ADVERTISEMENT

ಬಿಜೆಪಿಗೆ ಗೆಲುವು: ನಗರದಲ್ಲಿ ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 14:51 IST
Last Updated 10 ಮಾರ್ಚ್ 2022, 14:51 IST
ಐದು ರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಪಕ್ಷವು ಗೆದ್ದಿರುವುದಕ್ಕೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಚಾಮರಾಜನಗರದಲ್ಲಿ ಗುರುವಾರ ಸಂಭ್ರಮಾಚರಣೆ ಮಾಡಿದರು
ಐದು ರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಪಕ್ಷವು ಗೆದ್ದಿರುವುದಕ್ಕೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಚಾಮರಾಜನಗರದಲ್ಲಿ ಗುರುವಾರ ಸಂಭ್ರಮಾಚರಣೆ ಮಾಡಿದರು   

ಚಾಮರಾಜನಗರ: ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯು ಉತ್ತರ ಪ್ರದೇಶ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಗೆಲುವು ಸಾಧಿಸಿರುವುದಕ್ಕೆ ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದಲ್ಲಿ ಗುರುವಾರ ಸಂಭ್ರಮಾಚರಣೆ ಮಾಡಿದರು.

ಪಕ್ಷದ ಕಚೇರಿಯಲ್ಲಿ ಸೇರಿದ ಮುಖಂಡರು ಹಾಗೂ ಕಾರ್ಯಕರ್ತರು ಅಲ್ಲಿಂದ ಭುವನೇಶ್ವರಿ ವೃತ್ತದ ವರೆಗೂ ಮೆರವಣಿಗೆ ನಡೆಸಿದರು. ಪಕ್ಷ, ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪರ ಘೋಷಣೆಗಳನ್ನು ಕೂಗಿದರು.ಪಟಾಗಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸುಂದರ್ ಅವರು ಮಾತನಾಡಿ, 'ಪಂಚ ರಾಜ್ಯಗಳಿಗೆ ನಡೆದ ಚುನಾವಣೆಗಳಲ್ಲಿ ಪಂಜಾಬ್ ಬಿಟ್ಟು ಉತ್ತರಪ್ರದೇಶ, ಗೋವಾ, ಉತ್ತರಾಖಂಡ, ಮಣಿಪುರ ರಾಜ್ಯಗಳಲ್ಲಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದೆ. ಪ್ರಧಾನಿ ನರೇಂದ್ರಮೋದಿ, ಅಮಿತ್‌ ಶಾ, ರಾಷ್ಟ್ರಿಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವರ್ಚಸ್ಸಿನಿಂದ ಇದು ಸಾಧ್ಯವಾಗಿದೆ. ದೇಶದ ಜನರು ಈಗಾಗಲೇ ಮೋದಿಯವರ ಆಡಳಿತ ಮೆಚ್ಚಿ ಮತ ನೀಡಿದ್ದಾರೆ. ವಿರೋಧ ಪಕ್ಷ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಅದು ಇನ್ನಾದರೂ ರಚನಾತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡಲಿ’ ಎಂದರು.

ADVERTISEMENT

‘ಈ ಫಲಿತಾಂಶ ಕರ್ನಾಟಕ ರಾಜ್ಯ ಚುನಾವಣೆಯ ದಿಕ್ಸೂಚಿಯಾಗಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೂಡ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ. ಜಿಲ್ಲೆಯಲ್ಲೂ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ನೇತೃತ್ವದಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ವಿಜಯಪಾತಕೆ ಹಾರಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಗರಸಭಾ ಅಧ್ಯಕ್ಷೆ ಆಶಾ, ಗ್ರಾಮಾಂತರ ಮಂಡಲ ಅಧ್ಯಕ್ಷ ಬಸವಣ್ಣ, ರಾಷ್ಟ್ರೀಯ ಒಬಿಸಿ ಮೋರ್ಚಾದ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ, ನಗರಸಭಾ ಸದಸ್ಯರಾದ ಶಿವರಾಜ್, ಚಂದ್ರಶೇಖರ್, ನಾಗೇಶ್ ನಾಯಕ, ಎಸ್‌ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಪುಟ್ಟ ಅರಸ್, ಕಿಲಗೆರೆ ಶಶಿಕುಮಾರ್, ಬಾಲಸುಬ್ರಹ್ಮಣ್ಯ, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್, ಸತೀಶ್ ಪಣ್ಯದಹುಂಡಿ, ವೇಣುಗೋಪಾಲ್, ಶಿವುವಿರಾಟ್ ಮಾಧ್ಯಮ ಪ್ರಮುಖ ಎನ್.ಮಂಜುನಾಥ್, ಸಹ ಮಾಧ್ಯಮ ಪ್ರಮುಖ್ ಚಂದ್ರಶೇಖರ್, ಉತ್ತುವಳ್ಳಿ ಮಹೇಶ್, ಮರೆಯಾಲ ಮಹೇಶ್, ಆಲೂರು ಪರಶಿವಮೂರ್ತಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಸವಣ್ಣ, ಮಹದೇವಪ್ಪ ನಲ್ಲೂರು ಶಿವರುದ್ರಸ್ವಾಮಿ ಇತರರು ಇದ್ದರು.

ಮೋದಿ ನಾಯಕತ್ವಕ್ಕೆ ಬೆಂಬಲ

’ಉತ್ತರ ಪ್ರದೇಶ, ಮಣಿಪುರ, ಉತ್ತರಕಾಂಡ, ಗೋವಾ ರಾಜ್ಯಗಳಲ್ಲಿ ಬಿಜೆಪಿ ಅಮೋಘವಾಗಿ ಗೆಲುವು ಸಾಧಿಸಿರುವುದು, ಈ ದೇಶದ ಜನ ಪ್ರಧಾನಿ ಮೋದಿ ಅವರ ನಾಯಕತ್ವಕ್ಕೆ ಜನರು ನೀಡಿರುವ ಬೆಂಬಲವಾಗಿದೆ‘ ಎಂದು ಬಿಜೆಪಿ ಮುಖಂಡ ಅಮ್ಮನಪುರ ಮಲ್ಲೇಶ್ ಅವರು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ನೆಲಸಮವಾಗಿದ್ದು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯ ನಾಯಕತ್ವವನ್ನು ಜನರು ತಿರಸ್ಕರಿಸಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೋದಿ ಅವರ ಪ್ರಾಮಾಣಿಕತೆ , ಕೋವಿಡ್ ಸಂದರ್ಭದಲ್ಲಿ ತೋರಿದ ಜಾಣ್ಮೆ, ಉಕ್ರೇನ್ ಯುದ್ಧ ಹಾಗೂ ಚೀನಾ ಅತಿಕ್ರಮಣದ ಸಂದರ್ಭದಲ್ಲಿ ತೋರಿದ ಧೈರ್ಯವನ್ನು ಮೆಚ್ಚಿ ಮತದಾರರು ಬಿಜೆಪಿಗೆ ಮತಹಾಕಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.