ಚಾಮರಾಜನಗರ: ಈ ಚುನಾವಣೆಯಲ್ಲಿ ಬಿಜೆಪಿ ಸೋಲಿಸಿ, ಕಾಂಗ್ರೆಸ್ ಗೆಲ್ಲಿಸಿ ಎಂದು ಹೇಳಿಕೆ ನೀಡುವ ಮೂಲಕ ದಲಿತ ಸಂಘರ್ಷ ಸಮಿತಿಯ ಮುಖಂಡರು ಕ್ಷೇತ್ರದ ದಲಿತ ಸಮುದಾಯವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ಗುರುವಾರ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ನೂರಾರು ದಲಿತ ಸಂಘರ್ಷ ಸಮಿತಿಗಳಿವೆ. ಇವುಗಳ ಮುಖಂಡರು ಚುನಾವಣೆ ಬಂದಾಗ ಬರುತ್ತಾರೆ. ಇವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಮಹದೇವಪ್ಪ ಅವರಿಗೆ ತಮ್ಮ ಸ್ವಾಭಿಮಾನವನ್ನು ಮಾರಿಕೊಂಡಿದ್ದಾರೆ’ ಎಂದು ದೂರಿದರು.
ಸರ್ಕಾರ ಬಂದರೆ, ರಾಜ್ಯಸಭೆಗೆ, ವಿಧಾನಪರಿಷತ್, ನಿಗಮ ಮಂಡಳಿಗಳಿಗೆ ನೇಮಕ ಮಾಡುವುದಾಗಿ ದಲಿತ ಮುಖಂಡರಿಗೆ ಸಿದ್ದರಾಮಯ್ಯ ಹಾಗೂ ಎಚ್.ಸಿ. ಮಹದೇವಪ್ಪ ಅವರು ಆಶ್ವಾಸನೆ ನೀಡಿದ್ದರು. ಆದರೆ, ಅದನ್ನು ಈಡೇರಿಸಿಲ್ಲ. ದಸಂಸದ ಮುಖಂಡರಿಗೆ ದಲಿತರ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಬೇಕಿತ್ತು. ಆದರೆ, ಅದನ್ನು ಮಾಡಿಲ್ಲ’ ಎಂದು ಟೀಕಿಸಿದರು.
‘ನರೇಂದ್ರಮೋದಿ ಅವರು ಪೌರಕಾರ್ಮಿಕರ ಪಾದಪೂಜೆ ಮಾಡಿದಾಗ ಚುನಾವಣೆ ಇರಲಿಲ್ಲ. ಆಗ ಪೌರಕಾರ್ಮಿಕರಿಗೆ ಗೌರವ ಹೆಚ್ಚಾಯಿತು. ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಪೌರಕಾರ್ಮಿಕರ ಪಾದಪೂಜೆ ಮಾಡಲಿ’ ಎಂದು ಸವಾಲು ಹಾಕಿದರು.
‘ಕೇಂದ್ರ ಸರ್ಕಾರ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಸಾಕಷ್ಟು ಯೋಜನೆಗಳನ್ನು ನೀಡಿದೆ. ಅಂಬೇಡ್ಕರ್ ಅವರಿಗೆ ಸೇರಿದ ಐದಯ ಸ್ಥಳಗಳನ್ನು ಅಭಿವೃದ್ಧಿಪಡಿಸಿದೆ. ದೇಶದ ಸಂವಿಧಾನ ಉಳಿಸಲು ದಲಿತ ಮುಖಂಡರು ಬಿಜೆಪಿ ಜೊತೆ ಇರಬೇಕಿದೆ’ ಎಂದು ಪ್ರಕಾಶ್ ಹೇಳಿದರು.
ಮುಖಂಡರಾದ ಪರಶಿವಯ್ಯ, ಮುಕುಂದಮೂರ್ತಿ, ಮಲ್ಲದೇವರು, ಪರಮೇಶ್ವರ್, ವೇಣುಗೋಪಾಲ್, ಕಾಡಹಳ್ಳಿ ಕುಮಾರ್, ರಾಜಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.