ADVERTISEMENT

16ರಂದು ರಂಗನಾಥನ ಜಾತ್ರೆ: ಸಂಕ್ರಾಂತಿ ರಥೋತ್ಸವಕ್ಕೆ ಸಿದ್ಧತೆ

ಪ್ಲಾಸ್ಟಿಕ್ ಹಾಗೂ ಪ್ರಾಣಿಬಲಿ ನಿಷೇಧ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 7:43 IST
Last Updated 3 ಜನವರಿ 2026, 7:43 IST
ಯಳಂದೂರು ತಾಲ್ಲೂಕಿನ ಪ್ರಸಿದ್ಧ ರಂಗನಾಥಸ್ವಾಮಿಯ ಚಿಕ್ಕ ಜಾತ್ರೆಯ ವೈಭವ (ಸಂಗ್ರಹ ಚಿತ್ರ)
ಯಳಂದೂರು ತಾಲ್ಲೂಕಿನ ಪ್ರಸಿದ್ಧ ರಂಗನಾಥಸ್ವಾಮಿಯ ಚಿಕ್ಕ ಜಾತ್ರೆಯ ವೈಭವ (ಸಂಗ್ರಹ ಚಿತ್ರ)   

ಯಳಂದೂರು: ತಾಲ್ಲೂಕಿನ ಪ್ರಸಿದ್ಧ ಬಿಳಿಗಿರಿರಂಗನಬೆಟ್ಟದಲ್ಲಿ ಜ.16ರಂದು ಸಂಕ್ರಾಂತಿ ಚಿಕ್ಕಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ. ಇದಕ್ಕಾಗಿ ವರ್ಷದ ಆರಂಭದಿಂದಲೇ ಸಿದ್ಧತೆ ನಡೆಯುತ್ತಿದ್ದು, ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಮೂಡಿಸಿದೆ. ಈ ಬಾರಿ ಅದ್ದೂರಿ ಆಚರಣೆಗೆ ಭಕ್ತರು ಒಲವು ತೋರಿದ್ದಾರೆ.

ರಂಗನಾಥಸ್ವಾಮಿ ಚಿಕ್ಕಜಾತ್ರೆ ನಿಮಿತ್ತ ಜ.13ರಿಂದ ಧಾರ್ಮಿಕ ಉತ್ಸವಗಳಿಗೆ ಚಾಲನೆ ಸಿಗಲಿದ್ದು, ಅಂಕುರಾರ್ಪಣ ರಾತ್ರಿ ಕೊಠಾರೋತ್ಸವ, ಅಭಿಷೇಕ ಪೂಜಾರ್ಚನೆ, ಧ್ವಜಾರೋಹಣ, ರಾತ್ರಿ ರಂಗಮಂಟಪೋತ್ಸವ, ಜ.15ರಂದು ಸಂಕ್ರಾಂತಿ ಹಬ್ಬದಂದು ಸ್ವರ್ಗದ ಬಾಗಿಲು ತೆರೆದು ಭಕ್ತರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತದೆ. ಜ.16ರಂದು ಶುಭ ಮೀನ ಲಗ್ನದ ನವಾಂಶ ಶುಭ ಮೂಹೂರ್ತದಲ್ಲಿ ಬೆಳಿಗ್ಗೆ 10.56ರಿಂದ 11.05ರೊಳಗೆ ಸಂಕ್ರಾಂತಿ ರಥೋತ್ಸವ ನಡೆಯಲಿದೆ.

ಉತ್ತರಾಯಣ ಪುಣ್ಯಕಾಲದಲ್ಲಿ ಸಂಕ್ರಮಣ ಜಾತ್ರೆ ನಡೆಯುತ್ತದೆ. ಜನವರಿಯಿಂದ ಮೇ ತನಕ ನೂರಾರು ಉತ್ಸವಗಳು ಜರುಗುತ್ತವೆ. ಈ ಸಮಯ ಭಕ್ತರು ರಂಗಸ್ವಾಮಿಗೆ ಹೊಸ ಕಾಳು, ತಳಿರು ತೋರಣ ಒಪ್ಪಿಸಿ ಹರಕೆ ಸಲ್ಲಿಸುತ್ತಾರೆ. ಭಕ್ತರು ದೇವಾಲಯದ ಸುತ್ತಲೂ ತೇರನ್ನು ಎಳೆದು ಸಂಭ್ರಮಿಸುತ್ತಾರೆ. ಸೋಲಿಗರು ಮತ್ತು ಸ್ಥಳೀಯರು ವಿವಿಧ ಸೇವೆ ಸಲ್ಲಿಸಿ ಮಳೆ ಬೆಳೆ ಸಮೃದ್ಧತೆಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ ಎಂದು ಅರ್ಚಕ ರವಿಕುಮಾರ್ ಹೇಳಿದರು.

ADVERTISEMENT

ಹಬ್ಬದಂದು ರಾಜ್ಯಾದಾದ್ಯಂತ ಬೆಟ್ಟಕ್ಕೆ ಅಪಾರ ಭಕ್ತರು ಬರುವ ನಿರೀಕ್ಷೆ ಇರುವುದರಿಂದ ಅಗತ್ಯ ಸೌಲಭ್ಯಗಳನ್ನು ವಿಸ್ತರಿಸಬೇಕು. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಆರೋಗ್ಯ ಸೇವೆ ಒದಗಿಸಬೇಕು. ಪ್ಲಾಸ್ಟಿಕ್ ಚೀಲಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಬಸ್ ನಿಲ್ದಾಣದ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು ಎಂದು ಪಟ್ಟಣದ ಮಹೇಶ್ ಪ್ರಿನ್ಸ್ ಒತ್ತಾಯಿಸಿದರು.

ಜಾತ್ರೆಯ ಹಿನ್ನಲೆಯಲ್ಲಿ ಬೆಟ್ಟದಲ್ಲಿ ಪ್ರಾಣಿ ಬಲಿ ಮತ್ತು ಮಾರಕಾಸ್ತ್ರ ಒಯ್ಯುವುದನ್ನು ನಿಷೇಧಿಸಲಾಗಿದೆ. ಜನದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಗುಂಬಳ್ಳಿ ತಪಾಸಣಾ ಕೇಂದ್ರಗಳಲ್ಲಿ ದ್ವಿಚಕ್ರ ವಾಹನಗಳ ಸಂಚಾರ ನಿಯಂತ್ರಿಸಲಾಗುತ್ತದೆ. ಆದರೆ, ಪಟ್ಟಣದಿಂದ ಹೊರಡುವ ನೂರಾರು ಬಸ್‌ಗಳನ್ನು ಸುವ್ಯವಸ್ಥಿತವಾಗಿ ನಿಯಂತ್ರಿಸುವುದಿಲ್ಲ. ಎಲ್ಲೆಂದರಲ್ಲಿ ಬಸ್ ನಿಂತು ಹೊರಡುವುದರಿಂದ ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಬಸ್ ಹಿಡಿಯಲು ತೊಂದರೆ ಎದುರಿಸುತ್ತಾರೆ. ಈ ನಿಟ್ಟಿನಲ್ಲಿ ಸಂಬಂಧಪಟಟ್ವರು ಗಮನ ಹರಿಸಬೇಕು ಎನ್ನುತ್ತಾರೆ ಕೆಸ್ತೂರು ಗ್ರಾಮದ ಪ್ರಸನ್ನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.