ADVERTISEMENT

ಯಳಂದೂರು | ಶೀತಗಾಳಿ, ತುಂತರು ಮಳೆ, ಕೀಟ ಹಾಗೂ ರೋಗಬಾಧೆ: ಗಿಡದಲ್ಲಿ ಹಣ್ಣಾದ ಬದನೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 2:00 IST
Last Updated 20 ಆಗಸ್ಟ್ 2025, 2:00 IST
ಯಳಂದೂರು ತಾಲ್ಲೂಕಿನ ಅಂಬಳೆ ಹೊರವಲಯದ ಬದನೆ ತಾಕಿನಲ್ಲಿ ಉದ್ದ ಬದನೆಕಾಯಿ ಹಣ್ಣಾಗಿ ಉದುರುತ್ತಿದೆ.
ಯಳಂದೂರು ತಾಲ್ಲೂಕಿನ ಅಂಬಳೆ ಹೊರವಲಯದ ಬದನೆ ತಾಕಿನಲ್ಲಿ ಉದ್ದ ಬದನೆಕಾಯಿ ಹಣ್ಣಾಗಿ ಉದುರುತ್ತಿದೆ.   

ಯಳಂದೂರು: ವಾರವಿಡೀ ಕಾಣಿಸಿಕೊಂಡ ಶೀತಗಾಳಿ, ತುಂತುರು ಮಳೆ ಹಾಗೂ ತೇವಾಂಶ ಹೆಚ್ಚಳದಿಂದ ತರಕಾರಿ ಬೆಳೆಗಳಿಗೆ ರೋಗ ಹಾಗೂ ಕೀಟ ಹಾವಳಿ ಕಾಣಿಸಿಕೊಂಡಿದೆ. ಬದನೆ ಬೆಳೆ ಕೊಳೆ ರೋಗಕ್ಕೆ ತುತ್ತಾಗಿದೆ. ಕೀಟ ಹಾವಳಿಯೂ ಕಾಡಿದೆ. ಗುಣಮಟ್ಟದ ಕಾಯಿ ಇದ್ದರೂ, ರೋಗ ಬಾಧೆ ಹೆಚ್ಚಳದಿಂದ ತಾಕಿನಲ್ಲಿ ಬೆಳೆಗಾರರು ಬದನೆ ಕೊಯ್ಲು ಮಾಡದೆ ಹಾಗೆ ಬಿಟ್ಟಿದ್ದಾರೆ. ಮಾರುಕಟ್ಟೆಯಲ್ಲಿ ಉದ್ದನೆಯ ಬದನೆಗೆ ಧಾರಣೆ ನಿರೀಕ್ಷಿಸಿದಷ್ಟು ಸಿಗದ ಕಾರಣವೂ ಬೆಳೆಗಾರರು ಔಷಧೋಪಚಾರಕ್ಕೆ ಮುಂದಾಗಿಲ್ಲ.

ತಾಲ್ಲೂಕಿನ ಬಯಲು ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಮಿಶ್ರ ಬೆಳೆಯಾಗಿ ಬದನೆ ಬೆಳೆಯುತ್ತಾರೆ. ತೆಂಗು ತೋಟದ ನಡುವೆಯೂ ಬದನೆ ಬಿತ್ತನೆ ನಡೆದಿದೆ. ವರ್ಷಪೂರ್ತಿ ಬೇಡಿಕೆ ಇರುವ ಕಾರಣಕ್ಕೆ ಹಲವು ತಳಿಯ ಬದನೆ ಮಾರುಕಟ್ಟೆಗೆ ಬಂದಿದೆ. ಉದ್ದವಾದ ಕೆಂಗೇರಿ, ಈರನಗೆರೆ ಹಾಗೂ ಗುಂಡು ಬದನೆ ಬೆಳೆಯಲು ರೈತರು ಒಲವು ತೋರಿದ್ದಾರೆ. ಹಬ್ಬದ ಸಾಲಿನಲ್ಲಿ ಬದನೆಗೆ ಬೇಡಿಕೆ ಇದ್ದರೂ ಗುಣಮಟ್ಟದ ಕೊರತೆಯಿಂದ ಕೊಯ್ಲು ಮಾಡದೆ ತಾಕಿನಲ್ಲಿ ಬಿಡಲಾಗಿದೆ.

ಈಚಿಗೆ ಬದನೆ ತಾಕಿನಲ್ಲಿ ಹೊಲದಲ್ಲಿ ನೀರು ನಿಂತು, ತೇವಾಂಶ ಹೆಚ್ಚಳವಾಗಿದೆ. ಕುಡಿ ಮತ್ತು ಕಾಯಿ ಕೊರೆಯುವ ಹಾವಳಿಯಿಂದ ಬದನೆ ಕೊಳೆಯುತ್ತಿದೆ. ಕಾಯಿ ಹಸಿರು ಬಣ್ಣದಿಂದ ಹಳದಿ ವರ್ಣಕ್ಕೆ ತಿರುಗಿದೆ. ನುಸಿ ಪೀಡಿಯೂ ಗಿಡಕ್ಕೆ ಆವರಿಸಿದ್ದು ಬೂದಿರೋಗ, ನಂಜುರೋಗ, ಕೊಳೆರೋಗ ಕಾಣಿಸಿಕೊಂಡಿದೆ ಎಂದು ಬೆಳೆಗಾರ ಅಂಬಳೆ ಮಾದಪ್ಪ ಹೇಳಿದರು.

