ADVERTISEMENT

ಭಗವದ್ಗೀತೆ ಅನುಭವ ಶಾಸ್ತ್ರ: ಸ್ವರ್ಣವಲ್ಲೀ ಶ್ರೀ

ಜಿಲ್ಲೆಯಲ್ಲಿ ಡಿಸೆಂಬರ್‌ 3ರವರೆಗೂ ನಡೆಯಲಿರುವ ಭಗವದ್ಗೀತಾ ಅಭಿಯಾನ, ವಿವಿಧ ಸ್ಪರ್ಧೆಗಳ ಆಯೋಜನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2022, 5:48 IST
Last Updated 20 ಅಕ್ಟೋಬರ್ 2022, 5:48 IST
ಭಗವದ್ಗೀತೆ ಅಭಿಯಾನಕ್ಕೆ ಚಾಲನೆ ನೀಡಿದ ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸ್ವರಸತೀ ಸ್ವಾಮೀಜಿ ಮಾತನಾಡಿದರು. ಮರಿಯಾಲ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ, ಚಾಮರಾಜನಗರ ವಿರಕ್ತ ಮಠದ ಚನ್ನಬಸವಸ್ವಾಮೀಜಿ, ಬ್ರಹ್ಮಾಕುಮಾರಿ ವಿವಿಯ ಸಂಚಾಲಕಿ ದಾನೇಶ್ವರಿ, ದುಗ್ಗಟ್ಟಿ ಮಲ್ಲಿಕಾರ್ಜುನಸ್ವಾಮಿ, ಉಡಿಗಾಲ ಕುಮಾರಸ್ವಾಮಿ ಇದ್ದರು
ಭಗವದ್ಗೀತೆ ಅಭಿಯಾನಕ್ಕೆ ಚಾಲನೆ ನೀಡಿದ ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸ್ವರಸತೀ ಸ್ವಾಮೀಜಿ ಮಾತನಾಡಿದರು. ಮರಿಯಾಲ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ, ಚಾಮರಾಜನಗರ ವಿರಕ್ತ ಮಠದ ಚನ್ನಬಸವಸ್ವಾಮೀಜಿ, ಬ್ರಹ್ಮಾಕುಮಾರಿ ವಿವಿಯ ಸಂಚಾಲಕಿ ದಾನೇಶ್ವರಿ, ದುಗ್ಗಟ್ಟಿ ಮಲ್ಲಿಕಾರ್ಜುನಸ್ವಾಮಿ, ಉಡಿಗಾಲ ಕುಮಾರಸ್ವಾಮಿ ಇದ್ದರು   

ಚಾಮರಾಜನಗರ: ‘ಭಗವದ್ಗೀತೆ ಒಂದು ಅನುಭವ ಶಾಸ್ತ್ರ. ಮಹಾಭಾರತ ಕಟ್ಟು ಕಥೆಯಲ್ಲ ನಿಜವಾಗಿ ನಡೆದಿರುವುದು. ಕೃಷ್ಣ ಅರ್ಜುನನಿಗೆ ಬೋಧಿಸಿದ ಭಗವದ್ಗೀತೆಯು ಅನುಭವದ ಆಧಾರದಲ್ಲೇ ನಿಂತಿದೆ. ಭಗವದ್ಗೀತೆ ಪಠಣದಿಂದ ವ್ಯಕ್ತಿತ್ವ ವಿಕಸನ, ನೈತಿಕತೆ ಪುನರುತ್ಥಾನ, ಸಾಮಾಜಿಕ ಸಾಮರಸ್ಯ ಹಾಗೂ ರಾಷ್ಟ್ರೀಯ ಭಾವೈಕ್ಯತೆ ಸಾಧ್ಯ’ ಎಂದು ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಬುಧವಾರ ಅಭಿಪ್ರಾಯಪಟ್ಟರು.

ಮಠದ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ಹಾಗೂ ಭಗವದ್ಗೀತಾ ಅಭಿಯಾನದ ಜಿಲ್ಲಾ ಸಮಿತಿಯು ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಈ ಸಾಲಿನ ಭಗವದ್ಗೀತೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘2007ರಿಂದ ಭಗದ್ಗೀತೆ ಅಭಿಯಾನ ಆರಂಭಿಸಲಾಗಿದೆ. ಈ ಹಿಂದೆಯೂ ಜಿಲ್ಲೆಯಲ್ಲಿ ಅಭಿಯಾನ ಯಶಸ್ವಿಯಾಗಿ ನಡೆದಿತ್ತು. ಈ ವರ್ಷ ಚಾಮರಾಜನಗರದಲ್ಲೇ ಮೊದಲ ಕಾರ್ಯಕ್ರಮ ನಡೆಯುತ್ತಿದೆ. ವ್ಯಕ್ತಿತ್ವ ವಿಕಸನ, ನೈತಿಕತೆ ಪುನರುತ್ಥಾನ, ಸಾಮಾಜಿಕ ಸಾಮರಸ್ಯ ಹಾಗೂ ರಾಷ್ಟ್ರೀಯ ಭಾವೈಕ್ಯತೆ ಈ ನಾಲ್ಕು ಉದ್ದೇಶಗಳನ್ನು ಇಟ್ಟುಕೊಂಡು ಈ ಅಭಿಯಾನ ಆರಂಭಿಸಲಾಗಿದೆ’ ಎಂದರು.

