ADVERTISEMENT

ಬಂಡೀಪುರ: ಕಾಯಂ ಅರಣ್ಯಾಧಿಕಾರಿಯಿಲ್ಲ, ಎಸಿಎಫ್‌, ಆರ್‌ಎಫ್‌ಓ ಹುದ್ದೆಯೂ ಖಾಲಿ

ವನ್ಯಜೀವಿ ಪ್ರೇಮಿಗಳ ಆಕ್ರೋಶ

ಮಲ್ಲೇಶ ಎಂ.
Published 2 ಫೆಬ್ರುವರಿ 2022, 19:30 IST
Last Updated 2 ಫೆಬ್ರುವರಿ 2022, 19:30 IST
   

ಗುಂಡ್ಲುಪೇಟೆ: ದೇಶದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿರುವ ಬಂಡೀಪುರದಲ್ಲಿ ಹುಲಿ ಯೋಜನೆ ನಿರ್ದೇಶಕರ ಹುದ್ದೆ ಒಂದು ತಿಂಗಳಿನಿಂದ ಖಾಲಿ ಇದೆ. ಮೈಸೂರು ವೃತ್ತದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್‌ ಅವರಿಗೆ ಇಲ್ಲಿನ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾತ್ರವಲ್ಲದೇ, ಬಂಡೀಪುರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯೂ ತಿಂಗಳಿನಿಂದ ಖಾಲಿ ಇದೆ. ಬಂಡೀಪುರದ ವಲಯ ಅರಣ್ಯ ಅಧಿಕಾರಿ ಹುದ್ದೆಯೂ ಆರು ತಿಂಗಳಿನಿಂದ ಖಾಲಿ ಇದೆ. ಗೋಪಾಲಸ್ವಾಮಿ ಬೆಟ್ಟದ ವಲಯ ಅರಣ್ಯಾಧಿಕಾರಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.

ಹಿಂದಿನ ಹುಲಿ ಯೋಜನೆ ನಿರ್ದೇಶಕ ಎಸ್‌.ಆರ್‌.ನಟೇಶ್‌ ಡಿ.28ರಂದು ಜಾರ್ಖಂಡ್‌ಗೆ ವರ್ಗವಾಗಿದ್ದಾರೆ. ಆ ಬಳಿಕ ಸರ್ಕಾರ ಯಾರೊಬ್ಬರನ್ನೂ ನಿಯೋಜಿಸಿಲ್ಲ.

ADVERTISEMENT

ಕೆಳ ಹಂತದ ಅಧಿಕಾರಿಗಳಿಗೆ ಒತ್ತಡ: ಬೇಸಿಗೆ ಆರಂಭವಾಗುತ್ತಿದೆ. ಕಾಳ್ಗಿಚ್ಚು ತಡೆಗೆ ಬೆಂಕಿ ರೇಖೆ ನಿರ್ಮಾಣ ಕೆಲಸ ಆರಂಭವಾಗಿದ್ದರೂ, ಕೆಳ ಹಂತದ ಅಧಿಕಾರಿಗಳೇ ಅದನ್ನು ನಿರ್ವಹಿಸುತ್ತಿದ್ದಾರೆ.

‘ಹಿರಿಯ ಅಧಿಕಾರಿಗಳು ಇದ್ದರೆ ನಮಗೆ ಧೈರ್ಯ. ಏನು ಮಾಡಬೇಕು, ಯಾವ ಹಂತದಲ್ಲಿ ಹೇಗೆ ನಿರ್ಣಯ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಸಲಹೆ, ಮಾರ್ಗದರ್ಶನ ಸಿಗುತ್ತದೆ. ಭಯವಿಲ್ಲದಂತೆ ಕಾರ್ಯ ನಿರ್ವಹಿಸಬಹುದು. ಇಲ್ಲವಾದರೆ ಗೊಂದಲ ಹೆಚ್ಚು. ಒತ್ತಡದಲ್ಲೇ ಕೆಲಸ ಮಾಡಬೇಕಾಗುತ್ತದೆ’ ಎಂದು ಕೆಳಹಂತದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

ಕೇಂದ್ರ ಸ್ಥಾನದಲ್ಲಿರಬೇಕು: 2019ರ ಫೆ.23ರಂದು ಬಂಡೀಪುರದಲ್ಲಿ ಬೆಂಕಿ ಕಾಣಿಸಿಕೊಂಡು 11 ಸಾವಿರ ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಅಗ್ನಿಗಾಹುತಿಯಾಗಿತ್ತು.

‘ಬೇಸಿಗೆ ಸಂದರ್ಭದಲ್ಲಿ ಉನ್ನತ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಕಾಡಂಚಿನ ಗ್ರಾಮಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅರಣ್ಯಕ್ಕೆ ಬೆಂಕಿ ಬೀಳದಂತೆ ಎಚ್ಚರಿಕೆ ವಹಿಸಬೇಕು. ಹಿಂದೆ ಇದ್ದ ಬಾಲಚಂದ್ರ ಎಂಬ ಅಧಿಕಾರಿ ಇಡೀ ಬೇಸಿಗೆಯಲ್ಲಿ ಬಂಡೀಪುರದಲ್ಲಿದ್ದುಕೊಂಡು ಸಿಬ್ಬಂದಿ ಮತ್ತು ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ರೈತರಿಗೆ ಉಪಯೋಗ ಆಗುವ ಅನೇಕ ಕಾರ್ಯಕ್ರಮ ಹಮ್ಮಿಕೊಂಡು ಕೆಲಸ ಮಾಡಿದ್ದರು. ಈ ಬಾರಿ ಅಂತಹ ಕಾರ್ಯಕ್ರಮ ಏನೂ ನಡೆದಿಲ್ಲ’ ಎಂದು ಮಂಗಲ ಗ್ರಾಮದ ಉಮೇಶ್ ತಿಳಿಸಿದರು.