ADVERTISEMENT

ಮಾರುಕಟ್ಟೆಯಲ್ಲಿ ನೇರಳೆ ವರ್ಣದ ಗುಂಡು ಬದನೆಗೆ ಇರುವಷ್ಟು ಬೆಲೆ ಉದ್ದ ಬದನೆಗೆ ಇಲ್ಲ. ಮಳೆಗಾಲದಲ್ಲಿ ಬೇಡಿಕೆಯೂ ಇಲ್ಲದಾಗಿದೆ. ಬಿಟ್ಟುಬಿಟ್ಟು ಮಳೆ ಸುರಿಯುವುದರಿಂದ ಬದನೆ ತಾಕಿನ ನಿರ್ವಹಣೆಯೂ ವೆಚ್ಚದಾಯಕ. ಕಟಾವು ಮತ್ತು ಸಾಗಣೆ ವೆಚ್ಚವೂ ಏರುತ್ತದೆ. ಮತ್ತೆ ಕಾಯಿ ರೋಗ ಪೀಡಿತವಾದರೆ ಮಾರುಕಟ್ಟೆಯಲ್ಲಿ ಧಾರಣೆ ಕುಸಿಯಲಿದೆ ಎನ್ನುತ್ತಾರೆ ರೈತರು.

ಬದನೆಯನ್ನು ಎಲ್ಲ ತೆರನಾದ ಮಣ್ಣಿನಲ್ಲಿ ಬೆಳೆಯಬಹುದು. ಈ ತರಕಾರಿ ಹೆಚ್ಚಿನ ಜೀವಸತ್ವ ಇರುವುದರಿಂದ ಮಧುಮೇಹಿಗಳು ಇಷ್ಟಪಟ್ಟು ಕೊಳ್ಳುತ್ತಾರೆ. ಸ್ಥಳೀಯ ಮಾರಾಟಗಾರರು ಕೃಷಿಕರಿಂದ ನೇರವಾಗಿ ಕೊಳ್ಳುತ್ತಾರೆ. ಮೇ-ಜೂನ್ ಸಮಯದಲ್ಲಿ ನಾಟಿ ಮಾಡಿದ ಬೆಳೆ ಮಳೆ ಮತ್ತು ಶೀತಕ್ಕೆ ಸಿಲುಕುವುದರಿಂದ, ರೋಗ ಮತ್ತು ಕೀಟ ಸಮಸ್ಯೆ ಹೆಚ್ಚು. ಹಾಗಾಗಿ, ತೇವಾಂಶ ಹೆಚ್ಚು ಇದ್ದಾಗ ಬದನಗೆ ಔಷಧೋಪಚಾರ ಮಾಡಿ ಬೆಳೆ ರಕ್ಷಿಸಿಕೊಳ್ಳಬೇಕು ಎನ್ನುತ್ತಾರೆ ಕೃಷಿ ತಜ್ಞರು.

ಜೈವಿಕ ವಿಧಾನದಿಂದ ನಿಯಂತ್ರಿಸಿ:

ಕುಡಿ ಮತ್ತು ಕಾಯಿ ಕೊರೆಯುವ ಹುಳುಗಳು ಶೀತದ ಸಂದರ್ಭ ಹೆಚ್ಚು ಕಾಡುತ್ತದೆ. ಮರಿಹುಳು ಎಲೆಯ ದೇಟು ಹಾಗೂ ಮಧ್ಯದಲ್ಲಿ ಸೇರಿ ಕೊರೆದು ತಿನ್ನುತ್ತವೆ. ಇದರಿಂದ ಕುಡಿ ಜೋತು ಬೀಳುತ್ತದೆ. ನಂತರ ಕಾಯಿ ಕೊರೆದು ಒಳಸೇರಿ ತಿನ್ನುತ್ತದೆ. ಕೀಟ ಹಾವಳಿ ತಪ್ಪಿಸಲು ಜೈವಿಕ ವಿಧಾನ ಮತ್ತು ಔಷಧ ಸಿಂಪಡಣೆ ಮಾಡಿ ನಿರ್ವಹಿಸಬಹುದು. ನಾಟಿ ಸಮಯದಲ್ಲಿ ಬೇವಿನ ಹಿಂಡಿ ಸೇರಿಸಿ ಸಾವಯವ ವಿಧಾನಗಳಿಂದ ಬೆಳೆ ರಕ್ಷಿಸಿಕೊಳ್ಳಬಹುದು. ಜೇಡ ನುಸಿ ಎಲೆಯ ಕೆಳ ಭಾಗ ಸೇರಿ ರಸ ಹೀರುತ್ತವೆ. ಎಲೆ ಹಳದಿಯಾಗಿ ಕೆಳಗೆ ಬೀಳುತ್ತದೆ. ರೈತರು ಬಾಧಿತ ಗಿಡದ ಭಾಗವನ್ನು ತಂದು ಔಷಧೋಪಚಾರ ಮಾಡಬೇಕು. ಭೂಮಿಯಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಜಿ.ಎಸ್.ರಾಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.