ADVERTISEMENT

ಪುಂಡಾನೆ ಸೆರೆ: ನಿಟ್ಟುಸಿರು ಬಿಟ್ಟ ಜನ

ಸೆರೆ ಸಂದರ್ಭದಲ್ಲೂ ಆನೆಯ ರಂಪಾಟ, ದುಬಾರೆ ಶಿಬಿರಕ್ಕೆ ರವಾನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 11:06 IST
Last Updated 25 ಅಕ್ಟೋಬರ್ 2019, 11:06 IST
ಸಾಕಾನೆಗಳ ಮೂಲಕ  ಪುಂಡಾನೆಯನ್ನು ರಸ್ತೆವರೆಗೆ ಎಳೆದು ತರಲಾಯಿತು
ಸಾಕಾನೆಗಳ ಮೂಲಕ  ಪುಂಡಾನೆಯನ್ನು ರಸ್ತೆವರೆಗೆ ಎಳೆದು ತರಲಾಯಿತು   

ಗುಂಡ್ಲುಪೇಟೆ: ಮೂರು ದಿನಗಳಿಂದ ತಾಲ್ಲೂಕಿನ ಗ್ರಾಮೀಣ ಭಾಗದ ಜನರ ನಿದ್ದೆಗೆಡಿಸಿದ್ದ ತಮಿಳುನಾಡಿನಿಂದ ಬಂದಿದ್ದ ಪುಂಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಗುರುವಾರ ಯಶಸ್ವಿಯಾಗಿದೆ.

ಇಬ್ಬರು ವ್ಯಕ್ತಿಗಳು ಮತ್ತು ಜಾನುವಾರು ಮೇಲೆ ದಾಳಿ ಮಾಡಿ ರಂಪಾಟ ನಡೆಸಿದ್ದ ಸಲಗದ ಸೆರೆಗಾಗಿ ಬುಧವಾರ ಸಾಕಾನೆಗಳ ಮೂಲಕ ಕಾರ್ಯಾಚರಣೆ ಆರಂಭಿಸಲಾಗಿತ್ತು. ತಾಲ್ಲೂಕಿನ ಪಡಗೂರಿನ ಜಮೀನೊಂದರಲ್ಲಿ ಆನೆ ಸೆರೆ ಸಿಕ್ಕಿದೆ.

ಗುರುವಾರ ಇಂಗಲವಾಡಿಯಲ್ಲಿ ಕಂಡು ಬಂದ ಆನೆಗೆ ಬೆಳಿಗ್ಗೆ 10.35ರ ಹೊತ್ತಿಗೆ ಅರಣ್ಯ ರಕ್ಷಕ ಅಕ್ರಮ ಪಾಷ ಅವರು ಅರಿವಳಿಕೆ ಚುಚ್ಚುಮದ್ದು ಹೊಡೆದಿದ್ದರು. ನಂತರ ಪ್ರಜ್ಞೆ ತಪ್ಪುವ ಸ್ಥಿತಿಯಲ್ಲಿದ್ದರೂ ಆನೆ ರಂಪಾಟ ಮುಂದುವರಿಸಿ 3 ಬೈಕ್‌ಗಳ ಮೇಲೆ ದಾಳಿ ನಡೆಸಿತು. ಬನ್ನಿತಾಳಪುರ ಮಾರ್ಗವಾಗಿ ಹಲವು ಜಮೀನುಗಳ ಮೂಲಕ 2 ರಿಂದ 3 ಕಿ.ಮೀ ಸಂಚರಿಸಿ ಪಡಗೂರು ಸೇರಿತು. ಆನೆ ಓಡಾಡಿದ ಜಾಗದಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದೆ.

ADVERTISEMENT

ಆನೆಯನ್ನೇ ಹಿಂಬಾಲಿಸಿದ ಸಿಬ್ಬಂದಿ,ಅಭಿಮನ್ಯು, ಗೋಪಾಲಸ್ವಾಮಿ, ಗಣೇಶ್, ಕೃಷ್ಣ ಎಂಬ ನಾಲ್ಕು ದಸರಾ ಆನೆಗಳನ್ನು ಕಾರ್ಯಾಚರಣೆಗೆ ಬಳಕೆ ಮಾಡಿಕೊಂಡು ಪಡಗೂರಿನ ಸ್ವಾಮಿ ಎಂಬುವವರ ಜಮೀನಿನಲ್ಲಿ ಸೆರೆಗೆ ಮುಂದಾದರು. ಆಗಲೂ ಕಾಡಾನೆ ರಂಪಾಟ ನಿಲ್ಲಿಸಲಿಲ್ಲ. ನಂತರ ನಾಲ್ಕು ಸಾಕಾನೆಗಳು ಪುಂಡಾನೆಯನ್ನು ಸುತ್ತುವರಿದು, ಚಲಿಸದಂತೆ ತಡೆದವು.

