ADVERTISEMENT

ರೈತರಿಗೆ ಸಾಲದ ಕುಣಿಕೆ, ಮಧ್ಯವರ್ತಿಗಳಿಗೆ ಲಾಭದ ಕಾಣಿಕೆ

ಬಿಳಿಗಿರಿರಂಗನ ಬೆಟ್ಟ: ಈಗ ಕಾಫಿ ಕೊಯ್ಲಿನ ಸಮಯ, ಶೇ 40ರಷ್ಟು ಕಾಫಿ ಬೀಜ ಖರೀದಿಸುತ್ತಿದೆ ಸೋಲಿಗರ ಸಂಘ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 11:26 IST
Last Updated 14 ಮಾರ್ಚ್ 2020, 11:26 IST
ಬಿಳಿಗಿರಿರಂಗನಬೆಟ್ಟದ ಬಂಗ್ಲೇಪೋಡಿನ ಬಳಿ ಕಾಫಿ ಬೀಜವನ್ನು ಒಣಗಿಸುವುದಕ್ಕಾಗಿ ಬಿಸಿಲಿಗೆ ಹಾಕಿದ ಸೋಲಿಗ ಮಹಿಳೆ
ಬಿಳಿಗಿರಿರಂಗನಬೆಟ್ಟದ ಬಂಗ್ಲೇಪೋಡಿನ ಬಳಿ ಕಾಫಿ ಬೀಜವನ್ನು ಒಣಗಿಸುವುದಕ್ಕಾಗಿ ಬಿಸಿಲಿಗೆ ಹಾಕಿದ ಸೋಲಿಗ ಮಹಿಳೆ   

ಯಳಂದೂರು:ಬಿಳಿಗಿರಿರಂಗನಬೆಟ್ಟದ ಕಾನನದ ಪೋಡುಗಳಲ್ಲಿ ಈಗ ಕಾಫಿ ಕೊಯ್ಲಿನ ಸಂಭ್ರಮ. ಗುಣಮಟ್ಟದಕಾಫಿಗೆ ಬೆಲೆ ಮತ್ತು ಬೇಡಿಕೆಯೂ ಕುದುರಿದೆ.

ಸೋಲಿಗರೇ ಸೇರಿ ಸ್ಥಾಪಿಸಿರುವ ಬಿಳಿಗಿರಿ ಕಾಫಿ ಬೆಳೆಗಾರರ ‌‌‌ಸಂಘವು ಸದಸ್ಯರ ಉತ್ಪನ್ನ‌ವನ್ನು ಉತ್ತಮ ಬೆಲೆಗೆ ಖರೀದಿಸುತ್ತಿದೆ.ಆದರೆ, ಇದೇ ವೇಳೆ ಮಧ್ಯವರ್ತಿಗಳ ಕಾಟವೂ ಹೆಚ್ಚಾಗಿದೆ.

ಬೆಟ್ಟದಲ್ಲಿ 20 ಪೋಡುಗಳಿವೆ. 659 ಎಕರೆ ಪ್ರದೇಶದಲ್ಲಿ 524 ಕಾಫಿ ಬೆಳೆಗಾರರುಇದ್ದಾರೆ. ಇವರು ಬಿಳಿಗಿರಿ ಸೋಲಿಗರ ರೈತ ಉತ್ಪಾದಕರ ಸಂಘ ಸ್ಥಾಪಿಸಿ ಸಮುದಾಯಮಾರುಕಟ್ಟೆ ವ್ಯವಸ್ಥೆಯಡಿ ಬೆಲೆ ನಿರ್ಧರಿಸುತ್ತಾರೆ. ಸಂಘವು ಮೂರು ವರ್ಷಗಳಿಂದ ವಹಿವಾಟು ನಡೆಸುತ್ತಿದೆ. ಬೆಟ್ಟದಲ್ಲಿ ಬೆಳೆಯುವ ಒಟ್ಟು ಕಾಫಿಯಲ್ಲಿ ಶೇ 40ರಷ್ಟು ಮಾತ್ರ ಸಂಘಕ್ಕೆ ಮಾರಾಟವಾಗುತ್ತದೆ. ಉಳಿದ ಶೇ 60ರಷ್ಟು ಮಧ್ಯವರ್ತಿಗಳ ಪಾಲಾಗುತ್ತದೆ.

ADVERTISEMENT

ಮಧ್ಯವರ್ತಿಗಳು ಸಾಲವಾಗಿ ಅಥವಾ ಮದುವೆ, ಹಬ್ಬ, ಇನ್ನಿತರೆ ಶುಭ ಸಮಾರಂಭಗಳಿಗಾಗಿ ಬೆಳೆಗಾರರಿಗೆ ಮುಂಗಡವಾಗಿ ಹಣ ನೀಡುತ್ತಾರೆ. ಕೊಯ್ಲು ಆಗುತ್ತಿದ್ದಂತೆಯೇ ಹಣದ ಬದಲು ಕಾಫಿ ಬೀಜವನ್ನು ಪಡೆಯುತ್ತಾರೆ. ದರ ಮತ್ತು ತೂಕದಲ್ಲೂ ವಂಚಿಸಿ ಕಾಫಿ ಬೆಳೆಗಾರರಿಗೆ ನಷ್ಟ ಮಾಡುತ್ತಾರೆ ಎಂಬುದು ಸಂಘದ ಸದಸ್ಯರ ದೂರು.

