ADVERTISEMENT

ಗುಂಡ್ಲುಪೇಟೆ: ಮಧುಮಲೈ ಸಫಾರಿಯತ್ತ ಪ್ರವಾಸಿಗರ ದಂಡು

ಕ್ರಿಸ್‌ಮಸ್‌, ಹೊಸ ವರ್ಷ; ಬಂಡೀಪುರದಲ್ಲಿ ಪ್ರವಾಸಿಗರಿಗೆ ವಾಸ್ತವ್ಯ, ಸಾರಿಗೆ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 7:23 IST
Last Updated 25 ಡಿಸೆಂಬರ್ 2025, 7:23 IST
ಸಫಾರಿಗೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನದಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಸಫಾರಿ ನಿಲ್ಲಿಸಲಾಯಿತು
ಸಫಾರಿಗೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನದಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಸಫಾರಿ ನಿಲ್ಲಿಸಲಾಯಿತು   

ಗುಂಡ್ಲುಪೇಟೆ: ಕ್ರಿಸ್‌ಮಸ್‌ ಹಾಗೂ ಹೊಸ ವರ್ಷವನ್ನು ಸಂಭ್ರಮಿಸಲು ಹೆಚ್ಚಿನ ಪ್ರವಾಸಿಗರು ಬಂಡೀಪುರ ಅರಣ್ಯದತ್ತ ಬರುತ್ತಿದ್ದಾರೆ. ಮಾನವ ಪ್ರಾಣಿ ಸಂಘರ್ಷದ ಹಿನ್ನೆಲೆಯಲ್ಲಿ ಸಫಾರಿ ಬಂದ್ ಆಗಿದ್ದರೂ ಇಲ್ಲಿರುವ ರೆಸಾರ್ಟ್‌ ಹಾಗೂ ಹೋಂ ಸ್ಟೇಗಳ ಮಾಲೀಕರು ಪ್ರವಾಸಿಗರಿಗೆ ನಿರಾಶೆಯಾಗದಂತೆ ವಿಭಿನ್ನ ಯೋಜನೆ ರೂಪಿಸಿದ್ದಾರೆ.

ಪ್ರಕೃತಿಯ ಸೌಂದರ್ಯ ವೀಕ್ಷಿಸಲು ಬರುತ್ತಿರುವ ಪ್ರವಾಸಿಗರಿಗೆ ಬಂಡೀಪುರದಲ್ಲಿರುವ ವಸತಿಗೃಹ, ರೆಸಾರ್ಟ್‌ ಹಾಗೂ ಹೋಂಸ್ಟೇಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿ ಅಲ್ಲಿಂದ ನೆರೆಯ ತಮಿಳುನಾಡಿನ ಮುದುಮಲೈ ಅರಣ್ಯ ಪ್ರದೇಶದಲ್ಲಿರುವ ಸಫಾರಿ ಕೇಂದ್ರಕ್ಕೆ ವಾಹನಗಳ ಮೂಲಕ ಕರೆದೊಯ್ಯುತ್ತಿದ್ದಾರೆ.

ಈ ಮೂಲಕ ಸಫಾರಿ ಬಂದ್‌ನಿಂದ ಪ್ರವಾಸಿಗರ ಬರ ಎದುರಿಸುತ್ತಿದ್ದ ರೆಸಾರ್ಟ್‌, ಹೋಂಸ್ಟೇ ಮಾಲೀಕರು ಹೊಸ ದಾರಿ ಕಂಡುಕೊಂಡಿದ್ದಾರೆ. ಸಾಲು ಸಾಲು ರಜಾ ದಿನಗಳ ಹಿನ್ನೆಲೆಯಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಾಗಿದ್ದು ವಾಣಿಜ್ಯ ಚಟುವಟಿಕೆಗಳು ಗರಿಗೆದರಿವೆ.