ADVERTISEMENT

‘ನಮ್ಮಲ್ಲಿ ಈಗ ಮಾನಸಿಕ ಕಾಯಿಲೆಗಳು ಜಾಸ್ತಿಯಾಗುತ್ತಿವೆ. ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾಗಿದೆ. ಮನಸ್ಸನ್ನು ಕಮಲದಂತೆ ಅರಳಿಸಲು ಭಗವದ್ಗೀತೆ ಎಂಬ ಬೆಳಕಿನ ಅಗತ್ಯವಿದೆ. ಸಮಾಜದಲ್ಲಿ ನೈತಿಕತೆಯ ಪತನವನ್ನು ಕಾಣುತ್ತಿದ್ದೇವೆ. ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರು ಅಪರಾಧ ಎಸಗಿದ ನಂತರ ಅವರಿಗೆ ಶಿಕ್ಷೆ ಕೊಡುವುದರ ಬದಲು, ಅಪರಾಧ ಮಾಡುವುದಕ್ಕೂ ಮೊದಲೇ ಅವರ ಮನಸ್ಸನ್ನು ಬದಲಾಯಿಸಬೇಕು. ಭಗವದ್ಗೀತೆಯು ಈ ಕೆಲಸ ಮಾಡುತ್ತದೆ’ ಎಂದು ಸ್ವಾಮೀಜಿ ಹೇಳಿದರು.

‘ನಮ್ಮ ಸಮಾಜವು ವಿವಿಧತೆಯಲ್ಲಿ ಏಕತೆಯನ್ನು ಕಂಡು ಕೊಳ್ಳಬೇಕಿದೆ. ಏಕತೆ ಕಂಡು ಕೊಳ್ಳದಿದ್ದರೆ ದೇಶದ ಸಮಗ್ರತೆಗೆ ಧಕ್ಕೆಯಾಗಬಹುದು. ಭಗವದ್ಗೀತೆಯಲ್ಲಿ ಎಲ್ಲ ಪಂಥಗಳ ಆಚಾರ ವಿಚಾರಗಳು ಬರುತ್ತವೆ. ಗೀತೆಯ ಅರ್ಥವನ್ನು ತಿಳಿದುಕೊಳ್ಳುವುದರಿಂದ ಸಾಮಾಜಿಕ ಸಾಮರಸ್ಯವನ್ನೂ ಕಾಪಾಡಬಹುದು’ ಎಂದರು.

‘ಸುಶಿಕ್ಷಿತ ಜನಾಂಗ ಈಗ ಸಮಾಜ ಘಾತುಕ ಚಟುವಟಿಕೆಗಳಲ್ಲಿ ತೊಡಗಿದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಕಲಿಸಬೇಕಾಗಿದೆ. ಇದರಿಂದ ಅವರ ಮನಃಪರಿವರ್ತನೆ ಸಾಧ್ಯ’ ಎಂದು ಶ್ರೀಗಳು ಹೇಳಿದರು.

ಮರಿಯಾಲ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ದೇಶದಲ್ಲಿರುವ ಗ್ರಂಥಗಳಲ್ಲಿ ಭಗವದ್ಗೀತೆ ಅತ್ಯಂತ ಶ್ರೇಷ್ಠ ಗ್ರಂಥ. ಇದರ ಪಠಣದಿಂದ ಆತ್ಮ ಸಾಕ್ಷಾತ್ಕಾರ ಸಾಧ್ಯ. ಮಕ್ಕಳಲ್ಲಿ, ಜನರಲ್ಲಿ ಸಂಸ್ಕಾರ, ಜೀವನ ಮೌಲ್ಯ ಬೆಳೆಸುವ ನಿಟ್ಟಿನಲ್ಲಿ ಸ್ವರ್ಣವಲ್ಲೀ ಶ್ರೀಗಳು ಭಗದ್ಗೀತೆ ಅಭಿಯಾನ ಆರಂಭಿಸಿರುವುದು ಶ್ಲಾಘನೀಯ’ ಎಂದರು.

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿವಿಯ ಸಂಚಾಲಕಿ ದಾನೇಶ್ವರಿ ಮಾತನಾಡಿ, ‘ಆತ್ಮ ಮತ್ತು ಪರಮಾತ್ಮನನ್ನು ಅನುಸಂಧಾನ ಮಾಡುವುದೇ ಭಗವದ್ಗೀತೆ. ಭಗವದ್ಗೀತೆ ಪಠಣ ಮಾಡುವುದರಿಂದ ಆತ್ಮ ಸಾಕ್ಷಾತ್ಕಾರವನ್ನು ನಿರ್ವಹಿಸಬಹುದು’ ಎಂದರು.

