ADVERTISEMENT

ಸಾಲು ರಜೆ: ಸಫಾರಿಗೆ ಮುಗಿಬಿದ್ದ ಜನ

ಬಂಡೀಪುರ: ಶನಿವಾರ ತಾವರೆಕಟ್ಟೆ ಮಹದೇಶ್ವರನ ದರ್ಶನ ಪಡೆದ ಪ್ರವಾಸಿಗರು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 14:26 IST
Last Updated 23 ಫೆಬ್ರುವರಿ 2020, 14:26 IST
ಬಂಡೀಪುರ ಸಫಾರಿ ಕೌಂಟರ್‌ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು
ಬಂಡೀಪುರ ಸಫಾರಿ ಕೌಂಟರ್‌ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು   

ಗುಂಡ್ಲುಪೇಟೆ: ಮಹಾಶಿವರಾತ್ರಿ ದಿನವಾದ ಶುಕ್ರವಾರ, ಶನಿವಾರ ಹಾಗೂ ಭಾನುವಾರಗಳಂದು ಸತತ ಮೂರು ದಿನ ಸಾಲು ರಜೆ ಇದ್ದುದರಿಂದತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದು ಸಫಾರಿ ಕೌಂಟರ್ ತುಂಬಿ ತುಳುಕಿತು.

ಶನಿವಾರ ಬಂಡೀಪುರ ವ್ಯಾಪ್ತಿಯ ತಾವರೆಕಟ್ಟೆಯಲ್ಲಿ ಮಹದೇಶ್ವರ ಜಾತ್ರೆ ಇದ್ದುದ್ದರಿಂದ ಪ್ರವಾಸಿಗರಿಗೆ ದೇವಸ್ಥಾನಕ್ಕೂ ಭೇಟಿ ನೀಡಿ ಪೂಜೆ ಮಾಡಿಸಿ ದೇವರ ದರ್ಶನ ಮಾಡಿದರು. ಬಳಿಕ ಎಲ್ಲರೂ ಸಫಾರಿಗೆ ತೆರಳಿದರು.

ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದುದರಿಂದ ಸಫಾರಿ ಕೌಂಟರ್‌ನಲ್ಲಿ ಸರತಿ ಸಾಲು ಕಂಡು ಬಂತು.ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕಡಿಮೆಯಾಗಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಪ್ರವಾಸಿಗರು ವಾಹನಗಳನ್ನು ನಿಲ್ಲಿಸಬೇಕಾಯಿತು.

ADVERTISEMENT

ಶನಿವಾರ ಜಾತ್ರೆಯ ಸಲುವಾಗಿ ಸಫಾರಿಗೆ ಹೋಗುವ ವಾಹನಗಳು ಭಕ್ತರನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿಬರುತ್ತಿದ್ದುದರಿಂದ ಸಫಾರಿಗೆ ತೆರಳಲು ಕೊಂಚ ತಡವಾಗಿತ್ತು. ಭಾನುವಾರ ಎಂದಿನಂತೆ 8 ಮಿನಿಬಸ್ ಮತ್ತು 5 ಜಿಪ್ಸಿಗಳು ಸಫಾರಿ ತೆರಳಿದವು. ಹೆಚ್ಚಾಗಿ ಟ್ರಿಪ್ ವ್ಯವಸ್ಥೆ ಮಾಡಿದರೂ ಕೆಲವರಿಗೆ ಸಫಾರಿಗೆ ತೆರಳಲು ಟಿಕೆಟ್ ಸಿಗಲಿಲ್ಲ.

‘ಮಧ್ಯಾಹ್ನ 3ಕ್ಕೆ ಆರಂಭವಾಗುವ ಸಫಾರಿಗೆ ಟಿಕೆಟ್ ತೆಗೆದುಕೊಳ್ಳುವ ಸಲುವಾಗಿ 1 ಗಂಟೆಗೆ ಸಾಲಿನಲ್ಲಿ ನಿಲ್ಲುತ್ತಿದ್ದರು. ನಿರೀಕ್ಷೆಗೆ ಮೀರಿ ಜನರು ಬಂದಿದ್ದಾರೆ. ಸಾಲು ರಜೆ ಇರುವ ಕಾರಣ ಆದಾಯವು ಹೆಚ್ಚಾಗುತ್ತದೆ’ ಎಂದು ವಲಯಾರಣ್ಯಾಧಿಕಾರಿ ನವೀನ್ ಕುಮಾರ್ ತಿಳಿಸಿದರು.

‘ಮೂರು ದಿನಗಳಿಂದ ಐದು ಸಾವಿರಕ್ಕೂ ಹೆಚ್ಚು ಜನರು ಸಫಾರಿಗೆ ಬಂದಿದ್ದಾರೆ. ಸೋಮವಾರದಿಂದ ಜನರು ಕಡಿಮೆ ಆಗುತ್ತಾರೆ. ಮತ್ತೆ ಬೇಸಿಗೆ ರಜೆಯಲ್ಲಿಯೇ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.