
ಗುಂಡ್ಲುಪೇಟೆ ತಾಲ್ಲೂಕಿನ ತಗ್ಗಲೂರು ಗ್ರಾಮದ ಭೋಗಯ್ಯನ ಹುಂಡಿಗೆ ನಡೆದುಕೊಂಡು ಬರುತ್ತಿರುವ ವಿದ್ಯಾರ್ಥಿಗಳು
ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಮಾನವ–ಪ್ರಾಣಿ ಸಂಘರ್ಷ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ವನ್ಯಜೀವಿಗಳ ದಾಳಿ ಭೀತಿ ಆವರಿಸಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಕಾಡು ಪ್ರಾಣಿಗಳು ಮೈಮೇಲೆ ಎರಗುವ ಆತಂಕದಲ್ಲಿದ್ದಾರೆ.
ಇದರ ನಡುವೆ ತಾಲ್ಲೂಕಿನ ತಗ್ಗಲೂರು ಗ್ರಾಮದ ಸುಮಾರು 30ಕ್ಕೂ ಹೆಚ್ಚು ಮಕ್ಕಳು ಪ್ರತಿದಿನ ವನ್ಯಜೀವಿಗಳ ದಾಳಿ ಭಯದಲ್ಲೇ ಎರಡು ಕಿ.ಮೀ ದೂರದಲ್ಲಿರುವ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಾರೆ. ಇತ್ತ ಪೋಷಕರು ಮಕ್ಕಳು ಮನೆಗೆ ಬರುವವರೆಗೂ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.
ತಗ್ಗಲೂರು ಗ್ರಾಮದಿಂದ ಬೋಗಯ್ಯನಹುಂಡಿ ಗ್ರಾಮದಲ್ಲಿರುವ ಪ್ರೌಢಶಾಲೆಗೆ 30ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ನಿತ್ಯ ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗಿ ಬರುತ್ತಿದ್ದಾರೆ. ಮಕ್ಕಳ ಶಾಲಾ ಆರಂಭ ಹಾಗೂ ಶಾಲೆ ಬಿಡುವ ಸಮಯಕ್ಕೆ ಉಭಯ ಗ್ರಾಮಗಳ ನಡುವೆ ಬಸ್ ಸೌಲಭ್ಯ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ.
ಬೆಳಿಗ್ಗೆ ಹಾಗೂ ಸಂಜೆಯ ಹೊತ್ತು ಮಕ್ಕಳು ಭಯದಲ್ಲೇ ಎರಡರಿಂದ ಮೂರು ಕಿ.ಮೀ ದೂರದ ಶಾಲೆಗೆ ನಡೆದುಕೊಂಡು ಹೋಗಬೇಕಾಗಿದೆ. ಕೋಟೆಕೆರೆ, ಬೆಟ್ಟದ ಮಾದಹಳ್ಳಿ, ಕಾಳನಹುಂಡಿ ಗ್ರಾಮದಿಂದ ಬರುವ ಮಕ್ಕಳ ಪರಿಸ್ಥಿತಿಯೂ ಭಿನ್ನವಾಗಿಲ್ಲ.
ಈಚೆಗೆ ತಾಲ್ಲೂಕಿನಲ್ಲಿ ಹುಲಿ, ಚಿರತೆಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿವೆ. ಬೋಗಯ್ಯನಹುಂಡಿ ಭಾಗದಲ್ಲೂ ಚಿರತೆ ಕಾಣಿಸಿಕೊಂಡಿದ್ದು ವಿದ್ಯಾರ್ಥಿಗಳು ಜೀವ ಭಯದಲ್ಲಿ ಶಾಲೆಗೆ ಹೋಗಬೇಕಾಗಿದೆ. ಪ್ರಾಣಿ ದಾಳಿ ಮಾಡುವ ಆತಂಕವಿದ್ದರೂ ವಿದ್ಯಾಭ್ಯಾಸಕ್ಕೆ ಅಡಚಣೆಯಾಗುವ ಕಾರಣಕ್ಕೆ ವಿದ್ಯಾರ್ಥಿಗಳು ಅನಿವಾರ್ಯವಾಗಿ ನಡೆದುಕೊಂಡು ಶಾಲೆಗೆ ಬರುತ್ತಿದ್ದಾರೆ.