ಚಾಮರಾಜನಗರ ವಿರಕ್ತ ಮಠದ ಚನ್ನಬಸವಸ್ವಾಮೀಜಿ ಮಾತನಾಡಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಅಭಿಯಾನದ ಜಿಲ್ಲಾ ಸಮಿತಿ ಗೌರವ ಅಧ್ಯಕ್ಷ ಜಿ.ಎಂ.ಹೆಗಡೆ, ‘2011ರಲ್ಲಿ ಈ ಅಭಿಯಾನ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದಿತ್ತು. 4000 ಮಂದಿ ಏಕಕಂಠದಲ್ಲಿ ಭಗವದ್ಗೀತೆ ಪಠಿಸಿದ್ದರು. ಈ ಬಾರಿಯೂ ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಭಗವದ್ಗೀತಾ ಅಭಿಯಾನ ಸಮಿತಿ ಜಿಲ್ಲಾ ಅಧ್ಯಕ್ಷ ದುಗ್ಗಟ್ಟಿ ಮಲ್ಲಿಕಾರ್ಜುನ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಉಡಿಗಾಲ ಕುಮಾರಸ್ವಾಮಿ, ಸಮಿತಿ ಕಾರ್ಯಾಧ್ಯಕ್ಷಎಸ್. ಬಾಲಸುಬ್ರಮಣ್ಯಂ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ಅಭಿಯಾನದ ಜಿಲ್ಲಾ ಪ್ರಮುಖರಾದ ಸುರೇಶ್ ಚಂದಕವಾಡಿ, ಕೇಶವಮೂರ್ತಿ, ಗೋಪಾಲಕೃಷ್ಣ ಭಟ್, ಎಚ್.ವಿ.ನಾಗರಾಜ್, ಶೇಖರ್ ಶಾಸ್ತ್ರಿ, ಮುರಳಿ ಇತರರು ಇದ್ದರು.

ಗೀತೆ ಜಯಂತಿವರೆಗೆ ಅಭಿಯಾನ, ವಿವಿಧ ಸ್ಪರ್ಧೆಗಳು

‘ ಈ ಬಾರಿ ಅಭಿಯಾನದಲ್ಲಿ ಗೀತೆಯ ಐದನೇ ಅಧ್ಯಾಯವನ್ನು ಪಠಿಸಲಾಗುವುದು.ಡಿಸೆಂಬರ್‌ 3ರಂದು ಗೀತೆ ಜಯಂತಿ ಇದೆ. ಅಲ್ಲಿಯವರೆಗೂ ಈ ಅಭಿಯಾನ ರಾಜ್ಯದಾದ್ಯಂತ ನಡೆಯಲಿದೆ. ನವೆಂಬರ್‌ 4ರ ನಂತರ ಒಂದು ತಿಂಗಳ ಅವಧಿಯಲ್ಲಿ ಭಗವದ್ಗೀತೆ ಕುರಿತಾಗಿ ಜಿಲ್ಲಾ ಮಟ್ಟ, ರಾಜ್ಯಮಟ್ಟದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು’ ಎಂದು ಸ್ವರ್ಣವಲ್ಲೀ ಶ್ರೀಗಳು ಹೇಳಿದರು.

ಹಿರಿಯ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಭಗವದ್ಗೀತೆ ಪಠಣ, ಕಂಠಪಾಠ ಸ್ಪರ್ಧೆಗಳು ನಡೆಯಲಿವೆ. ರಾಜ್ಯ ಮಟ್ಟದಲ್ಲಿ ರಸಪ್ರಶ್ನೆ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಅಭಿಯಾನದ ಉದ್ಘಾಟನೆ ಕಾರ್ಯಕ್ರಮ ನಡೆದಂತೆ, ಸಮಾರೋಪ ಕಾರ್ಯಕ್ರಮವೂ ನಡೆಯಲಿದೆ. ಎಲ್ಲ ತಾಲ್ಲೂಕುಗಳಲ್ಲಿ ಈ ಅಭಿಯಾನ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು’ ಎಂದು ಸಮಿತಿ ಸದಸ್ಯರಿಗೆ ಹೇಳಿದರು.

--------

ಪಠ್ಯದಲ್ಲಿ ಭಗವದ್ಗೀತೆ ಸೇರಿಸಿ ಎಂಬುದು ನಮ್ಮ ಬೇಡಿಕೆಯಾಗಿತ್ತು. ಸರ್ಕಾರ ಈಗ ಅದಕ್ಕೆ ಸ್ಪಂದಿಸಿದೆ. ಆದಷ್ಟು ಶೀಘ್ರದಲ್ಲಿ ಅದನ್ನು ಜಾರಿಗೆ ತರಬೇಕು‌
ಗಂಗಾಧರೇಂದ್ರ ಸರಸ್ವತೀಸ್ವಾಮೀಜಿ, ಸ್ವರ್ಣವಲ್ಲೀ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.