ADVERTISEMENT

ಕ್ರೀಡೆಯಿಂದ ಸ್ನೇಹ ಸೌಹಾರ್ದ ಹೆಚ್ಚಾಗಬೇಕು: ಶಾಸಕ ದರ್ಶನ್‌ ಧ್ರುವನಾರಾಯಣ್

ಮೂರು ದಿನಗಳ ಭಗೀರಥ ಪ್ರೀಮಿಯರ್ ಲೀಗ್ - ಸೀಸನ್ 2 ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 6:09 IST
Last Updated 21 ಜನವರಿ 2024, 6:09 IST
ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಭಗೀರಥ ಪ್ರೀಮಿಯರ್ ಲೀಗ್ - ಸೀಸನ್ 2 ಪಂದ್ಯಾವಳಿಯನ್ನು ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ ಅವರು ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು. ಕಾಂಗ್ರೆಸ್‌ ಮುಖಂಡರು ಪಾಲ್ಗೊಂಡಿದ್ದರು
ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಭಗೀರಥ ಪ್ರೀಮಿಯರ್ ಲೀಗ್ - ಸೀಸನ್ 2 ಪಂದ್ಯಾವಳಿಯನ್ನು ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ ಅವರು ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು. ಕಾಂಗ್ರೆಸ್‌ ಮುಖಂಡರು ಪಾಲ್ಗೊಂಡಿದ್ದರು   

ಚಾಮರಾಜನಗರ: ಕ್ರೀಡೆಗಳಿಂದ ಯುವಸಮೂಹ ಒಗ್ಗೂಡುವುದರೊಂದಿಗೆ ಸ್ನೇಹ, ಸೌಹಾರ್ದತೆ ಹೆಚ್ಚಾಗುವಂತಾಗಬೇಕು ಎಂದು ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಅಭಿಪ್ರಾಯಪಟ್ಟರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಭಗೀರಥ ಪ್ರೀಮಿಯರ್ ಲೀಗ್ - ಸೀಸನ್ 2ಗೆ ಚಾಲನೆ ನೀಡಿ ಅವರು ಮಾತನಾಡಿದರು. 

‘ಯುವ ಜನತೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯುವಕರ ಪ್ರತಿಭೆಯನ್ನು ಹೊರತರಲು ವೇದಿಕೆಗಳು ಸೃಷ್ಟಿಯಾಗಬೇಕು. ಕ್ರೀಡೆಗಳಿಂದ ಎಲ್ಲರ ಮನಸ್ಸು ಒಂದಾಗಬೇಕು’ ಎಂದರು.

ADVERTISEMENT

‘ನನ್ನ ತಂದೆಯವರಾದ ದಿ. ಆರ್.ಧ್ರುವನಾರಾಯಣ ಅವರು ಲೋಕಸಭಾ ಸದಸ್ಯರಾಗಿದ್ದಾಗ ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ನಾನೂ ಅವರ ಹಾದಿಯಲ್ಲಿ ನಡೆಯುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ’ ಎಂದರು.

ಮೂರು ದಿನಗಳ ಕಾಲ ನಡೆಯುವ ಕ್ರಿಕೆಟ್ ಪಂದ್ಯಾವಳಿಯನ್ನು ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ಆಯೋಜಿಸಿರುವುದಕ್ಕೆ ಶ್ಲಾಘಿಸಿದರು. 