ತಗ್ಗಲೂರು ಗ್ರಾಮದಿಂದ ಬೆಳಿಗ್ಗೆ 7 ಗಂಟೆಗೆ ಒಂದು ಬಸ್ ಬಂದು ಹೋಗುತ್ತದೆ. ಬೆಳಿಗ್ಗೆ 9ಕ್ಕೆ ಮತ್ತೊಂದು ಬಸ್ ಓಡಿಸಬೇಕು. ಸಂಜೆ ಶಾಲೆ ಬಿಡುವ ಸಮಯಕ್ಕೆ ಬಸ್ ಓಡಿಸಿದರೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.
‘ವಿದ್ಯಾರ್ಥಿಗಳು ರಸ್ತೆಯಲ್ಲಿ ನಡೆದುಹೋಗುವಾ ಚಿರತೆ, ಹುಲಿ ಸಹಿತ ಕಾಡುಪ್ರಾಣಿಗಳು ದಾಳಿ ನಡೆಸಿದರೆ ಮಕ್ಕಳ ಜೀವಕ್ಕೆ ಯಾರು ಹೊಣೆ, ದುರ್ಘಟನೆ ನಡೆಯುವ ಮುನ್ನ ಬಸ್‌ಗಳ ಸೌಲಭ್ಯ ಕಲ್ಪಿಸಬೇಕು’ ಎಂದು ಪೋಷಕರು ಒತ್ತಾಯಿಸುತ್ತಾರೆ.
‘ಚಿರತೆ ಕಾಟ ಹೆಚ್ಚಾಗಿರುವುದರಿಂದ ಗ್ರಾಮಸ್ಥರು ಭೀತಿಯಿಂದ ಓಡಾಡುವಂತಾಗಿದೆ. ನಿತ್ಯ ಎರಡು ಕಿ.ಮೀ ನಡೆಯುವುದು ಮಕ್ಕಳಿಗೆ ತ್ರಾಸದಾಯಕವೂ ಹೌದು. ಪ್ರೌಢಶಾಲಾ ವಿದ್ಯಾರ್ಥಿನಿಯರು ವೈಯಕ್ತಿಕ ಸಮಸ್ಯೆಗಳಿಂದ ಬಳಲಿದಾಗ ನಡೆಯುವುದು ತೀವ್ರ ಕಷ್ಟವಾಗುತ್ತದೆ. ನಡೆದು ಸುಸ್ತಾಗುತ್ತಿರುವ ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಪೋಷಕರು ದೂರಿದರು.
ಶಾಲಾ ಸಮಯಕ್ಕೆ ಅನುಗುಣವಾಗಿ ಬಸ್ ವ್ಯವಸ್ಥೆ ಮಾಡಿದರೆ ಮಕ್ಕಳ ಕಲಿಕೆಗೆ ಅನುಕೂಲವಾಗುತ್ತದೆ, ಗ್ರಾಮೀಣ ಭಾಗದ ಮಕ್ಕಳು ಶಾಲೆ ಬಿಡುವುದು ತಪ್ಪಲಿದೆ ಎಂದು ಪೋಷಕ ಶಿವಸ್ವಾಮಿ ಹೇಳಿದರು.
‘ಕಾಡುಪ್ರಾಣಿ ದಾಳಿ ಭೀತಿ’
ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಸಹಿತ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಆಗಾಗ ಜಾನುವಾರುಗಳ ಮೇಲೆ ದಾಳಿ ನಡೆಯುತ್ತಲೇ ಇರುತ್ತದೆ. ಇದೇ ಮಾರ್ಗವಾಗಿ ಪ್ರತಿನಿತ್ಯ ವಿದ್ಯಾರ್ಥಿಗಳು ದೂರದ ಭೋಗಯ್ಯನಹುಂಡಿ ಶಾಲೆಗೆ ಹೋಗಬೇಕಾಗಿರುವುದು ಪ್ರಾಣಿ ದಾಳಿ ಆತಂಕ ಹೆಚ್ಚಾಗಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸ್ಥಳೀಯ ಶಾಸಕರು ಸಂಬಂಧಪಟ್ಟ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಬಸ್ ವ್ಯವಸ್ಥೆ ಮಾಡಿಕೊಡಬೇಕು ಎಂದು ಗ್ರಾಮಸ್ಥ ವೆಂಕಟರಾಮಯ್ಯ ಮನವಿ ಮಾಡಿದ್ದಾರೆ.
ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ನಿತ್ಯ ಶಾಲೆಗೆ ನಡೆದುಕೊಂಡು ಬರುತ್ತಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಸಾರಿಗೆ ಇಲಾಖೆಗೆ ಪತ್ರ ಬರೆದು ಶಾಲಾ ಸಮಯದಲ್ಲಿ ಬಸ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.ಸ್ವಾಮಿ ಬಿಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.