ಚಾಮರಾಜನಗರ: ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇತಿಹಾಸ ಪ್ರಸಿದ್ಧ ಬಿಳಿಗಿರಿ ರಂಗನಾಥ ಸ್ಟಾಮಿ ಬೆಟ್ಟದ ಪ್ರದೇಶವನ್ನು ₹ 5.75 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಮಂಗಳವಾರ ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರ ಪಶ್ನೆಗೆ ಉತ್ತರಿಸಿದ ಸಚಿವರು, ‘ಪ್ರವಾಸೋದ್ಯಮ ಇಲಾಖೆಯಿಂದ ದೇವಾಲಯದ ಸುತ್ತ ₹ 1 ಕೋಟಿ ವೆಚ್ಚದಲ್ಲಿ ನೆಲಹಾಸು ಕಾಮಗಾರಿ ಪೂರ್ಣಗೊಂಡಿದೆ’.
ಬೆಟ್ಟದಲ್ಲಿ ಸುಸಜ್ಜಿತ ಬಸ್ ನಿಲ್ದಾಣ, ನಂದಿ ಬೆಟ್ಟ ಮಾದರಿಯಲ್ಲಿ ವೀಕ್ಷಣಾ ಗೋಪುರ, ದಾಸೋಹ, ಅಡುಗೆ ಮನೆ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ₹ 5.75 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ ನೀಡಲು ಸರ್ಕಾರ ಪರಿಶೀಲಿಸುತ್ತಿದೆ. ಬಿಳಿಗಿರಿ ರಂಗನಾಥ ದೇವಾಲಯದ ಬಳಿ ಮೆಟ್ಟಿಲು ಹಾಗೂ ರೈಲಿಂಗ್ಸ್ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗಿದ್ದು ಕಲ್ಯಾಣಿ ರಸ್ತೆ, ರಥದ ಬೀದಿ ಕಾಂಕ್ರಿಟ್ ರಸ್ತೆ ಪೂರ್ಣಗೊಳಿಸಲಾಗಿದೆ. ಇದಕ್ಕಾಗಿ ₹ 1.05 ಕೋಟಿ ವೆಚ್ಚ ಮಾಡಲಾಗಿದೆ.
ದೇವಸ್ಥಾನದ ಪಾದುಕೆಯಿಂದ ರಾಜಗೋಪುರಕ್ಕೆ ಮೆಟ್ಟಿಲುಗಳ ವಿನ್ಯಾಸ ಪಡೆಯಲಾಗಿದೆ. ಮೈಸೂರು ವೃತ್ತದ ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್ ಹಾಗೂ ಕಾರ್ಯಪಾಲಕ ಎಂಜಿನಿಯರ್ ಕಾಮಗಾರಿ ಪರಿವೀಕ್ಷಣೆ ನಡೆಸಿದ್ದು ಕಾಮಗಾರಿ ಸ್ಥಳದಲ್ಲಿ ಪಾಕೆಟ್ ರಾಕ್ಸ್ ಕಂಡುಬಂದ ಕಾರಣ ಮರುವಿನ್ಯಾಸ ಪಡೆದು ಕಾಮಗಾರಿ ನಿರ್ವಹಿಸಲು ನಿರ್ದೇಶನ ನೀಡಲಾಗಿದೆ.
ಮರುವಿನ್ಯಾಸದ ಅಂದಾಜು ಪಟ್ಟಿ ತಯಾರಿಸಿದ್ದು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಆಗಮಿಕರೊಂದಿಗೆ ಚರ್ಚಿಸಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಆಯುಕ್ತರು ವರದಿ ಸಲ್ಲಿಸಿದ್ದು ಶೀಘ್ರ ಅಧಿಕಾರಿಗಳೊಂದಿಗೆ ಚರ್ಚಿಸಿ, ಬಿಳಿಗಿರಿ ರಂಗನಬೆಟ್ಟದ ಮೆಟ್ಟಿಲು ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.