
ಕೊಳ್ಳೇಗಾಲ: ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಹನೂರು ಹಾಗೂ ಕೊಳ್ಳೇಗಾಲ ತಾಲ್ಲೂಕುಗಳ 10 ಬುಡಕಟ್ಟು ಆಶ್ರಮ ಶಾಲೆಯಲ್ಲಿ ಆಧಾರ್ ಕಾರ್ಡ್ ರಹಿತ 140 ಮಕ್ಕಳಿಗೆ ಜನನ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆ ಯಶಸ್ವಿಯಾಯಿತು.
ಹನೂರು ಮತ್ತು ಕೊಳ್ಳೇಗಾಲ ತಾಲ್ಲೂಕಿನ ಕಾಡಂಚಿನ ಪ್ರದೇಶದಲ್ಲಿ 90 ಗಿರಿಜನ ಹಾಡಿಗಳಿದ್ದು, ಇಲ್ಲಿನ ನಿವಾಸಿಗಳ ಮಕ್ಕಳು ವಿದ್ಯಾಬ್ಯಾಸದಿಂದ ವಂಚಿತವಾಗಬಾರದೆಂದು ಸರ್ಕಾರ ಅಲ್ಲಲ್ಲಿ ಬುಡಕಟ್ಟು ಆಶ್ರಮ ಶಾಲೆಯಲ್ಲಿ ಆರಂಭಿಸಿತ್ತು. ಆದರೆ, ಅದೆಷ್ಟೋ ಪೋಷಕರು ತಮ್ಮ ಮಕ್ಕಳಿಗೆ ಸಕಾಲದಲ್ಲಿ ಜನನ ಪ್ರಮಾಣ ಪತ್ರ ಸಕಾಲದಲ್ಲಿ ನೀಡದಿರುವ ಕಾರಣ ಆಶ್ರಮ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ತೊಡಕಾಗಿತ್ತು.
ಆದರೂ ಆಶ್ರಮ ಶಾಲೆಯ ಶಿಕ್ಷಕರು ಹಾಗೂ ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಡಿಯ ಮಕ್ಕಳಿಗೆ ಆಯಾ ಪಾಲಕರ ಆಧಾರ್ ಕಾರ್ಡ್ ದಾಖಲೆ ಆಧರಿಸಿ ಶಾಲೆಗಳಿಗೆ ಪ್ರವೇಶಾತಿ ನೀಡಿದ್ದರು. ಇಂತಹ ವಿದ್ಯಾರ್ಥಿಗಳಿಗೆ ಕಾನೂನು ಬದ್ಧ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್ ದೊರಕಿಸಲು ಕ್ರಮವಹಿಸಿದ್ದರು. ಇದರ ಭಾಗವಾಗಿ ಅಧಿಕಾರಿಗಳು ನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮಕ್ಕಳ ಜನನ ಪ್ರಮಾಣ ಪತ್ರ ಪಡೆಯಲು ಪ್ರಕರಣ ದಾಖಲಿಸಿದ್ದರು.
ಇದೀಗ ಜನನಪ್ರಮಾಣ ಪತ್ರ ನೀಡುವ ಸಂಬಂಧ ಜೆಎಂಎಫ್‌ಸಿ ನ್ಯಾಯಾಲಯ ಡಿ.11 ಹಾಗೂ ಡಿ.12 ರಂದು ನ್ಯಾಯಾಲಯದಲ್ಲಿ ಆಯೋಜಿಸಿದ್ದ ಲೋಕ ಅದಾಲತ್‌ನಲ್ಲಿ 140 ಮಂದಿಗೆ ಜನನ ಪ್ರಮಾಣ ಪತ್ರ ನೀಡುವ ಕುರಿತಾದ ಪ್ರಕರಣದ ವಿಚಾರಣೆಯಲ್ಲಿ ಬುಡಕಟ್ಟು ಮಕ್ಕಳ ಪೋಷಕರು, ವಕೀಲರು ಹಾಗೂ ಅಧಿಕಾರಿಗಳು ಭಾಗವಹಿಸಿ, ನ್ಯಾಯಾಧೀಶರಲ್ಲಿ ಮಕ್ಕಳಿಗೆ ಜನನ ಪ್ರಮಾಣ ಪತ್ರ ದಾಖಲೆ ಹೊಂದಲು ಕಂದಾಯ ಇಲಾಖೆಗೆ ಆದೇಶ ನೀಡುವಂತೆ ಮನವಿ ಮಾಡಿದ್ದರು. ನ್ಯಾಯಾಲಯದ ಆದೇಶದನ್ವಯ 90 ಹಾಡಿಗಳ ಆಯಾ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಮತ್ತು ಲೆಕ್ಕಾಧಿಕಾರಿಗಳು ಜನನ ಪ್ರಮಾಣ ಪತ್ರ ನೀಡಲಿದ್ದು, ಇದರನ್ವಯ ಮುಂದಿನ ದಿನದಲ್ಲಿ ಜನನ ಪ್ರಮಾಣ ಪತ್ರ ವಂಚಿತ ಆಶ್ರಮ ಶಾಲೆಯ 140 ಮಕ್ಕಳಿಗೆ ಸಾಮೂಹಿಕವಾಗಿ ಕಾನೂನು ಬದ್ಧವಾಗಿ ಆಧಾರ್ ಕಾರ್ಡ್ ಲಭಿಸಿ, ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ ಎಂದು ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ರಾಜೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.