ADVERTISEMENT

ಕಾಳ್ಗಿಚ್ಚು ಜಾಗೃತಿ: ತಮಟೆಗೆ ಮೊರೆ

ಬಂಡೀಪುರ: ಅರಣ್ಯ ಇಲಾಖೆಯಿಂದ ವಿವಿಧ ಪ್ರಯೋಗಗಳು, ಇದುವರೆಗೂ ಕಾಣದ ಬೆಂಕಿ

ಮಲ್ಲೇಶ ಎಂ.
Published 22 ಫೆಬ್ರುವರಿ 2020, 10:30 IST
Last Updated 22 ಫೆಬ್ರುವರಿ 2020, 10:30 IST
ಡ್ರೋನ್‌ ಬಳಸಿ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ
ಡ್ರೋನ್‌ ಬಳಸಿ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಬಾರಿ ಕಾಳ್ಗಿಚ್ಚು ತಡೆಗೆ ಅರಣ್ಯ ಇಲಾಖೆ ಹಲವು ಪ್ರಯೋಗಗಳನ್ನು ಮಾಡುತ್ತಿದ್ದು, ಬೆಂಕಿಯಿಂದಾಗುವ ಅನಾಹುತದ ಬಗ್ಗೆ ಕಾಡಂಚಿನ ಜನರಲ್ಲಿ ಜಾಗೃತಿ ಮೂಡಿಸಲು ತಮಟೆ ಬಾರಿಸುತ್ತಾ (ಟಂ ಟಂ) ತಿಳಿ ಹೇಳುವ ಪ್ರಯತ್ನಕ್ಕೆ ಮುಂದಾಗಿದೆ.

ರಾಜ್ಯದಲ್ಲಿರುವ ವಿವಿಧ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಯಲ್ಲಿ ತಮಟೆಗಳನ್ನು ಬಾರಿಸುತ್ತಾ ಅರಿವು ಮೂಡಿಸಲಾಗುತ್ತಿದೆ. ಬಂಡೀಪುರದ ಅರಣ್ಯ ವ್ಯಾಪ್ತಿಯ ಗ್ರಾಮಗಳಲ್ಲಿ ಅದೇ ವಿಧಾನವನ್ನು ಅಳವಡಿಸಲು ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ಯೋಚಿಸುತ್ತಿದ್ದಾರೆ.

‘ಗ್ರಾಮೀಣ ಪ್ರದೇಶದ ಜನರಿಗೆ ಅರಿವು ಕಾರ್ಯಕ್ರಮಗಳನ್ನು ಹಳೆಯ ಮಾದರಿಯಲ್ಲಿ ತಿಳಿಸಬೇಕು. ಸಾಕಷ್ಟು ಜನರಿಗೆ ಅಕ್ಷರದ ಅರಿವಿರುವುದಿಲ್ಲ. ಸಾಮಾಜಿಕ ಜಾಲತಾಣ ಗೊತ್ತಿರುವುದಿಲ್ಲ. ದಿನಪತ್ರಿಕೆ ಓದುವುದಿಲ್ಲ ಅಂತಹ ಜನರಿಗೆ ಟಂ ಟಂ ಒಳ್ಳೆಯ ಮಾಧ್ಯಮ. ಬೇಗ ಜನರನ್ನು ಮುಟ್ಟುತ್ತದೆ’ ಎಂಬುದು ಅಧಿಕಾರಿಗಳ ಅಭಿಪ್ರಾಯ.

ADVERTISEMENT

ತಮಟೆ ಬಾರಿಸುವುದಕ್ಕಾಗಿಗ್ರಾಮ ಪಂಚಾಯತಿ ಸಹಾಯ ಪಡೆಯಲು ಚಿಂತಿಸಿದ್ದಾರೆ. ಗ್ರಾಮಗಳಲ್ಲಿ ತಮಟೆ ಬಾರಿಸುವವರನ್ನು ಬಳಸಿಕೊಳ್ಳಲಾಗುತ್ತಿದೆ. ಈಗಾಗಲೇ ಕಾಡು ಪ್ರಾಣಿಗಳ ಹಾವಳಿ, ರಸ್ತೆಯಲ್ಲಿ ಕಾಡು ಪ್ರಾಣಿಗಳು ದಾಟುವ ಬಗ್ಗೆ ಜನರಿಗೆ ಎಚ್ಚರಿಕೆ ನೀಡಲು ಅರಣ್ಯ ಇಲಾಖೆ ಈ ಪ್ರಯೋಗ ಮಾಡಿದೆ.