‘ಬೆಟ್ಟದಲ್ಲಿ ಸಂಘವು ಮೂರು ವರ್ಷಗಳಿಂದ ವಹಿವಾಟು ನಡೆಸುತ್ತಿದೆ. ಶೇ 60 ಕಾಫಿಬೀಜವನ್ನು ಮಧ್ಯವರ್ತಿಗಳೇ ಖರೀದಿಸುತ್ತಾರೆ. ಇವರಿಗೆ ಸ್ಥಳೀಯರ ನೆರವು ಇದೆ. ಇದರಿಂದ ಸೋಲಿಗರ ಸಂಘದ ಆರ್ಥಿಕ ಚಟುವಟಿಕೆಗೆ ಹಿನ್ನಡೆಯಾಗಿದೆ’ ಎಂದುಜಿಲ್ಲಾ ಬುಡಕಟ್ಟು ಅಭಿವೃದ್ಧಿ ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ ಅವರು ಹೇಳಿದರು.

ಬೆಳೆಗಾರರೇ ಸೇರಿ ಕಟ್ಟಿಕೊಂಡ ಸಂಘಕ್ಕೆ ಕಾಫಿ ಬೋರ್ಡ್‌ ನೆರವು ಮತ್ತು ಮಾರ್ಗದರ್ಶನ ಮಾಡುತ್ತಿದೆ. ಸಮುದಾಯಮಾರುಕಟ್ಟೆ ವ್ಯವಸ್ಥೆಯಡಿ ಬೆಲೆ ನಿರ್ಧರಿಸುತ್ತಾರೆ.

ಅರೇಬಿಕ್ ಪಾರ್ಚ್‌ಮೆಂಟ್ ಕಾಫಿಯನ್ನು ಕೆ.ಜಿಗೆ ₹175 ದರದಲ್ಲಿ ಸಂಘ ಕೊಳ್ಳುತ್ತದೆ.ಸ್ಥಳೀಯರು ಮತ್ತು ಮಂಗಳೂರು ಮೂಲದ ಏಜಂಟರು ಕೆಜಿಗೆ ₹165 ನೀಡುತ್ತಾರೆ. ಕ್ವಿಂಟಲ್‌ಗೆ 10 ಕೆಜಿ ಹೆಚ್ಚಿರುವಂತೆ ತೂಗುತ್ತಾರೆ. ಈಗಾಗಲೇ ಸಾಲ ಪಡೆದವರುಇದನ್ನು ಪ್ರಶ್ನಿಸಲು ಹಿಂಜರಿಯುತ್ತಾರೆ. ಇವರನ್ನು ನಿಯಂತ್ರಿಸುವ ಕೆಲಸವಾಗಬೇಕು ಎಂದು ಕಾಫಿ ಕೃಷಿಕರು ಹೇಳುತ್ತಾರೆ.

‘ಪ್ರಜಾವಾಣಿ’ ನೋಡಿ ಮಾರಾಟ: ಬೆಳೆಗಾರರು ಪ್ರತಿ ದಿನ ‘ಪ್ರಜಾವಾಣಿ’ ಪತ್ರಿಕೆಯ ವಾಣಿಜ್ಯ ಪುಟದಲ್ಲಿ ಬರುವ ಕಾಫಿ ಧಾರಣೆ ಅಂಕಣವನ್ನು ನೋಡುತ್ತಾರೆ. ಅದರ ಆಧಾರದಲ್ಲೇ ಸಂಘಕ್ಕೆ ಮಾರಾಟ ಮಾಡುತ್ತಾರೆ.

ಲಾಭಾಂಶ ಸದಸ್ಯರಿಗೆ ವಿತರಣೆ

‘ಸಂಘಕ್ಕೆ ಬರುವ ಹೆಚ್ಚುವರಿ ಲಾಭಾಂಶವನ್ನು (ಪ್ರೀಮಿಯಂ) ಸಂಘ ಮತ್ತು ಸದಸ್ಯರ ಹಿತದೃಷ್ಟಿಯಿಂದ ಮರು ಹಂಚಿಕೆ ಮಾಡುತ್ತದೆ.ಕಾಫಿ ಬೋರ್ಡ್, ಸಂಘದ ಸದಸ್ಯರಿಗೆ ತರಬೇತಿ, ಕಾಫಿ ಮತ್ತು ಮೆಣಸು ಪಲ್ಪಿಂಗ್ ಯಂತ್ರಗಳನ್ನು ಒದಗಿಸುತ್ತದೆ. ಇವುಗಳಿಂದ ಸಣ್ಣ ರೈತರು ಮನೆಯವರ ಸಹಾಯದಿಂದ ಕಾಫಿಬೀಜಗಳನ್ನು ಸುಲಭವಾಗಿ ಸುಲಿಯಬಹುದು. ಶ್ರಮಿಕರ ಅಭಾವ ನೀಗುತ್ತದೆ’ ಎಂದು ಸಂಘದ ಸದಸ್ಯಹೊಸಪೋಡು ಸಿದ್ದೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೋಸ ಮಾಡುವುದಿಲ್ಲ

‘ಕಾಫಿ ಮಾರಾಟಗಾರರು ದೈನಂದಿನ ಅಗತ್ಯಗಳಿಗೆ, ಕೃಷಿ ಮತ್ತು ಮನೆ ವಾರ್ತೆಗೆ ಮುಂಗಡ ಹಣಪಡೆಯುತ್ತಾರೆ. ಇವರಿಂದ ಫಸಲು ಕೊಯ್ಲಿನ ಹಂತಕ್ಕೆ ಬಂದಾಗ ಹಣದ ಬದಲು ಕಾಫಿಬೀಜ ಪಡೆಯುತ್ತೇವೆ. ತೂಕ ಇಲ್ಲವೇ ಬೆಲೆಯಲ್ಲಿ ಯಾವುದೇ ಮೋಸ ಹಾಗೂ ವಂಚನೆ ಮಾಡುವುದಿಲ್ಲ’ ಎಂದು ಮಧ್ಯವರ್ತಿ‌ಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.