ’

‘ಕಾಳ್ಗಿಚ್ಚು ತಡೆಯಲು400ಫೈರ್ ವಾಚರ್‌ಗಳನ್ನು ನೇಮಕ ಮಾಡಿಕೊಂಡು ತರಬೇತಿ ನೀಡಲಾಗುತ್ತದೆ. ಹತ್ತಿರದ ಅಗ್ನಿಶಾಮಕ ಠಾಣೆಗೂ ಸದಾ ಸಿದ್ಧರಾಗಿ ಇರುವಂತೆ ಸೂಚನೆ ನೀಡಲಾಗಿದೆ. ಕಾಡಂಚಿನ ಗ್ರಾಮದವರಿಗೆ ಮತ್ತು ಬುಡಕಟ್ಟು ಜನರಿಗೆ ಕಾಡಿನ ಮಹತ್ವದ ಬಗ್ಗೆ ತಿಳಿ ಹೇಳಲಾಗುತ್ತಿದೆ. ಕಾಳ್ಗಿಚ್ಚು ಸಂಭವಿಸಿದಂತೆ ತಡೆಯಲುಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ; ಇದರಲ್ಲಿ ಸಾರ್ವಜನಿಕ ಪಾಲುದಾರಿಕೆಯೂ ಇರಬೇಕು’ ಎಂದುಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡಿ ಮಾಧವ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.