ADVERTISEMENT

ಹುಲಿ ದಾಳಿ: ಗ್ರಾಮಸ್ಥರಲ್ಲಿ ಮಡುಗಟ್ಟಿದ ಆತಂಕ

ಗೋಪಾಲಪುರ; ಮನುಷ್ಯರ ಮೇಲೆ ಮೊದಲ ಬಾರಿ ದಾಳಿ, ಸೆರೆಗೆ ಗ್ರಾಮಸ್ಥರ ಒತ್ತಾಯ

ಮಲ್ಲೇಶ ಎಂ.
Published 3 ಜುಲೈ 2022, 1:47 IST
Last Updated 3 ಜುಲೈ 2022, 1:47 IST
ಹುಲಿ ದಾಳಿಯಲ್ಲಿ ರೈತ ರಾಜಶೇಖರ ಅವರು ಗಾಯಗೊಂಡಿರುವುದು 
ಹುಲಿ ದಾಳಿಯಲ್ಲಿ ರೈತ ರಾಜಶೇಖರ ಅವರು ಗಾಯಗೊಂಡಿರುವುದು    

ಗುಂಡ್ಲುಪೇಟೆ: ಅಪರೂಪಕ್ಕೊಮ್ಮೆ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲಿ ಕಾಣಿಸಿಕೊಂಡು ಪ್ರವಾಸಿಗರಿಗೆ ಖುಷಿ ನೀಡುತ್ತಿದ್ದ ಹುಲಿ, ಇದೀಗ ಬೆಟ್ಟದ ತಪ್ಪಲಿನಲ್ಲಿರುವ ಗೋಪಾಲಪುರ, ಲಕ್ಕಿಪುರ ಗ್ರಾಮದ ರೈತರ ಮೇಲೆ ದಾಳಿ ಮಾಡಿರುವುದು ಈ ಭಾಗದ ಜನರನ್ನು ಆತಂಕಕ್ಕೆ ದೂಡಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲ‌ಸ್ವಾಮಿ ಬೆಟ್ಟ ವಲಯದ ಅಂಚಿನಲ್ಲಿ ಬರುವ ಈ ಗ್ರಾಮಗಳಲ್ಲಿ ಈ ಹಿಂದೆ ಕಾಡು ಪ್ರಾಣಿಗಳು ಕಾಣಿಸಿಕೊಂಡಿದ್ದರೂ ಮನುಷ್ಯರ ಮೇಲೆ ದಾಳಿ ಮಾಡಿರಲಿಲ್ಲ.

ಈಗ ಕೃಷಿ ಚಟುವಟಿಕೆ ನಡೆಸುತ್ತಿದ್ದ ರೈತರೊಬ್ಬರ ಮೇಲೆ ಏಕಾಏಕಿ ದಾಳಿ ನಡೆಸಿ ಗಾಯಗೊಳಿಸಿರುವುದು, ಪಕ್ಕದ ಜಮೀನಿನಲ್ಲೇ ಅವಿತು ಕುಳಿತು ಮತ್ತೊಬ್ಬ ರೈತನ ಮೇಲೆ ದಾಳಿ ನಡೆಸಿದ್ದು, ಕಾಡಂಚಿನ ಜಮೀನುಗಳಲ್ಲಿ ಕೃಷಿ ಮಾಡುವ ರೈತರಲ್ಲಿ ಭಯವನ್ನು ಉಂಟು ಮಾಡಿದೆ. ಅದೃಷ್ಟವಶಾತ್‌ ಇಬ್ಬರೂ ರೈತರ ಪ್ರಾಣಕ್ಕೆ ತೊಂದರೆಯಾಗಿಲ್ಲ.

ADVERTISEMENT

ಗೋಪಾಲಪುರ, ಕುಣಗಳ್ಳಿ, ದೇವರಹಳ್ಳಿ ಕಾಲೊನಿ, ಹಗ್ಗದಹಳ್ಳ, ಬೆಂಡರವಾಡಿ ಲಕ್ಕಿಪುರ, ಬೀಚನಹಳ್ಳಿ ಗ್ರಾಮಗಳ ಅನೇಕ ರೈತರು ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಅನೇಕರು ಜಮೀನುಗಳಲ್ಲಿ ಮನೆ ಕಟ್ಟಿಕೊಂಡು ಜಾನುವಾರುಗಳನ್ನು ಸಾಕಿಕೊಂಡು ಜೀವನ ಮಾಡುತ್ತಿದ್ದಾರೆ.