ಈ ವೇಳೆ ಮಾವುತರು ಮತ್ತು ಅರಣ್ಯ ಸಿಬ್ಬಂದಿ ಕಾಡಾನೆ ಕಾಲುಗಳನ್ನು ಹಗ್ಗದಿಂದ ಕಟ್ಟಿ ಸಾಕಾನೆಗಳ ಸಹಾಯದಿಂದ ರಸ್ತೆಗೆ ತರಲು ಪ್ರಯತ್ನಿಸಿದರು. ಆದರೆ, ಕೆರಳಿದ್ದ ಪುಂಡಾನೆ ತೀವ್ರ ಪ್ರತಿರೋಧ ತೋರಿತು. ಅಂತಿಮವಾಗಿ ಮಧ್ಯಾಹ್ನ 1 ಗಂಟೆಗೆ ಅದನ್ನು ಕ್ರೇನ್ ಮೂಲಕ ಲಾರಿಗೆ ಹತ್ತಿಸಲಾಯಿತು.

ಫಸಲು ನಾಶ:ಇಂಗಲವಾಡಿ, ಬನ್ನಿತಾಳಪುರ ಮಾರ್ಗವಾಗಿ ಹಲವು ಜಮೀನುಗಳಲ್ಲಿ ಆನೆ ಸಂಚರಿಸಿರುವುದರಿಂದ ಬಾಳೆ, ಜೋಳ ಸೇರಿದಂತೆ ಇತರೆ ಹಲವು ಬೆಳೆಗಳು ನೆಲಕಚ್ಚಿವೆ.ಪಡಗೂರಿನ ಸ್ವಾಮಿ ಎಂಬುವವರ ಜಮೀನಿನಲ್ಲಿ ಆನೆಯನ್ನು ಸೆರೆ ಹಿಡಿಯಲಾಗಿದ್ದು, ಅವರು ಬೆಳೆದಿದ್ದ ಹಸಿಕಡಲೆ ಬೆಳೆ ಸಾಕಾನೆಗಳ ಸಂಚಾರ ಮತ್ತು ಸಾರ್ವಜನಿಕರ ಓಡಾಟದಿಂದ ಸಂಪೂರ್ಣ ಹಾಳಾಗಿದೆ.

‘3 ರಿಂದ 4 ಎಕರೆ ಹಸಿಕಡಲೆ ಬೆಳೆ ಸಂಪೂರ್ಣ ನಾಶವಾಗಿದ್ದು, ಇದಕ್ಕೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು’ ಎಂದು ಸ್ವಾಮಿ ಮನವಿ ಮಾಡಿದ್ದಾರೆ.ಎಸಿಎಫ್‌ಗಳಾದ ಪರಮೇಶ್, ರವಿಕುಮಾರ್, ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್,ಮಂಜುನಾಥ್, ಶೈಲೇಂದ್ರ ಕುಮಾರ್, ಮಹದೇವಯ್ಯ, ರಾಘವೇಂದ್ರ ಸೇರಿದಂತೆ 60ಕ್ಕೂ ಹೆಚ್ಚು ಮಂದಿ ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ದುಬಾರೆಗೆ ತೆರಳಿದ ಪುಂಡಾನೆ

ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರಕ್ಕೆ ಪುಂಡಾನೆಯನ್ನು ಕಳುಹಿಸಲಾಗಿದ್ದು, ಅಲ್ಲಿ ಅದನ್ನು ಪಳಗಿಸಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.ಆನೆಗೆ 15ರಿಂದ 20 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ.ಈಗಾಗಲೇ ಎಂಟು ಮಂದಿಯನ್ನು ಕೊಂಡಿರುವ ಈ ಸಲಗವು ಮುಂದೆ ಸ್ವೌಮ್ಯ ವರ್ತನೆ ತೋರಿದರೂ ಅಚ್ಚರಿ ಇಲ್ಲ ಎಂದು ಹೇಳುತ್ತಾರೆ ಸಿಬ್ಬಂದಿ.ಅದರ ರೋಷಾವೇಷಕ್ಕೆ ತುತ್ತಾಗಿರುವ ಶಿವಪುರ ಗ್ರಾಮದ ಸಿದ್ದಯ್ಯ ಹಾಗೂ ಹಂಗಳ ಗ್ರಾಮದ ಸ್ವಾಮಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆನೆ ವೀಕ್ಷಣೆಗೆ ಭಾರಿ ಜನ

ಸೆರೆಯಾಗಿರುವ ಆನೆಯನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳ ಜನರು ಜಮೀನಿನಲ್ಲಿ ಜಮಾಯಿಸಿದರು. ಬಂದಿದ್ದ ಮಹಿಳೆಯರ ಸಂಖ್ಯೆಯೂ ಕಡಿಮೆ ಇರಲಿಲ್ಲ.ಪೋಟೊ ಹಾಗೂ ವಿಡಿಯೊ ತೆಗೆಯಲು ಜನರು ಮುಗಿಬಿದ್ದರು.

ಜನರ ಗಲಾಟೆಗೆ ಆನೆ ಬೆದರಿ ದಾಳಿ ಮಾಡುವ ಸಂಭವ ಇರುವುದನ್ನು ಅರಿತ ಅರಣ್ಯ ಸಿಬ್ಬಂದಿ ಜನರನ್ನು ದೂರ ಸರಿಸಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ನಂತರ ಸಾಕಾನೆಗಳ ಸಹಾಯದಿಂದ ಜನರನ್ನು ದೂರಕ್ಕೆ ಕಳುಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.