ADVERTISEMENT

‘ಜಿಲ್ಲೆಯಲ್ಲಿ ಭೋವಿ ಜನಸಂಖ್ಯೆಯಲ್ಲಿ ಏರುಪೇರು’

ಸಮುದಾಯದ ಮುಖಂಡರ ಆಕ್ಷೇಪ;; ಅಂಕಿ ಅಂಶಗಳ ಪರಿಶೀಲಿಸಲು ಸೂಚನೆ: ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 6:30 IST
Last Updated 10 ಜನವರಿ 2026, 6:30 IST

ಚಾಮರಾಜನಗರ: ಜಿಲ್ಲೆಯಲ್ಲಿ ಭೋವಿ ಸಮುದಾಯದ ಜನಸಂಖ್ಯೆ ಹೆಚ್ಚಾಗಿದ್ದರೂ ಸಮೀಕ್ಷೆಯಲ್ಲಿ ಕಡಿಮೆ ಇರುವುದರಿಂದ ನಿಗಮದ ಸೌಲಭ್ಯಗಳು ಹೆಚ್ಚಿನ ಫಲಾನುಭವಿಗಳಿಗೆ ತಲುಪಿಲ್ಲ ಎಂದು ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಅಧ್ಯಕ್ಷರು, ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಸೌಲಭ್ಯಗಳನ್ನು ನೀಡಲು ಆಯಾ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿರುವ ಭೋವಿ ಸಮುದಾಯದ ಜನಸಂಖ್ಯೆಯೇ ಮಾನದಂಡವಾಗಿರುವುದರಿಂದ ಜಿಲ್ಲೆಗೆ ಹೆಚ್ಚು ಪ್ರಾತಿನಿಧ್ಯ ದೊರೆತಿಲ್ಲ. ಸಮುದಾಯದ ಜನಸಂಖ್ಯೆ ಸಮೀಕ್ಷೆಯಲ್ಲಿ ಕಡಿಮೆಯಾಗಿರುವ ಬಗ್ಗೆ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದು ಈ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ವರ್ಷ ಜಿಲ್ಲೆಗೆ ಹೆಚ್ಚಿನ ಗುರಿ ನಿಗದಿಗೆ ಪ್ರಯತ್ನಿಸಲಾಗುವುದು ಎಂದು ರಾಮಪ್ಪ ಭರವಸೆ ನೀಡಿದರು.

ಭೋವಿ ಅಭಿವೃದ್ಧಿ ನಿಗಮದಲ್ಲಿ ₹187 ಕೋಟಿ ಅನುದಾನ ಲಭ್ಯವಿದ್ದರೂ ಜಿಲ್ಲೆಯ ಬೆರಳೆಣಿಕೆ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ತಲುಪಿದ್ದು ಈ ಬಗ್ಗೆ ಸಮುದಾಯದ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಜಿಲ್ಲೆಗೆ ಸಿಕ್ಕಿದ್ದೆಷ್ಟು?: ‌ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಜಿಲ್ಲೆಯಲ್ಲಿ 2021–22, 2022–23, 2023–24, 2024–25 ಹಾಗೂ 2025–26ನೇ ಸಾಲಿನಲ್ಲಿ 39 ಫಲಾನುಭವಿಗಳಿಗೆ ₹ 32 ಲಕ್ಷ ನೀಡಲಾಗಿದೆ.

ಉದ್ಯಮ ಶೀಲತಾ ಯೋಜನೆಯಡಿ ಜಿಲ್ಲೆಯಲ್ಲಿ 2023–24, 2024–25 ಹಾಗೂ 2025–26ನೇ ಸಾಲಿನಲ್ಲಿ ಕೇವಲ 4 ಫಲಾನುಭವಿಗಳು ತಲಾ ಒಂದು ಲಕ್ಷ ಪಡೆದಿದ್ದಾರೆ. ಇದೇ ಅವಧಿಯಲ್ಲಿ ಗರಿಷ್ಠ ₹ 2 ಲಕ್ಷ ಸಹಾಯಧನ ನೀಡುವ ಉದ್ಯಮಶೀಲತಾ ಯೋಜನೆಯಡಿ 10 ಫಲಾನುಭವಿಗಳಿಗೆ ಸೌಲಭ್ಯ ಸಿಕ್ಕಿದೆ. ₹ 3.50 ಲಕ್ಷ ಸಹಾಯಧನ ಯೋಜನೆಯಡಿ 4 ಫಲಾನುಭವಿಗಳಿಗೆ ಯೋಜನೆಯ ಲಾಭ ದೊರೆತಿದೆ ಎಂದರು.

ಸ್ವಾವಲಂಬಿ ಸಾರಥಿ ಯೋಜನೆಯಡಿ 2023–24, 2024–25 ಹಾಗೂ 2025–26ನೇ ಸಾಲಿನಲ್ಲಿ ಇಬ್ಬರು ಫಲಾನುಭವಿಗಳು ತಲಾ ₹ 4 ಲಕ್ಷ ಸಹಾಯಧನ ಪಡೆದಿದ್ದಾರೆ. ಮೈಕ್ರೋ ಕ್ರೆಡಿಟ್ ಯೋಜನೆಯಡಿ 2021–22, 2022–23, 2023–24, 2024–25 ಹಾಗೂ 2025–26ನೇ ಸಾಲಿನಲ್ಲಿ 3 ಸಂಘಗಳ 30 ಫಲಾನುಭವಿಗಳಿಗೆ ₹ 7.50 ಲಕ್ಷ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗಂಗಾ ಕಲ್ಯಾಣ ಯೋಜನೆಯಡಿ 2021–22, 2022–23, 2023–24, 2024–25 ಹಾಗೂ 2025–26ನೇ ಸಾಲಿನಲ್ಲಿ 7 ಕೊಳವೆ ಬಾವಿ ಕೊರೆಸಲಾಗಿದೆ. ದ್ವಿಚಕ್ರ ವಾಹನ ನೀಡುವ ಯೋಜನೆಯಡಿ 2022–23ನೇ ಸಾಲಿನಲ್ಲಿ 40 ಫಲಾನುಭವಿಗಳಿಗೆ ಸೌಲಭ್ಯ ನೀಡಲಾಗಿದೆ ಎಂದು ನಿಗಮದ ಅಧ್ಯಕ್ಷ ರಾಮಪ್ಪ ವಿವರ ನೀಡಿದರು.

ಮಹಿಳಾ ಸ್ವಸಹಾಯ ಸಂಘಗಳಿಗೆ ಗರಿಷ್ಠ ₹ 5 ಲಕ್ಷ ಸಹಾಯಧನ, ಹೈನುಗಾರಿಕೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಸೇರಿದಂತೆ ಸ್ವ ಉದ್ಯೋಗ ಸೃಷ್ಟಿಗೆ ನಿಗಮದಿಂದ ಒತ್ತು ನೀಡಲಾಗುವುದು. ಅರ್ಹರಿಗೆ ಸಲವತ್ತುಗಳನ್ನು ನೀಡಲು ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ನಿಗಮಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಈ ಸಂದರ್ಭ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ, ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಂದ್ರಾ ನಾಯಕ್‌, ಜಿಲ್ಲಾ ವ್ಯವಸ್ಥಾಪಕ ರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.