‘ಹಿಂದೆಯೂ ಈ ಭಾಗದಲ್ಲಿ ಹುಲಿ, ಚಿರತೆ, ಕರಡಿಗಳು ಕಾಣಿಸಿಕೊಳ್ಳುತ್ತಿದ್ದವು. ಕೆಲವೊಮ್ಮೆ ಹಸು, ಎತ್ತು, ಮೇಕೆ, ನಾಯಿಗಳ ಮೇಲೆ ದಾಳಿ ಮಾಡಿ ಅವುಗಳನ್ನು ಕೊಂದಿರುವ ಉದಾಹರಣೆಗಳೂ ಇವೆ. ಆದರೆ, ಮನುಷ್ಯರ ಮೇಲೆ ದಾಳಿ ಮಾಡಿರಲಿಲ್ಲ. ಇದೇ ಮೊದಲ ಪ್ರಕರಣ’ ಎಂದು ಗೋಪಾಲಪುರ ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಶನಿವಾರ ಹುಲಿಯು ನೇರವಾಗಿ ರೈತ ಗವಿಯಪ್ಪ ಅವರ ಮೇಲೆ ದಾಳಿ ಮಾಡಿಲ್ಲ. ಅದು ಮೊದಲು ಹಸುವಿನ ಮೇಲೆ ದಾಳಿ ಮಾಡಿತ್ತು. ಗವಿಯಪ್ಪ ಅವರು ಹಸು ರಕ್ಷಿಸಲು ಯತ್ನಿಸುವ ಸಂದರ್ಭದಲ್ಲಿ ಹುಲಿ ಹೆದರಿ ದಾಳಿ ಮಾಡಿರುವ ಸಾಧ್ಯತೆ ಇದೆ. ಆಗಿರುವ ಗಾಯ ನೋಡಿದರೆ ಹುಲಿಯ ದಾಳಿಯ ತೀವ್ರತೆ ಹೆಚ್ಚು ಇದ್ದಂತೆ ಕಾಣಿಸುತ್ತಿಲ್ಲ ಎಂದು ಹೇಳುತ್ತಾರೆ ವನ್ಯಜೀವಿ ತಜ್ಞರು.

‘ಹುಲಿಯು ಸಾಕುಪ್ರಾಣಿಗಳ ಮೇಲೆ ದಾಳಿ ಮಾಡಿದಾಗ ಬಿಡಿಸಲು ಹೋಗಬಾರದು. ಅದು ಗಾಬರಿಯಾಗಿ ತಿರುಗಿ ಬೀಳುತ್ತದೆ. ನಾವು ಸುಮ್ಮನಿದ್ದರೆ ಸಾಕುಪ್ರಾಣಿಯನ್ನು ಕೊಂದು ತಿಂದು ಹೋಗುತ್ತದೆ. ರೈತರಿಗೆ ಇದರ ಅರಿವು ಇರುವುದಿಲ್ಲ. ಸಾಕು ಪ್ರಾಣಿ ರಕ್ಷಣೆ ಮಾಡಲು ಹೋಗಿ ತಮ್ಮ ಪ್ರಾಣವನ್ನು ಒತ್ತೆ ಇಡುತ್ತಿದ್ದಾರೆ’ ಎಂದು ವನ್ಯಜೀವಿ ಛಾಯಾಗ್ರಾಹಕ ಆರ್‌.ಕೆ.ಮಧು ಹೇಳಿದರು.

ಹುಲಿ ಸೆರೆ,ಪರಿಹಾರಕ್ಕೆ ಒತ್ತಾಯ

ಲಕ್ಕಿಪುರದಲ್ಲಿರುವ ಶಿವಬಸಪ್ಪ ಎಂಬುವರಿಗೆ ಸೇರಿದ ಜಮೀನಿನಲ್ಲೇ ಹುಲಿ ಅವಿತು ಕುಳಿತಿದೆ ಎಂದು ಹೇಳಲಾಗುತ್ತಿದ್ದು, ಅದನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

