ADVERTISEMENT

ಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಜೆ.ಪಿ.ನಡ್ಡಾ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2023, 15:52 IST
Last Updated 27 ಫೆಬ್ರುವರಿ 2023, 15:52 IST
   

ಚಾಮರಾಜನಗರ: ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ವಿಜಯಸಂಕಲ್ಪ ಯಾತ್ರೆಯ ಒಂದು ರಥಕ್ಕೆ ಬುಧವಾರ (ಮಾರ್ಚ್‌ 1) ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಚಾಲನೆ ನೀಡಲಿದ್ದಾರೆ.

ಬುಧವಾರ ಮತ್ತು ಗುರುವಾರ (ಮಾರ್ಚ್‌ 2) ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ಸಾಗಲಿದ್ದು, ಹನೂರು, ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆಗಳಲ್ಲಿ ಬೃಹತ್‌ ಸಮಾವೇಶ ಹಾಗೂ ಕೊಳ್ಳೇಗಾಲ ಮತ್ತು ಚಾಮರಾಜನಗರಗಳಲ್ಲಿ ಬಿಜೆಪಿ ರೋಡ್‌ ಶೋ ನಡೆಸಲಿದೆ.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ರಾಜೇಂದ್ರ ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಯಾತ್ರೆಯ ಬಗ್ಗೆ ವಿವರ ನೀಡಿದರು.

ADVERTISEMENT

‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ಕಾರ್ಯಕ್ರಮಗಳು, ಜಾರಿಗೊಳಿಸಿರುವ ಯೋಜನೆಗಳು, ಸವಲತ್ತುಗಳ ಬಗ್ಗೆ ಜನರಿಗೆ ತಿಳಿಸುವುದಕ್ಕಾಗಿ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಮಹದೇಶ್ವರ ಬೆಟ್ಟದಿಂದ ಇದಕ್ಕೆ ಚಾಲನೆ ಸಿಗಲಿದೆ. ನಮ್ಮ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್‌ ನಡ್ಡಾ ಅವರು 12 ಗಂಟೆಗೆ ಮಹದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ನಂತರ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಬೆಟ್ಟದಲ್ಲಿ ಬೇಡಗಂಪಣ ಸಮುದಾಯದವರು ಹಾಗೂ ಸೋಲಿಗರೊಂದಿಗೆ ನಡ್ಡಾ ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಹನೂರಿನಲ್ಲಿ ಬೃಹತ್‌ ಸಮಾವೇಶ ನಡೆಯಲಿದೆ. 15 ಸಾವಿರದಿಂದ 20 ಸಾವಿರ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಅಲ್ಲಿಂದ ಯಾತ್ರೆಯು ಕೊಳ್ಳೇಗಾಲಕ್ಕೆ ತಲುಪಲಿದೆ. ಅಲ್ಲಿ ರೋಡ್‌ ಶೋ ನಡೆಸಿ, ನಂತರ ಸಮಾವೇಶವೂ ಆಯೋಜಿಸಲಾಗಿದೆ. ಅಲ್ಲೂ 15 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಆ ದಿನ ಸಂಜೆ ಯಾತ್ರೆಯು ಚಾಮರಾಜನಗರಕ್ಕೆ ಬರಲಿದೆ. ಮಾರ್ಚ್‌ 2ರಂದು ಬೆಳಿಗ್ಗೆ ನಗರದಲ್ಲಿ ಬೃಹತ್‌ ರೋಡ್‌ ಶೋ ಹಮ್ಮಿಕೊಳ್ಳಲಾಗಿದೆ. ನಂತರ ಯಾತ್ರೆ ಗುಂಡ್ಲುಪೇಟೆಗೆ ಹೊರಡಲಿದೆ. ಅಲ್ಲಿ ಸಮಾವೇಶ ಆಯೋಜಿಸಲಾಗಿದ್ದು, ಅಲ್ಲಿಂದ ಮೈಸೂರು ಗ್ರಾಮಾಂತರ ಕ್ಷೇತ್ರಗಳಿಗೆ ಯಾತ್ರೆ ಮುಂದುವರಿಯಲಿದೆ. ಯಾತ್ರೆಯು 58 ಕ್ಷೇತ್ರಗಳಲ್ಲಿ ಸಂಚರಿಸಲಿದೆ’ ಎಂದು ರಾಜೇಂದ್ರ ವಿವರಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ನಾರಾಯಣ ಪ್ರಸಾದ್‌, ಸಂಕಲ್ಪ ಯಾತ್ರೆಯ ಜಿಲ್ಲಾ ಉಸ್ತುವಾರಿ ಡಾ.ಎ.ಆರ್‌.ಬಾಬು, ಮುಖಂಡರಾದ ಎಂ.ರಾಮಚಂದ್ರ, ಕೂಡ್ಲೂರು ಹನುಮಂತಶೆಟ್ಟಿ, ಜಿಲ್ಲಾ ವಕ್ತಾರ ಅಯ್ಯನಪುರ ಶಿವಕುಮಾರ್‌, ಮೈಸೂರು ಮಾಧ್ಯಮ ಉಸ್ತುವಾರಿ ವಸಂತ್ ಇದ್ದರು.