ಪರಿಸರ ಪ್ರೇಮಿ ವೆಂಕಟೇಶ್ ಮಾತನಾಡಿ, ‘ಮೊದಲಿನಿಂದಲೂ ನಾನು ಪರಿಸರ ಪ್ರೇಮಿ. ಅಲ್ಲಲ್ಲಿ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದೆ. ಲೋಕಸಭಾ ಸದಸ್ಯರಾಗಿದ್ದ ದಿ.ಆರ್.ಧ್ರುವನಾರಾಯಣ ಅವರು ಈ ಕ್ರೀಡಾಂಗಣದ ಸುತ್ತ ನೆಟ್ಟಿರುವ ಗಿಡಗಳನ್ನು ನೋಡಿ, ನನ್ನನ್ನು ಗುರುತಿಸಿ ಸಾಕಷ್ಟು ಸನ್ಮಾನ ಮಾಡಿದ್ದಾರೆ. ಜೊತೆಗೆ ಕೇಂದ್ರದ ಮಂತ್ರಿಗಳಿಂದಲೂ ಸನ್ಮಾನ ಮಾಡಿಸಿದ್ದಾರೆ. ನನಗೆ ಸಿಕ್ಕಂತಹ ಪ್ರೋತ್ಸಾಹದಿಂದ ಇದುವರೆಗೂ ಸುಮಾರು 12 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿ ಬೆಳೆಸಿದ್ದೇನೆ’ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಮುಖಂಡರಾದ ಚಿಕ್ಕಮಹದೇವು, ಮುದ್ದು ಮಾದಶೆಟ್ಟಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೃಷ್ಣ, ಬಿಜೆಪಿ ನಗರ ಮಂಡಲ ಯುವಮೋರ್ಚಾ ಅಧ್ಯಕ್ಷ ಆನಂದ್ ಭಗೀರಥ, ಭಗೀರಥ ಪ್ರೀಮಿಯರ್ ಲೀಗ್ - ಸೀಸನ್ 2 ಅಧ್ಯಕ್ಷ ರಾಜೇಂದ್ರ, ಕಾಂಗ್ರೆಸ್ ಮುಖಂಡ ದ್ವಾರಕೀಶ್ ಉಪ್ಪಾರ್, 7 ಸ್ಟಾರ್ ಬೀಡಿ ಮಾಲೀಕ ಭರತ್‌ಕುಮಾರ್, ಜಗ್ಗಣ್ಣ, ಅಜಯ್, ಮೋಹನ್, ರಾಜು, ಶ್ರೀನಿವಾಸ, ಚಂದನ್, ನವೀನ್, ರಾಜೇಂದ್ರ, ಸ್ವಾಮಿ ಇತರರು ಇದ್ದರು.

‘ಲೋಕಸಭಾ ಸದಸ್ಯರಾಗಲಿ’

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ ಮಾತನಾಡಿ ‘ಮೂರು ವರ್ಷಗಳಿಂದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುತ್ತಾ ಬಂದಿದ್ದು ಈ ಬಾರಿ ಕವರ್ ಡ್ರೈವ್ ಸಂಸ್ಥೆಯಿಂದ ಯುಟ್ಯೂಬ್‌ ಮೂಲಕ ನೇರ ಪ್ರಸಾರ ಮಾಡುತ್ತಿರುವುದು ವಿಶೇಷವಾಗಿದೆ. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ ಸೋತೆ ಎಂದು ಕುಗ್ಗಬಾರದು ಗೆದ್ದೆ ಎಂದು ಬೀಗಬಾರದು. ಕ್ರೀಡಾಪಟುಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು’ ಎಂದರು.

‘ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ಇಷ್ಟು ಸಮೃದ್ಧಿ ಕಾಣಲು ಲೋಕಸಭಾ ಸದಸ್ಯರಾಗಿದ್ದ ದಿ.ಧ್ರುವನಾರಾಯಣ ಅವರೇ ಕಾರಣ. ಅವರ ಅಂದಿನ ಕ್ರೀಡಾ ಆಸಕ್ತಿಯೇ ಇಷ್ಟು ಅಭಿವೃದ್ಧಿಪಡಿಸಲು ಸಾಧ್ಯವಾಗಿದೆ. ನಮ್ಮ ಕಾರ್ಯಕ್ರಮಕ್ಕೆ ಶಾಸಕರಾಗಿ ಆಗಮಿಸಿರುವ ದರ್ಶನ್ ಧ್ರುವನಾರಾಯಣ ಅವರು ಮುಂದಿನ ದಿನಗಳಲ್ಲಿ ತಂದೆಯಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಲೋಕಸಭಾ ಸದಸ್ಯರಾಗಲಿ ಎಂಬುದು ನಮ್ಮ ಬಯಕೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.