ADVERTISEMENT

ಚಾಮರಾಜನಗರ: ಬಿಆರ್‌ಟಿಯಲ್ಲಿ ಜ.5ರಿಂದ 7ರವರೆಗೆ ‘ಹಕ್ಕಿ ಹಬ್ಬ‘

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 11:59 IST
Last Updated 17 ಡಿಸೆಂಬರ್ 2020, 11:59 IST
ಬಿಆರ್‌ಟಿ ಅರಣ್ಯ ವ್ಯಾಪ್ತಿಯಲ್ಲಿ ಕಂಡು ಬರುವ ನೆಲ ಶಿಳ್ಳಾರ ಹಾಗೂ ರಾಮದಾಸ ಹದ್ದು
ಬಿಆರ್‌ಟಿ ಅರಣ್ಯ ವ್ಯಾಪ್ತಿಯಲ್ಲಿ ಕಂಡು ಬರುವ ನೆಲ ಶಿಳ್ಳಾರ ಹಾಗೂ ರಾಮದಾಸ ಹದ್ದು   

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ 2021ರ ಜನವರಿ 5ರಿಂದ 7ರವರೆಗೆ ಮೂರು ದಿನಗಳ ‘ಹಕ್ಕಿ ಹಬ್ಬ’ ನಡೆಯಲಿದೆ.

ಅರಣ್ಯ ಇಲಾಖೆ ಹಾಗೂ ರಾಜ್ಯ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಇಡಿಬಿ) ಜಂಟಿಯಾಗಿ ಈ ಹಬ್ಬವನ್ನು ಆಯೋಜಿಸಿದೆ.

ಪಕ್ಷಿಗಳ ಸಂತತಿ ಸಂರಕ್ಷಣೆ, ಅಧ್ಯಯನ ಹಾಗೂ ಪಕ್ಷಿ ವೀಕ್ಷಣೆಯನ್ನು ಉತ್ತೇಜಿಸುವ ಸಲುವಾಗಿ ಪ್ರತಿ ವರ್ಷ ರಾಜ್ಯ ಮಟ್ಟದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಇದು ಏಳನೇ ವರ್ಷದ ಹಕ್ಕಿ ಹಬ್ಬ.

ADVERTISEMENT

ಈಗಾಗಲೇ ರಂಗನತಿಟ್ಟು, ದಾಂಡೇಲಿ, ಬಳ್ಳಾರಿ, ಮಂಗಳೂರು, ಚಿಕ್ಕಬಳ್ಳಾಪುರ, ಕಾರವಾರಗಳಲ್ಲಿ ಹಕ್ಕಿ ಹಬ್ಬ ನಡೆದಿವೆ. ಜಿಲ್ಲೆಯಲ್ಲಿ ನಡೆಯುತ್ತಿರುವುದು ಇದೇ ಮೊದಲು. ಮೂರು ದಿನಗಳಕಾರ್ಯಕ್ರಮದಲ್ಲಿ ಪಕ್ಷಿಗಳ ಬಗ್ಗೆ ಸಂವಾದ, ಉಪನ್ಯಾಸ ಹಾಗೂ ಅರಣ್ಯದ ವಿವಿಧ ಕಡೆಗಳಲ್ಲಿ ಹಕ್ಕಿಗಳ ವೀಕ್ಷಣೆಗೆ ಅವಕಾಶ ಇರಲಿದೆ. ರಾಜ್ಯ ಹಾಗೂ ಹೊರ ರಾಜ್ಯಗಳ ಪಕ್ಷಿ ವೀಕ್ಷಕರು, ಸಂಶೋಧಕರು, ಛಾಯಾಗ್ರಾಹಕರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

‘ಕೆಇಡಿಬಿ ಈ ಹಬ್ಬದ ಮುಖ್ಯ ಆಯೋಜಕ. ನಾವು ಅವರಿಗೆ ಸಹಯೋಗ ಕೊಡುತ್ತಿದ್ದೇವೆ. ದಿನಾಂಕ ನಿಗದಿಯಾಗಿದೆ. ಸಂಪೂರ್ಣ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ. ಇದೇ 19ರಂದು ಹಕ್ಕಿ ಹಬ್ಬಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸಭೆ ನಡೆಯಲಿದೆ’ ಎಂದು ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‌ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಬ್ಬದಲ್ಲಿ ಭಾಗವಹಿಸಲು ಇಚ್ಛಿಸುವವರು ಕೆಇಡಿಬಿ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ವಸತಿ ವ್ಯವಸ್ಥೆಯ ಖರ್ಚು ವೆಚ್ಚಗಳನ್ನು ಅವರೇ ಭರಿಸಬೇಕು. ಭಾಗವಹಿಸುವವರಿಗಾಗಿ ಕೆ.ಗುಡಿಯ ಜೆಲ್‌ಆರ್‌ ರೆಸಾರ್ಟ್‌, ಬಿಳಿಗಿರಿರಂಗನಬೆಟ್ಟದಲ್ಲಿರುವ ಕೆಎಸ್‌ಟಿಡಿಸಿಯ ವಸತಿಗೃಹಗಳನ್ನು ಅವರಿಗಾಗಿ ಕಾಯ್ದಿರಿಸಲಾಗುವುದು’ ಎಂದು ಅವರು ಹೇಳಿದರು.

ಅಪರೂಪದ ಅರಣ್ಯ ಸಂಪತ್ತನ್ನು ಹೊಂದಿರುವ ಬಿಆರ್‌ಟಿ ಅರಣ್ಯದಲ್ಲಿ 250ಕ್ಕೂ ಹೆಚ್ಚು ಪಕ್ಷಿಗಳ ಪ್ರಬೇಧಗಳಿವೆ.‘ಭಾರತದ ಹಕ್ಕಿ ಮನುಷ್ಯ’ ಎಂದು ಖ್ಯಾತರಾಗಿರುವ ಖ್ಯಾತ ಪಕ್ಷಿ ತಜ್ಞ ಡಾ.ಸಲೀಂಅಲಿಅವರು1939ರಲ್ಲಿ ಬಿಆರ್‌ಟಿ ಅರಣ್ಯದಲ್ಲಿ ಸುತ್ತಾಡಿ ನೂರಕ್ಕೂ ಹೆಚ್ಚು ಹಕ್ಕಿಗಳನ್ನು ಗುರುತಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.