ನಾಲ್ಕು ಕಡೆಗಳಿಂದ ಯಾತ್ರೆ

‘ರಾಜ್ಯದಲ್ಲಿ ನಾಲ್ಕು ಕಡೆಗಳಿಂದ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿದೆ. 2ರಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ನಂದಗುಡಿಯ ಸಂಗೊಳ್ಳಿ ರಾಯಣ್ಣ ಸ್ಮಾರಕದಲ್ಲಿ ಯಾತ್ರೆಗೆ ಚಾಲನೆ ನೀಡಲಿದ್ದರೆ, ಮಾರ್ಚ್‌ 3ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಬಸವ ಕಲ್ಯಾಣದ ಆಧುನಿಕ ಅನುಭವ ಮಂಟಪದಲ್ಲಿ ಮೂರನೇ ತಂಡದ ಯಾತ್ರೆಗೆ ಮತ್ತು ಅದೇ ದಿನ ಸಂಜೆ ಕೆಂಪೇಗೌಡರ ಜನ್ಮಸ್ಥಳ ದೇವನಹಳ್ಳಿಯಲ್ಲಿ ನಾಲ್ಕನೇ ತಂಡದ ಯಾತ್ರೆ ಚಾಲನೆ ನೀಡಲಿದ್ದಾರೆ’ ಎಂದು ರಾಜೇಂದ್ರ ಹೇಳಿದರು.

‘ನಾಲ್ಕೂ ಕಡೆಯಿಂದ ಬರುವ ಯಾತ್ರೆಗಳು ‌ದಾವಣೆಗೆರೆ ತಲುಪಲಿವೆ. ಮಾರ್ಚ್‌ 23–24ರಂದು ಪ್ರಧಾನಿ ಮೋದಿ ಅವರ ಸಮಯ ಕೇಳಿದ್ದೇವೆ. ಅಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲು ಪಕ್ಷದ ಯೋಜಿಸಿದೆ’ ಎಂದರು.

‘ಸ್ಥಳೀಯರು ಪ್ರಬಲರಾಗಿದ್ದಾರೆ’

ಚಾಮರಾಜನಗರ ಜಿಲ್ಲೆಯಲ್ಲಿ ಪಕ್ಷದ ಟಿಕೆಟ್‌ ಅನ್ನು ಸ್ಥಳೀಯರಿಗೆ ನೀಡುತ್ತೀರಾ ಅಥವಾ ಹೊರಗಡೆಯಿಂದ ಬಂದ ಆಕಾಂಕ್ಷಿಗಳಿಗೆ ಕೊಡುತ್ತೀರಾ ಎಂದು ಕೇಳಿದ್ದಕ್ಕೆ, ‘ಸ್ಥಳೀಯ ಆಕಾಂಕ್ಷಿಗಳು ಪ್ರಬಲರಾಗಿಲ್ಲದಿದ್ದರೆ, ಹೊರಗಿನ ಆಕಾಂಕ್ಷಿಗಳನ್ನು ಪರಿಗಣಿಸಬಹುದು. ಆದರೆ, ಇಲ್ಲಿ ಸ್ಥಳೀಯ ಮುಖಂಡರು ತುಂಬಾ ಪ್ರಬಲರಾಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.