ADVERTISEMENT

ರಜಾ ದಿನ ಹಾಗೂ ವರ್ಷಾಂತ್ಯ ಆಗಿರುವುದರಿಂದ ಮಧುಮಲೈ ಸಫಾರಿ ಕೇಂದ್ರಗಳ ಸುತ್ತಮುತ್ತಲಿರುವ ವಸತಿಗೃಹಗಳಿಗೂ ಬೇಡಿಕೆ ಹೆಚ್ಚಿದ್ದು ಅಲ್ಲಿ ಕೊಠಡಿಗಳು ಸಿಗದವರು ಬಂಡೀಪುರ ಹಾಗೂ ಸುತ್ತಮುತ್ತಲಿನ ರೆಸಾರ್ಟ್, ಹೋಂ ಸ್ಟೇಗಳಲ್ಲೇ ಉಳಿದುಕೊಳ್ಳುತ್ತಿದ್ದಾರೆ. ಬಂಡೀಪುರದಿಂದ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶ ಕೇವಲ 15 ಕಿಮೀ ದೂರವಿರುವುದರಿಂದ ಪ್ರವಾಸಿಗರು ಸುಲಭವಾಗಿ ತಲುಪಬಹುದಾಗಿದೆ.

ಸ್ವಂತ ವಾಹನಗಳಲ್ಲಿ ಬಂದಿರುವ ಪ್ರವಾಸಿಗರು ಬಂಡೀಪುರದಲ್ಲಿ ರಾತ್ರಿ ವಾಸ್ತವ್ಯ ಮಾಡಿ ಬೆಳಿಗ್ಗೆ ಮಧುಮಲೈ ಸಫಾರಿಗೆ ತೆರಳುತ್ತಿದ್ದಾರೆ. ವಾಹನಗಳ ಸೌಲಭ್ಯ ಇಲ್ಲದವರಿಗೆ ರೆಸಾರ್ಟ್‌ಗಳೇ ವಾಹನಗಳ ವ್ಯವಸ್ಥೆ ಮಾಡಿಕೊಡುತ್ತಿವೆ. 

ಬಂಡೀಪುರ ಸುತ್ತ ಜಂಗಲ್ ಲಾಡ್ಜ್, ಸೆರಾಯ್, ಕಂಟ್ರಿ ಕ್ಲಬ್ ಸೇರಿದಂತೆ ಹತ್ತಾರು ಐಶಾರಾಮಿ ರೆಸಾರ್ಟ್ ಹಾಗೂ ಹೋಂಸ್ಟೇಗಳಿದ್ದು ಇವುಗಳಲ್ಲಿ ಕೆಲವು ಮಾತ್ರ ಮುದುಮಲೈ ಸಫಾರಿಗೆ ವಾಹನಗಳ ಸೌಲಭ್ಯ ಒದಗಿಸಿವೆ. ಮಧುಮಲೈ ಭಾಗದಲ್ಲೂ ರೆಸಾರ್ಟ್‌ಗಳು ಇರುವುದರಿಂದ ಅಲ್ಲಿಯೇ ಪ್ರವಾಸಿಗರು ಹೆಚ್ಚಾಗಿ ಉಳಿದುಕೊಳ್ಳಲು ಬಯಸುತ್ತಿದ್ದಾರೆ ಎಂದು ಹೋಟೆಲ್‌ ಮಾಲೀಕರೊಬ್ಬರು ತಿಳಿಸಿದರು.

ಸಫಾರಿ ಬಂದ್‌ನಿಂದ ಹೊಡೆತ: ಸಫಾರಿ ಇದ್ದಾಗ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂದರ್ಭ ಎಲ್ಲ ರೆಸಾರ್ಟ್ ಮತ್ತು ಹೋಂ ಸ್ಟೇಗಳು ತುಂಬಿರುತ್ತಿದ್ದವು. ಈ ಬಾರಿ ಬುಕ್ಕಿಂಗ್ ಕಡಿಮೆಯಾಗಿದೆ ಎಂದು ಪ್ರವಾಸಿಗರನ್ನು ಕರೆದೊಯ್ಯವ ವಾಹನ ಚಾಲಕ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.