‘ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಅರಣ್ಯ ಸಚಿವರು ಈ ಬಗ್ಗೆ ಗಮನ ಹರಿಸಿ ಕಾಯಂ ಸಿಎಫ್, ಎಸಿಎಫ್ ಮತ್ತು ಆರ್‌ಎಫ್‌ಒಗಳನ್ನು ನಿಯೋಜಿಸಬೇಕು’ ಎಂದು ಶಿವಪುರ ಮಹಾದೇವಪ್ಪ ಒತ್ತಾಯಿಸಿದರು.

ಬೇಕಾಬಿಟ್ಟಿ ಕೆಲಸ:ಬಂಡೀಪುರದಲ್ಲಿ ಲಂಟಾನ ತೆರೆವು ಕಾರ್ಯ ಮತ್ತು ಬೆಂಕಿ ರೇಖೆ ನಿರ್ಮಾಣ ಕೆಲಸ ನಡೆಯುತ್ತಿದೆ. ಆದರೆ, ಅದರ ಮೇಲ್ವಿಚಾರಣೆ ನಡೆಸಲು ಅಧಿಕಾರಿ ಇಲ್ಲದಿರುವುದರಿಂದ ಕೆಲಸ ಬೇಕಾಬಿಟ್ಟಿಯಾಗಿ ಆಗುತ್ತಿದೆ ಎಂದು ಕಾಡಂಚಿನ ಗ್ರಾಮಸ್ಥರು ದೂರಿದ್ದಾರೆ.

‘ಕಳೆದ ವರ್ಷ ಬೆಂಕಿ ರೇಖೆ ನಿರ್ಮಾಣ ಮಾಡುವಾಗ ಇಂತಿಷ್ಟು ಮೀಟರ್‌ ಎಂದು ನಿಗದಿ ಮಾಡಿ ಅಚ್ಚುಕಟ್ಟಾಗಿ ಮಾಡಿದ್ದರು. ಆದರೆ ಈ ಬಾರಿ ಮೇಲುಕಾಮನಹಳ್ಳಿ ಚೆಕ್‌ಪೋಸ್ಟ್‌ನಿಂದ ಗಡಿ ಭಾಗ ಕೆಕ್ಕನಹಳ್ಳದವರೆಗೆ ಮಾಡಿರುವ ಬೆಂಕಿ ರೇಖೆ ಕಾಟಾಚಾರಕ್ಕೆ ಎಂಬಂತಿದೆ. ರಸ್ತೆ ಬದಿಯಲ್ಲಿನ ಹುಲ್ಲನ್ನು ಸಮರ್ಪಕವಾಗಿ ಸುಟ್ಟಿಲ್ಲ. ಕಾಡಿನ ಒಳಗೆ ಯಾವ ಕೆಲಸ ಆಗಿದೆಯೇ ಇಲ್ಲವೇ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಬಾಚಹಳ್ಳಿಯ ಸ್ವಾಮಿ ಆತಂಕ ವ್ಯಕ್ತಪಡಿಸಿದರು.

ತಿಂಗಳಿಂದ ಹುದ್ದೆ ಖಾಲಿ; ಅಚ್ಚರಿ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆ ತಿಂಗಳಿಂದ ಖಾಲಿ ಇರುವುದು ಅಚ್ಚರಿ ಮೂಡಿಸಿದೆ.

ಸಾಮಾನ್ಯವಾಗಿ ಹುಲಿ ಸಂರಕ್ಷಿತ ಪ್ರದೇಶ ಅದರಲ್ಲೂ ಬಂಡೀಪುರದಂತಹ ಸ್ಥಳಗಳಿಗೆ ತೆರಳಲು ಐಎಫ್ಎಸ್‌ ಅಧಿಕಾರಿಗಳ ನಡುವೆ ಪೈಪೋಟಿ ಇರುತ್ತದೆ. ಆಯಕಟ್ಟಿನ ಹುದ್ದೆಯನ್ನು ಪಡೆಯಲು ಭಾರಿ ಲಾಬಿಯನ್ನೂ ಮಾಡುತ್ತಾರೆ.

ಈ ಹಿಂದೆ ಬಂಡೀಪುರ ಸಿಎಫ್‌ ಆಗಿದ್ದ ಬಾಲಚಂದ್ರ ಸೇವೆಯಿಂದ ನಿವೃತ್ತರಾದ ನಂತರ ಆ ಸ್ಥಳಕ್ಕೆ ಬರಲು ಇಬ್ಬರು ಅಧಿಕಾರಿಗಳ ನಡುವೆ ಭಾರಿ ಪೈಪೋಟಿ ನಡೆದಿತ್ತು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಅಚ್ಚರಿಯ ಬೆಳವಣಿಗೆಯಲ್ಲಿ ನಟೇಶ್‌ ನೇಮಕಗೊಂಡಿದ್ದರು.

ಈ ಬಾರಿಯೂ ಇಬ್ಬರು ಅಧಿಕಾರಿಗಳು ಪೈಪೋಟಿ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ.

ಕಾಯಂ ಸಿಎಫ್‌ ಅಗತ್ಯವಿದೆ ಎಂದು ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಪತ್ರವನ್ನೂ ಬರೆದಿದ್ದೇನೆ. ನೇಮಕ ಮಾಡುವ ಭರವಸೆ ನೀಡಿದ್ದಾರೆ
- ಟಿ.ಹೀರಾಲಾಲ್‌, ಮೈಸೂರು ವಿಭಾಗದ ಸಿಸಿಎಫ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.