ಕಳೆದ ವರ್ಷ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ಹಾಗೂ ಗೋಪಾಲಸ್ವಾಮಿ ಬೆಟ್ಟದ ವಲಯಗಳಲ್ಲಿ ಬೆಂಕಿ ಬಿದ್ದು ‌11,400 ಎಕರೆ ಕಾಡು ಭಸ್ಮವಾಗಿತ್ತು.

ಈ ವರ್ಷ ಉತ್ತಮ ಮಳೆಯಾಗಿದ್ದರೂ, ಬಿಸಿಲಿನ ಪ್ರಮಾಣ ಹೆಚ್ಚಿದೆ. ಹಾಗಾಗಿ, ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆಯು ಕಾಡಂಚಿನ ಜನರ ವಿಶ್ವಾಸವನ್ನು ಗಳಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಕಾಡಂಚಿನಲ್ಲಿರುವ ಇರುವ ಶಾಲೆಗಳಿಗೆ ಭೇಟಿ ನೀಡಿ ಅರಿವು ಮೂಡಿಸಲಾಗುತ್ತಿದೆ. ಗಿರಿಜನರ ವಿಶ್ವಾಸ ಗಳಿಸಲು ಅವರ ಜೊತೆಗೂಡಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಕಾಡಂಚಿನಲ್ಲಿ ಡ್ರೋನ್‌ ನಿಗಾ

ಕಾಳ್ಗಿಚ್ಚಿನ ಮೇಲೆ ನಿಗಾ ಇಡುವುದಕ್ಕಾಗಿ ಇದೇ ಮೊದಲ ಬಾರಿಗೆ ಇಲಾಖೆ ಡ್ರೋನ್‌ ಕ್ಯಾಮೆರಾಗಳನ್ನು ಬಳಿಸಿದೆ. ಕಾಡಂಚಿನ ಗ್ರಾಮಗಳ ವ್ಯಾಪ್ತಿಯಲ್ಲಿ ಇವುಗಳ ಮೂಲಕ ಕಾರ್ಯಾಚರಣೆ ಮಾಡಲಾಗುತ್ತಿದೆ.

ಬಂಡೀಪುರ ಹುಲಿ ಸಂರಕ್ಷಿತ ವ್ಯಾಪ್ತಿಯ ಪ್ರದೇಶದಲ್ಲಿ 133 ಗ್ರಾಮಗಳು ಕಾಡಂಚಿನಲ್ಲಿವೆ. ಇಲ್ಲಿ ಮೂರು ಡ್ರೋನ್‌ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಗೋಪಾಲಸ್ವಾಮಿ ಬೆಟ್ಟ, ಮದ್ದೂರು ಹಾಗೂ ಓಂಕಾರ ವಲಯಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

‘ಡ್ರೋನ್ ಕ್ಯಾಮರಾಗಳನ್ನು 15 ನಿಮಿಷಗಳ ಕಾಲ ಹಾರಾಡಿಸಿ, ಅದು ಸೆರೆ ಹಿಡಿದಿರುವ ಚಿತ್ರ, ವಿಡಿಯೊಗಳನ್ನು ಪರಿಶೀಲಿಸಲಾಗುತ್ತದೆ. ಕಾಡಿನೊಳಗೆ ಯಾರಾದರೂ ಅಕ್ರಮವಾಗಿ ನುಸುಳಿದ್ದಾರಾ? ಎಲ್ಲಿಯಾದರೂ ಹೊಗೆಯಾಡುತ್ತಿದೆಯೇ? ಹೊಗೆಯಾಡಿತ್ರಿದೆಯಾ? ದನಕರುಗಳನ್ನು ಕಾಡಿನೊಳಗೆ ಬಿಟ್ಟಿದ್ದಾರೆಯೇ ಎಂಬುದನ್ನು ಗಮನಿಸಲಾಗುತ್ತದೆ’ ಎಂದು ವಲಯಾರಣ್ಯಾಧಿಕಾರಿ ನವೀನ್ ಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

----

ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ಮಾತ್ರ ಕಾಡಿನ ಸಂಪತ್ತು ಮತ್ತು ಪ್ರಾಣಿಗಳನ್ನು ಸಂರಕ್ಷಣೆ ಮಾಡಲು ಸಾಧ್ಯವಿಲ್ಲ. ಇದಕ್ಕೆ ಜನರ ಸಹಭಾಗಿತ್ವವೂ ಬೇಕು
ಟಿ.ಬಾಲಚಂದ್ರ, ಹುಲಿಯೋಜನೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.