ADVERTISEMENT

ಅಮೃತ್: ₹1.20 ಕೋಟಿ ವೆಚ್ಚದ ಕುಡಿಯುವ ನೀರಿನ ಜಲಸಂಗ್ರಹಾಗಾರ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2023, 4:11 IST
Last Updated 27 ಅಕ್ಟೋಬರ್ 2023, 4:11 IST
ಚಾಮರಾಜನಗರದ ರಾಮಸಮುದ್ರದಲ್ಲಿ ಜಲ ಸಂಗ್ರಹಾಗಾರ ನಿರ್ಮಾಣಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ ನೆರವೇರಿಸಿದರು. ನಗರಸಭಾ ಸದಸ್ಯರಾದ ರಾಜಪ್ಪ, ನಂಜುಂಡಸ್ವಾಮಿ, ಆಯುಕ್ತ ರಾಮದಾಸ್‌ ಇದ್ದರು
ಚಾಮರಾಜನಗರದ ರಾಮಸಮುದ್ರದಲ್ಲಿ ಜಲ ಸಂಗ್ರಹಾಗಾರ ನಿರ್ಮಾಣಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ ನೆರವೇರಿಸಿದರು. ನಗರಸಭಾ ಸದಸ್ಯರಾದ ರಾಜಪ್ಪ, ನಂಜುಂಡಸ್ವಾಮಿ, ಆಯುಕ್ತ ರಾಮದಾಸ್‌ ಇದ್ದರು   

ಚಾಮರಾಜನಗರ: ಅಮೃತ್ 2.0 ಕಾರ್ಯಕ್ರಮದಡಿ ನಗರದ ವಿವಿಧ ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಸುವುದಕ್ಕಾಗಿ ₹1.20 ಕೋಟಿ ವೆಚ್ಚದಲ್ಲಿ ಜಲಸಂಗ್ರಹಾಗಾರ (ಟ್ಯಾಂಕ್) ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುರುವಾರ ಶಂಕು ಸ್ಥಾಪನೆ ನೆರವೇರಿಸಿದರು.

ರಾಮಸಮುದ್ರ ಬಡಾವಣೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ನಗರಸಭೆ ಸಹಯೋಗದಲ್ಲಿ ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಲ್ಲಿ 15 ಲಕ್ಷ ಲೀಟರ್‌ ನೀರು ಸಂಗ್ರಹ ಸಾಮರ್ಥ್ಯದ ಟ್ಯಾಂಕ್‌ ನಿರ್ಮಿಸಲಾಗುತ್ತಿದೆ. 

ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ, ‘ನಗರದ ನಾಗರಿಕರಿಗೆ ಸಿ.ಪಿ.ಎಚ್.ಇ.ಇ.ಒ ಮಾನದಂಡಗಳಿಗೆ ಅನುಗುಣವಾಗಿ ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಹಾಲಿ ಇರುವ ನೀರು ಸರಬರಾಜು ವ್ಯವಸ್ಥೆಯನ್ನು ಸುಧಾರಿಸುವ ಯೋಜನೆಯನ್ನು ಕೇಂದ್ರ ಪುರಸ್ಕೃತ ಅಮೃತ್ 2.0 ಕಾರ್ಯಕ್ರಮದಡಿ ಕೈಗೆತ್ತಿಕೊಳ್ಳಲಾಗಿದೆ’ ಎಂದರು. 

ADVERTISEMENT

‘ರಾಮಸಮುದ್ರ ಬಡಾವಣೆಯಲ್ಲಿ ಈ ಹಿಂದೆ ಇದ್ದ ಜಲಸಂಗ್ರಹಾಗಾರ ಶಿಥಿಲಗೊಂಡು ಕುಸಿಯುವ ಸ್ಥಿತಿಯಲ್ಲಿತ್ತು. ಹಳೆ ಟ್ಯಾಂಕ್‌ ಕೆಡವಿ ಅದೇ ಜಾಗದಲ್ಲಿ ಹೊಸ ಟ್ಯಾಂಕ್‌ ನಿರ್ಮಿಸಲಾಗುತ್ತಿದೆ’ ಎಂದರು. 

‘ಟ್ಯಾಂಕ್‌ ನಿರ್ಮಾಣ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡು ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಆಗುವಂತೆ ನೋಡಿಕೊಳ್ಳಬೇಕು’ ಎಂದು ಅವರು ನಗರಸಭೆಯ ಅಧಿಕಾರಿಗಳಿಗೆ ಸೂಚಿಸಿದರು. 

ನಗರಸಭಾ ಸದಸ್ಯರಾದ ನಂಜುಂಡಸ್ವಾಮಿ, ಎಂ.ಆರ್.ರಾಜಪ್ಪ, ಮುಖಂಡ ನಾಗರಾಜು, ಆಯುಕ್ತರಾದ ಎಸ್.ವಿ.ರಾಮದಾಸ್ ಇದ್ದರು. 

ಜಿಲ್ಲಾ ಕೇಂದ್ರದಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಅಗತ್ಯ ಕ್ರಮ ವಹಿಸಲಾಗಿದೆ.
ಸಿ.ಪುಟ್ಟರಂಗಶೆಟ್ಟಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.