
ಚಾಮರಾಜನಗರ: ‘ಬಂಡೀಪುರ, ನಾಗರಹೊಳೆ ಸಂರಕ್ಷಿತ ಪ್ರದೇಶದಲ್ಲಿ ಸಫಾರಿಯನ್ನೇ ನಂಬಿ ಬುಡಕಟ್ಟು ಸಮುದಾಯಗಳು ಬದುಕು ಕಟ್ಟಿಕೊಂಡಿವೆ. ಹೀಗಾಗಿ, ಒತ್ತಡಕ್ಕೆ ಮಣಿದು ಸಫಾರಿಯನ್ನು ನಿರ್ಬಂಧಿಸಬಾರದು’ ಎಂದು ಗುಂಡ್ಲುಪೇಟೆ ತಾಲ್ಲೂಕು ಆದಿವಾಸಿ ಮಹಿಳಾ ಸಂಘದ ಅಧ್ಯಕ್ಷೆ ಪುಟ್ಟಮ್ಮ ಒತ್ತಾಯಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಹಲವರು ಸಫಾರಿ ಕೌಂಟರ್‌ಗಳಲ್ಲಿ, ಜೀಪ್ ಚಾಲಕರಾಗಿ ದುಡಿಯುತ್ತಿದ್ದಾರೆ. ರೆಸಾರ್ಟ್, ಹೋಂ ಸ್ಟೇಗಳಲ್ಲಿ ಕಾರ್ಮಿಕರಾಗಿದ್ದಾರೆ. ಸಫಾರಿ ನಿಲ್ಲಿಸಿದರೆ ಎಲ್ಲರ ಬದುಕು ಬೀದಿಗೆ ಬರಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಸಫಾರಿ ಬಂದ್ ಆಗಿದ್ದಾಗ ಹಲವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಈಗ ಮತ್ತೆ ಆರಂಭವಾಗಿರುವುದು ಸಂತಸ ತಂದಿದೆ. ಕೆಲವರು ಆದಿವಾಸಿಗಳ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿರುವುದು ಬೇಸರ ತರಿಸಿದೆ’ ಎಂದರು.
‘ಸಫಾರಿಗೂ ಮಾನವ–ಪ್ರಾಣಿ ಸಂಘರ್ಷಕ್ಕೂ ಸಂಬಂಧವಿಲ್ಲ. ಅರಣ್ಯದಂಚಿನ ಗ್ರಾಮಸ್ಥರು ಹಾಗೂ ಅವರ ಜಾನುವಾರುಗಳ ಮೇಲೆ ಹಿಂದಿನಿಂದಲೂ ಕಾಡುಪ್ರಾಣಿಗಳು ದಾಳಿ ನಡೆಸುತ್ತಿವೆ. ಸಫಾರಿ ಆರಂಭವಾದ ಮೇಲೆ ಸಂಘರ್ಷ ಆರಂಭವಾಗಿಲ್ಲ. ಸಫಾರಿ ನಿಲ್ಲಿಸುವ ಅಗತ್ಯವಿಲ್ಲ’ ಎಂದು ಪ್ರತಿಪಾದಿಸಿದರು.
‘ಪ್ರವಾಸಿಗರಿಗೆ ಅರಣ್ಯ, ವನ್ಯಜೀವಿಗಳ ಸೌಂದರ್ಯ ಸವಿಯಲು ಸಫಾರಿ ಅಗತ್ಯ’ ಎಂದು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.