‘ಹುಲಿ ಒಮ್ಮೆ ಮನುಷ್ಯರ ಮೇಲೆ ದಾಳಿ ಮಾಡಿದರೆ, ಮತ್ತೆ ಮತ್ತೆ ಮಾಡುತ್ತಲೇ ಇರುತ್ತದೆ. ಆದ್ದರಿಂದ ಹುಲಿಯನ್ನು ಶೀಘ್ರವಾಗಿ ಸೆರೆ ಹಿಡಿಯಬೇಕು. ಎರಡು ವರ್ಷಗಳ ಹಿಂದೆ ಚೌಡಹಳ್ಳಿ ಭಾಗದಲ್ಲಿ ಇಬ್ಬರು ರೈತರನ್ನು ಹುಲಿ ಕೊಂದಿತ್ತು. ಆದಾದ ನಂತರ ನಮ್ಮ ಭಾಗದಲ್ಲಿ ಹುಲಿ ದಾಳಿಗಳು ನಡೆದಿರಲಿಲ್ಲ. ಇದೀಗ ಈ ಘಟನೆ ಆಗಿರುವುದು ಭಯದ ವಾತಾವರಣ ಸೃಷ್ಟಿಸಿದೆ. ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ತೆಗೆದುಕೊಂಡು ಹುಲಿ ಸೆರೆ ಹಿಡಿಯಬೇಕು’ ಎಂದು ಗ್ರಾಮದ ರೈತರಾದ ಮಂಜುನಾಥ್, ಜಿ.ಎಂ. ನಾಗಪ್ಪ, ಜಿ.ಬಿ.ಚೇತನ್ ಆಗ್ರಹಿಸಿದರು.

ಕಡು ಬಡವರಾಗಿರುವ ರೈತ ಗವಿಯಪ್ಪ ಮತ್ತು ರಾಜಶೇಖರ ಅವರಿಗೆ ಇಲಾಖೆಯಿಂದ ಸೂಕ್ತ ಪರಿಹಾರ ನೀಡಬೇಕು ಎಂದೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಹುಲಿ ಪತ್ತೆ ಕಾರ್ಯಾಚರಣೆಗೆ ಸಿದ್ಧತೆ

ಬಂಡೀಪುರದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಲಕ್ಕಿಪುರ ಕೃಷಿ ಜಮೀನಿನ ಬಳಿ ಬೀಡು ಬಿಟ್ಟಿದ್ದಾರೆ. ಹುಲಿಯ ಚಲನವಲನವನ್ನು ಗಮನಿಸುತ್ತಿದ್ದಾರೆ.

‘ಹುಲಿ ಸದ್ಯ ಶಿವಬಸಪ್ಪ ಎಂಬುವರ ಜಮೀನಿನಲ್ಲಿ ಇರುವುದನ್ನು ಸಿಬ್ಬಂದಿ ಗಮನಿಸಿದ್ದಾರೆ. ಸಿಬ್ಬಂದಿ ಹುಲಿಯ ಮೇಲೆ ನಿಗಾ ವಹಿಸಿದ್ದಾರೆ. ಭಾನುವಾರ ರಾಂಪುರ ಶಿಬಿರದಿಂದ ಆನೆಗಳನ್ನು ಮತ್ತು ವೈದ್ಯರನ್ನು ಕರೆಸಿ ಹುಲಿ ಪತ್ತೆ ಕಾರ್ಯಾಚರಣೆ ಮಾಡಲಾಗುವುದು’ ಎಂದು ವಲಯಾರಣ್ಯಾಧಿಕಾರಿ ನವೀನ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾಧಿಕಾರಿ ಭೇಟಿ: ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಶನಿವಾರ ರಾತ್ರಿ ಗೋಪಾಲಪುರಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಗ್ರಾಮಸ್ಥರಿಂದ ಮಾಹಿತಿಯನ್ನೂ ಮಾಡಿದರು. ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್‌ಕುಮಾರ್‌, ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮಸ್ಥರು ಇದ್ದರು.

--

ಅರಣ್ಯ ಇಲಾಖೆ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಜನರಿಗಿರುವ ಭಯ ಹೋಗಲಾಡಿಸಿ ಧೈರ್ಯ ತುಂಬಬೇಕು
ಲೋಕೇಶ್, ಗೋಪಾಲಪುರ ಗ್ರಾ.ಪಂ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.